ಕೇಂದ್ರ ಕ್ರೀಡಾ ಸಚಿವಾಲಯ 2024ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರ ಯಾದಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಸಾಧನೆಗೈಯುವ ಮೂಲಕ ದೇಶದ ಹಿರಿಮೆ-ಗರಿಮೆಯನ್ನು ಎತ್ತಿಹಿಡಿದಿದ್ದ ನಾಲ್ವರು ಪ್ರತಿಭಾವಂತ ಕ್ರೀಡಾತಾರೆಗಳಾದ ಶೂಟರ್ ಮನು ಭಾಕರ್, ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್, ಭಾರತೀಯ ಪುರುಷರ ಹಾಕಿ ತಂಡದ ಕಪ್ತಾನ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾ ಆ್ಯತ್ಲೀಟ್ ಪ್ರವೀಣ್ ಕುಮಾರ್ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿರುವ “ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ’ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸರಕಾರ, ಅರ್ಹ ಕ್ರೀಡಾ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಆ ಕ್ರೀಡಾ ಪ್ರತಿಭೆಗಳನ್ನು ಗೌರವಿಸುವ ಮೂಲಕ ಪ್ರಶಸ್ತಿಯ ಘನತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಈ ಬಾರಿ 32 ಮಂದಿ ಕ್ರೀಡಾಳುಗಳಿಗೆ “ಅರ್ಜುನ ಪ್ರಶಸ್ತಿ’, ಕ್ರೀಡಾ ತರಬೇತುದಾರರಿಗೆ ನೀಡಲಾಗುವ “ದ್ರೋಣಾಚಾರ್ಯ ಪ್ರಶಸ್ತಿ’ಯನ್ನು ಮೂವರಿಗೆ, ಇಬ್ಬರು ಕ್ರೀಡಾಪಟುಗಳಿಗೆ ಜೀವಮಾನ ಸಾಧನೆಗಾಗಿ “ಅರ್ಜುನ ಪ್ರಶಸ್ತಿ’ ಮತ್ತು ಇಬ್ಬರು ಕ್ರೀಡಾ ತರಬೇತುದಾರರಿಗೆ ಜೀವಮಾನ ಸಾಧನೆಗಾಗಿ “ದ್ರೋಣಾಚಾರ್ಯ ಪ್ರಶಸ್ತಿ’ಯನ್ನು ಪ್ರಕಟಿಸಲಾಗಿದೆ. ಈ ಬಾರಿಯ ಕ್ರೀಡಾ ಪ್ರಶಸ್ತಿ ಪುರಸ್ಕೃತರಲ್ಲಿ ಬಹುತೇಕರು ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಅಸಾಧಾರಣ ಸಾಧನೆ ತೋರಿ ದೇಶಕ್ಕೆ ಪದಕಗಳನ್ನು ತಂದುಕೊಟ್ಟವರಾಗಿದ್ದಾರೆ. “ಅರ್ಜುನ ಪ್ರಶಸ್ತಿ’ ಪುರಸ್ಕೃತರ ಪೈಕಿ 17 ಮಂದಿ ಪ್ಯಾರಾಲಿಂಪಿಯನ್‌ಗಳಾಗಿದ್ದರೆ, ಜೀವಮಾನ ಸಾಧನೆಗಾಗಿನ ಪ್ರಶಸ್ತಿಗಳಲ್ಲೂ ತಲಾ ಒಬ್ಬರು ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗೆ ಪ್ಯಾರಾಲಿಂ ಪಿಯನ್‌ಗಳು ಪಾತ್ರರಾಗಿರುವುದು ವಿಶೇಷ.
ಕ್ರೀಡಾ ಪ್ರಶಸ್ತಿ ಪುರಸ್ಕೃತರ ಯಾದಿಯನ್ನು ಗಮನಿಸಿದರೆ ಪ್ರಶಸ್ತಿ ಆಯ್ಕೆ ಮಂಡಳಿ ಬಹುತೇಕ ಒಲಿಂಪಿಕ್ಸ್ ಸಾಧನೆಯನ್ನೇ ಪ್ರಮುಖ ಮಾನದಂಡವಾಗಿರಿಸಿರುವುದು ಸುಸ್ಪಷ್ಟ. ಆಯ್ಕೆ ಸಮಿತಿ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಮನು ಭಾಕರ್ ಮತ್ತು ಗುಕೇಶ್ ಅವರ ಹೆಸರುಗಳಿರಲಿಲ್ಲ. ಈ ಬಗ್ಗೆ ಕ್ರೀಡಾ ವಲಯದಲ್ಲಿ ವ್ಯಾಪಕ ವಿರೋಧ, ಟೀಕೆಗಳು ವ್ಯಕ್ತವಾಗಿದ್ದವಲ್ಲದೆ ಮನು ಭಾಕರ್ ಕೂಡ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ಕೊನೆಗೂ ಕೇಂದ್ರ ಕ್ರೀಡಾ ಸಚಿವಾಲಯ ತನ್ನ ಅಧಿಕಾರವನ್ನು ಬಳಸಿಕೊಂಡು ಈ ಇಬ್ಬರಿಗೂ ಖೇಲ್‌ರತ್ನ ಪ್ರಶಸ್ತಿ ಘೋಷಿಸುವ ಮೂಲಕ ಈ ಎಲ್ಲ ಗೊಂದಲ, ವಿವಾದಗಳಿಗೆ ತೆರೆ ಎಳೆದಿದೆ. ಆ ಮೂಲಕ ನೈಜ ಪ್ರತಿಭೆಗಳಿಗೆ ನ್ಯಾಯಯುತವಾಗಿಯೇ ದೇಶದ ಅತ್ಯುನ್ನತ ಕ್ರೀಡಾ ಗೌರವ ಸಂದಿದೆ.
ದೇಶ ಮತ್ತೂಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಒಲಿಂಪಿಕ್ಸ್ ಪದಕ ವಿಜೇತರ ಶ್ರಮ ಮತ್ತು ಸಾಧನೆಯನ್ನು ಗುರುತಿಸಿ, ಗೌರವಿಸುವ ಮೂಲಕ ಸರಕಾರ ಈ ಕ್ರೀಡಾ ಪ್ರತಿಭೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಜತೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯುವ ಪ್ರತಿಭಾವಂತರು ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ತೋರಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಸಾಧನೆಗೈಯಲು ಈ ಪ್ರಶಸ್ತಿ, ಪುರಸ್ಕಾರಗಳು ಪ್ರೇರಣೆಯಾಗಲಿವೆ.
ಕಳೆದೊಂದು ದಶಕದಿಂದೀಚೆಗೆ ಕೇಂದ್ರ ಸರಕಾರದ ನಿರಂತರ ಪ್ರಯತ್ನದ ಫಲವಾಗಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಲಾರಂಭಿಸಿದ್ದು, ಪ್ರಮುಖ ಕ್ರೀಡಾಕೂಟಗಳಲ್ಲಿ ಪದಕ ಪಟ್ಟಿಯಲ್ಲಿ ದೇಶದ ಹೆಸರು ಕಾಣಿಸಿಕೊಳ್ಳತೊಡಗಿರುವುದು ದೇಶವಾಸಿಗಳೆಲ್ಲರಿಗೂ ಹೆಮ್ಮೆ ತರುವ ವಿಷಯ. ಈ ಬಾರಿಯ ಕ್ರೀಡಾ ಪ್ರಶಸ್ತಿ ಘೋಷಣೆಯ ಸಂದರ್ಭದಲ್ಲೂ ಸರಕಾರ ದೇಶದ ಕ್ರೀಡಾ ಭವಿಷ್ಯದತ್ತ ದೃಷ್ಟಿ ಹರಿಸಿರುವುದು ಆಶಾದಾಯಕ ಬೆಳವಣಿಗೆಯೇ ಸರಿ.