ಹೊಸದಿಲ್ಲಿ: ದೀಪಗಳ ಹಬ್ಬ ದೀಪಾವಳಿಯನ್ನು ವಾಯು ಮಾಲಿನ್ಯ ರಹಿತವಾಗಿ ಆಚರಿಸಲು ಹಸಿರು ಪಟಾಕಿಯನ್ನು ಪರಿಚಯಿಸಲಾಗಿದೆ. ಕಳೆದ ವರ್ಷವೇ ಇದನ್ನು ಪರಿಚಯಿಸಲಾಗಿದ್ದರೂ, ಪೂರ್ವ ಸಿದ್ಧತೆಯ ಕೊರತೆಯಿಂದ ಮಾರುಕಟ್ಟೆಗೆ ಬಂದಿಲ್ಲ. ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಿಎಸ್‌ಐಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್) ಇದನ್ನು ಪರಿಚಯಿಸಿದೆ. ಕಳೆದ ವರ್ಷವೇ ದೇಶದಲ್ಲಿ ಹಸಿರು ಪಟಾಕಿ ಪರಿಚಯಿಸಲಾಗಿದ್ದರೂ ಮಾರುಕಟ್ಟೆಗೆ ಪೂರ್ಣ ಇನ್ನೂ ಬಂದಿಲ್ಲ.
ಏನಿದು ಹಸಿರು ಪಟಾಕಿ ?
ಕಡಿಮೆ ಶಬ್ದ ಮತ್ತು ಕಡಿಮೆ ಹೊಗೆ ಹೊಂದಿರುವ ಈ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ. ಸಾಮಾನ್ಯ ಪಟಾಕಿಗೆ ಹೋಲಿಸಿದರೆ ಇದು ಶೇ.30 ರಷ್ಟು ಕಡಿಮೆ ಮಾಲಿನ್ಯ ಉಂಟುಮಾಡುತ್ತದೆ. ನೆಲಚಕ್ರ, ಹೂ ಬುಟ್ಟಿ, ನಕ್ಷತ್ರ ಕಡ್ಡಿ ಮೊದಲಾದ ಹಸಿರು ಪಟಾಕಿಗಳನ್ನು ಸಿಎಸ್‌ಐಆರ್ ಬಿಡುಗಡೆ ಮಾಡಿದೆ. ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯದ ಪ್ರಮಾಣ ಪ್ರತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಹಸಿರು ಪಟಾಕಿಗಳ ಖರೀದಿಯನ್ನು ಪ್ರೋತ್ಸಾಹಿಸಲಾಗುತ್ತಿದೆ.
ಇನ್ನೂ ಬಂದಿಲ್ಲ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಕಳೆದ ವರ್ಷವೇ ಹಸಿರು ಪಟಾಕಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿತ್ತು. ಆದರೆ ಇದರ ಮೇಲೆ ಅಧ್ಯಯನಗಳು ನಡೆಯುತ್ತಿದ್ದ ಕಾರಣ ಬಿಡುಗಡೆ ಸಾಧ್ಯವಾಗಿರಲಿಲ್ಲ. ಈ ದೀಪಾವಳಿಗೆ ಕಡಿಮೆ ವಾಯುಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಬಿಡುಗಡೆಗೊಳಿಸಲಾಗಿದೆ. ದೀಪಾವಳಿಗೆ ಕೆಲವೇ ದಿನವಿದ್ದರೂ ಈ ಬಗೆಯ ಪಟಾಕಿಗಳು ಮಾರುಕಟ್ಟೆಯಲ್ಲಿ ಕಂಡು ಬರುತ್ತಿಲ್ಲ. ಹೊಸ ದಿಲ್ಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪಟಾಕಿ ಬಿಡುಗಡೆ ಮಾಡಿದ್ದರೂ ಮಾರುಕಟ್ಟೆಗೆ ಬಂದಿಲ್ಲ.
ಈ ಬಾರಿ ಹಳೆ ಪಟಾಕಿಯೇ ಗತಿ
ದೀಪಾವಳಿಗೆ ಎರಡು ದಿನಗಳ ಮುನ್ನ ಸರ್ವೋಚ್ಚ ನ್ಯಾಯಾಲಯದಲ್ಲಿ ಹಸಿರು ಪಟಾಕಿಗೆ ಸಂಬಂಧಿಸಿ ಅರ್ಜಿಯೊಂದು ವಿಚಾರಣೆಯಾಗಲಿದೆ. ಅಲ್ಲಿ ದೊರೆಯುವ ನಿರ್ದೇಶನಗಳು ಈ ಬಾರಿಯ ದೀಪಾವಳಿಯ ಗಮ್ಮತ್ತನ್ನು ನಿರ್ಧರಿಸಲಿದೆ.
ಗೊಂದಲದಲ್ಲಿ ಅಂಗಡಿ ಮಾಲಕರು
ಹಸಿರು ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೆ ಸಾಮಾನ್ಯ ಪಟಾಕಿಗಳ ಬೇಡಿಕೆ ಕಡಿಮೆಯಾಗಳಿದೆ. ಹಬ್ಬಕ್ಕೆ ಕೆಲವೇ ದಿನಗಳು ಇರುವ ಕಾರಣ ಈ ಹಿಂದೆ ಇದ್ದ ಪಟಾಕಿಗಳನ್ನು ಮತ್ತೆ ಕಾರ್ಖಾನೆಗಳಿಂದ ಕೊಂಡುಕೊಂಡು ಮಾರಲು ಸಮಯವಿಲ್ಲ.
ಎಲ್ಲಿಂದ ಹಸಿರು ಪಟಾಕಿ
ತಮಿಳುನಾಡಿನ ಶಿವಕಾಶಿ ಕಾರ್ಖಾನೆಗಳಿಂದಲೇ ಹಸಿರು ಪಟಾಕಿ ಉತ್ಪಾದನೆಯಾಗಲಿದೆ. ಪೊಟಾಶಿಯಂ, ನೈಟ್ರೇಟ್ ಮತ್ತು ಝಿಯೋಲೇಟ್ ಅನ್ನು ಬಳಸಿ ಈ ಪಟಾಕಿ ತಯಾರಿಸಲಾಗುತ್ತಿದೆ. ಇಲ್ಲಿ ಅಪಾಯಕಾರಿ ಬೇರಿಯಂ ನೈಟ್ರೇಟ್ ಬಳಸಲಾಗುತ್ತಿಲ್ಲ.