ಹೊಂಡುರಸ್ : ಹೊಂಡುರಸ್ ಮತ್ತು ಅದರಂತಿರುವ ಇನ್ನೂ ಕೆಲವು ಅಭಿವೃದ್ಧಿ ಹೊಂದದ ದೇಶಗಳ ಪಾಲಿಗೆ ಕೋವಿಡ್ ವೈರಸ್ ವಿರುದ್ಧ ಹೋರಾಟ ಎಂದರೆ ಇನ್ನೊಂದು ಸಾಂಕ್ರಾಮಿಕ ರೋಗದ ವಿರುದ್ಧ ನಡೆಸುತ್ತಿರುವ ಹೋರಾಟವಷ್ಟೆ. ಪ್ರತಿವರ್ಷ ಈ ದೇಶಗಳು ಒಂದಲ್ಲ ಒಂದು ವೈರಸ್ ವಿರುದ್ಧ ಹೋರಾಡುತ್ತಲೇ ಇವೆ. ಕೋವಿಡ್ ಈ ಸಾಲಿಗೆ ಇನ್ನೊಂದು ಸೇರ್ಪಡೆಯಷ್ಟೆ.
ಕಳೆದ ವರ್ಷ ಹೊಂಡುರಸ್‌ನಲ್ಲಿ ಡೆಂಗ್ಯೂ ಯಾವ ಪರಿ ಹಾವಳಿ ಇಟ್ಟಿತ್ತು ಎಂದರೆ 1 ಲಕ್ಷಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು ಹಾಗೂ 200 ಮಂದಿ ಅಸುನೀಗಿದ್ದರು. ಈ ವರ್ಷ ಸೊಳ್ಳೆ ಯಿಂದ ಹರಡುವ ಇನ್ನೊಂದು ರೋಗದ ಹಾವಳಿ ಶುರುವಾಗಿತ್ತು. ಅದನ್ನು ನಿಯಂತ್ರಣಕ್ಕೆ ತರುತ್ತಿದ್ದಂತೆಯೇ ಕೋವಿಡ್ ವಕ್ಕರಿಸಿತು. ಹಣ ಮತ್ತು ಸುಸಜ್ಜಿತ ವೈದ್ಯಕೀಯ ಸಿಬಂದಿಯ ತೀವ್ರ ಕೊರತೆಯಿರುವ ನಮ್ಮ ದೇಶ ಹೀಗೆ ಸರಣಿಯಾಗಿ ಬರುವ ಸಾಂಕ್ರಾಮಿಕ ಕಾಯಿಲೆಗಳನ್ನು ಹೇಗೆ ಎದುರಿಸುವುದು ಎನ್ನುತ್ತಾರೆ ದೇಶದ ಮುಖ್ಯ ಆರೋಗ್ಯಾಧಿಕಾರಿ ಡಾ| ಡಿನೊರ ನೊಲಸ್ಕೊ. ಕೊರೊನ ವೈರಸ್ ಕೆಲವು ದೇಶಗಳ ಬೊಕ್ಕಸವನ್ನು ಬರಿದು ಮಾಡಿರುವುದು ಮಾತ್ರವಲ್ಲ, ಆರೋಗ್ಯ ರಕ್ಷಣಾ ವಲಯವನ್ನೂ ಗುಡಿಸಿ ಗುಂಡಾಂತರ ಮಾಡಿದೆ. ಹಿಂದುಳಿದಿರುವ ಕೆಲವು ದೇಶಗಳು ಔಷಧಿ ಮಾತ್ರವಲ್ಲದೆ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳಿಗಾಗಿಯೂ ಬೇರೆ ದೇಶಗಳ ಮುಂದೆ ಅಂಗಲಾಚುವ ಪರಿಸ್ಥಿತಿ ಬಂದಿದೆ.
ಇಂಡೋನೇಷ್ಯಾ, ಆಫ್ರಿಕ ಮತ್ತಿತರ ದೇಶಗಳಲ್ಲಿ ಡೆಂಗೆ, ಕಾಮಾಲೆ, ಕಾಲರಾ, ದಡಾರ, ಎಬೋಲ ಮತ್ತಿತರ ಸಾಂಕ್ರಾಮಿಕ ಕಾಯಿಲೆಗಳು ಪ್ರತಿ ವರ್ಷ ವಕ್ಕರಿಸುವ ಮಾರಿಗಳು. ನೈರ್ಮಲ್ಯದ ಕೊರತೆ, ಸುಸಜ್ಜಿತ ಆರೋಗ್ಯ ಸೇವಾ ಕ್ಷೇತ್ರ ಇಲ್ಲದೆ ಇರುವುದು, ಕುಡಿಯುವ ನೀರಿನ ಅಲಭ್ಯತೆ ಇವೇ ಮುಂತಾದ ಕಾರಣಗಳಿಂದ ದಾರಿದ್ರ್ಯದಲ್ಲಿ ಮುಳುಗಿರುವ ಈ ದೇಶಗಳಿಗೆ ಸಾಂಕ್ರಾಮಿಕ ಕಾಯಿಲೆಗಳು ಶಾಪವಾಗಿ ಪರಿಣಮಿಸಿವೆ.
ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಮತ್ತಿತರ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳು ಒದಗಿಸುತ್ತಿರುವ ನೆರವುಗಳು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಈ ದೇಶಗಳ ಬಹುಪಾಲ ಸಂಪತ್ತು ಪೋಲಿಯೊ, ದಡಾರ, ಟೈಫಾಯ್ಡ, ಕಾಮಾಲೆಯಂಥ ರೋಗಗಳ ವಿರುದ್ಧ ಹೋರಾಡುವುದಕ್ಕೆ ಖರ್ಚಾಗುತ್ತಿದೆ. ಈ ವರ್ಷ ಕೋವಿಡ್ ನಿಯಂತ್ರಿಸಲು ಲಾಕ್‌ಡೌನ್ ಜಾರಿಗೊಳಿಸಿದ ಬಳಿಕವಂತೂ ತೃತೀಯ ಜಗತ್ತಿನ ಈ ದೇಶಗಳು ಅಕ್ಷರಶಃ ದಿವಾಳಿಯಾಗಿವೆ. ಯಾವ ದೇಶದಲ್ಲೂ ಸಂಪನ್ಮೂಲ ಇಲ್ಲ. ಎಲ್ಲದಕ್ಕೂ ವಿಶ್ವಸಂಸ್ಥೆಯ ಮತ್ತು ವಿಶ್ವದ ಸಶಕ್ತ ದೇಶಗಳಿಗೆ ಮೊರೆ ಹೋಗುವ ಅನಿವಾರ್ಯತೆ. ”
ಕೆಲವು ಕಡೆಗಳಲ್ಲಿ ಪೋಲಿಯೊ ಲಸಿಕೆ ನೀಡಲು ನಿಯೋಜಿಸಲ್ಪಟ್ಟ ಆರೋಗ್ಯ ಕಾರ್ಯಕರ್ತರೇ ಕೋವಿಡ್ ವಿರುದ್ಧ ಹೋರಾಡುವ ಯೋಧರಾಗಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಹೊಂಡುರಸ್‌ನದ್ದು. ಕೋವಿಡ್ ಈ ದೇಶಗಳನ್ನು ಯಾವ ರೀತಿಯಲ್ಲೆಲ್ಲ ಕಾಡಬಹುದೋ ಅಷ್ಟು ಕಾಡಿಯಾಗಿದೆ. ಇನ್ನು ಜನರಲ್ಲಿ ಹೋರಾಡುವ ಶಕ್ತಿ ಉಳಿದಿಲ್ಲ. ಎಲ್ಲ ದೇಶಗಳು ಮಂಡಿಯೂರಿಯಾಗಿವೆ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕ ಸಮನ್ವಯಕರಾಗಿರುವ ಡಾ| ರಿಚರ್ಡ್ ಮಿಹಿಗೊ.
2019ರಲ್ಲಿ ಮಧ್ಯ ಅಮೆರಿಕದಲ್ಲಿ ಸಂಭವಿಸಿದ ಒಟ್ಟು ಡೆಂಗೆ ಸಾವುಗಳಲ್ಲಿ ಹೊಂಡುರಸ್‌ನಲ್ಲೇ ಶೇ. 61 ಮಂದಿ ಅಸುನೀಗಿದ್ದಾರೆ. ಕ್ರಿಮಿನಲ್ ಗ್ಯಾಂಗ್‌ಗಳ ಅಡ್ಡೆ ಯಂತಿರುವ ಕೊರ್ಟೆಸ್‌ನಂಥ ಪ್ರಾಂತ್ಯಗಳಲ್ಲಿ ಜನರು ಹುಳುಗಳಂತೆ ವಿಲಿವಿಲಿ ಒದ್ದಾಡಿ ಸತ್ತಿದ್ದಾರೆ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ಗೆ 2019ರಲ್ಲಿ ಡೆಂಗೆಯೇ ಒಂದು ಶಾಪವಾಗಿತ್ತು ಎಂದು ವಿವರಿ ಸುತ್ತಾರೆ ಡಾ| ಮಿಹಿಗೊ.