Advertisement

ಬೆಳಗಾವಿಯಲ್ಲಿ ದೇಶದ ಮೊದಲ ಸೆನ್ಸಾರ್‌ ಕಸದ ತೊಟ್ಟಿ! ವಿಶೇಷತೆ ಏನು?

12:03 AM Dec 10, 2022 | Team Udayavani |

ಬೆಳಗಾವಿ: ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಪರಿಸರ ಹಾಳಾಗುತ್ತಿರುವುದನ್ನು ತಡೆಯಲು ಶಾಸಕ ಅಭಯ ಪಾಟೀಲ್‌ ಅವರು ದೇಶದಲ್ಲೇ ಮೊದಲ ಸೆನ್ಸಾರ್‌ ತಂತ್ರಜ್ಞಾನ ಆಧಾರಿತ ಭೂಗತ ಕಸದ ತೊಟ್ಟಿಗಳನ್ನು ಬೆಳಗಾವಿಯ ತಮ್ಮ ಕ್ಷೇತ್ರದಲ್ಲಿ ಅಳವಡಿಸಿದ್ದಾರೆ.

Advertisement

ಬೆಳಗಾವಿ ಮಹಾನಗರ ಪಾಲಿಕೆಯ ದಕ್ಷಿಣ ಮತ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲಿ ಅಂಡರ್‌ ಗ್ರೌಂಡ್‌ ಡಸ್ಟ್‌ಬಿನ್‌ (ಭೂಗತ ಕಸದ ತೊಟ್ಟಿ)ಯನ್ನು ಅಳವಡಿಸಿದ್ದಾರೆ. ಒಟ್ಟು 24 ಕಸದ ತೊಟ್ಟಿಗಳಿಗೆ ಆರ್ಡರ್‌ ಮಾಡಲಾಗಿದ್ದು, 18 ತೊಟ್ಟಿ ಗಳು ಕಾರ್ಯ ನಿರ್ವಹಿಸುತ್ತಿವೆ. ಸಂಪೂರ್ಣ ಓವರ್‌ಹೆಡ್‌ ಕವರ್‌ನೊಂದಿಗೆ ಅಳವಡಿಸಿರುವ ಈ ತೊಟ್ಟಿಗಳ ಬಾಗಿಲು ತೆರೆದು ಕಸ ಚೆಲ್ಲಿದರಾಯಿತು.

ಗುಜರಾತ್‌ನ ಸೂರತ್‌ ಸಹಿತ ಹಲವು ನಗರದಲ್ಲಿ ಇಂಥ ಭೂಗತ ಕಸದ ತೊಟ್ಟಿಗಳನ್ನು ಅಳವಡಿಸಲಾ ಗಿದೆ. ಅಲ್ಲಿಗೆ ತೆರಳಿದ್ದ ಪಾಟೀಲ್‌ ಅವರು ಬೆಳಗಾವಿಯಲ್ಲೂ ಅಳವಡಿಸಲು ತೀರ್ಮಾನಿಸಿದರು. ಆದರೆ ಇದಕ್ಕೆ ಸೆನ್ಸಾರ್‌ ಸೇರಿಸುವ ಆಲೋಚನೆಯಿಂದ ಸೆನ್ಸಾರ್‌ ಆಧಾರಿತ ತೊಟ್ಟಿಗಳನ್ನು ಅಳವಡಿಸಿದ್ದಾರೆ.

ಹೇಗಿದೆ ಈ ತೊಟ್ಟಿ?
8 ಅಡಿ ಭೂಮಿಯೊಳಗೆ ಒಂದು ಅಡಿಯ ಕಾಂಕ್ರೀಟ್‌ ಹಾಕಲಾಗಿದೆ. 6ರಿಂದ 7 ಅಡಿ ಆಳದಲ್ಲಿ ಈ ತೊಟ್ಟಿ ಅಳವಡಿಸಲಾಗಿದೆ. ಇದರ ಮೇಲೆ ಅರ್ಧ ಅಡಿ ಎತ್ತರದ ಕಟ್ಟೆ ಕಟ್ಟಲಾಗಿದೆ. 2.5 ಅಡಿ ಎತ್ತರದ ಕಾಲಂ ಮಾಡಿ ಒಂದೂವರೆ ಅಡಿಯ ವೃತ್ತಾಕಾರದ ಡಬ್ಬಿ ಇರುತ್ತದೆ. ಒಂದು ಡಸ್ಟ್‌ಬಿನ್‌ 310 ಕ್ಯೂಬಿಕ್‌ ಮೀಟರ್‌ ಸಾಮರ್ಥ್ಯ ಇದೆ. ಇದರಲ್ಲಿ ಸಂಗ್ರಹವಾದ ಕಸವನ್ನು ವಿಲೇವಾರಿ ಮಾಡಲು 83 ಲಕ್ಷ ರೂ. ಮೌಲ್ಯದ ಒಂದು ವಾಹನ ಇಡಲಾಗಿದೆ. ಎಲ್ಲ 24 ಡಸ್ಟ್‌ಬಿನ್‌ಗಳಲ್ಲಿ ಕಸವನ್ನು ಈ ವಾಹನದಿಂದ ವಿಲೇವಾರಿ ಮಾಡಬಹುದಾಗಿದೆ. ಪ್ರತಿ ಕಸದ ತೊಟ್ಟಿಗೆ 6.50 ಲಕ್ಷ ರೂ. ವೆಚ್ಚವಾಗಿದೆ. ಕಸ ವಿಲೇವಾರಿ ಮಾಡುವ ವಾಹನದಲ್ಲಿ ರಿಮೋಟ್‌ ಕಂಟ್ರೋಲ್‌ ಮೂಲಕ ಕಸ ಎತ್ತಲಾಗುತ್ತದೆ.

ಸಂದೇಶ ರವಾನೆ
ಸಾರ್ವಜನಿಕರು ಇದರಲ್ಲಿ ಕಸ ತಂದು ಹಾಕಿದಾಗ ಶೇ.70ರಷ್ಟು ತೊಟ್ಟಿ ತುಂಬುತ್ತಿದ್ದಂತೆ ಸೆನ್ಸಾರ್‌ ಮೂಲಕ ಚಾಲಕನ ಮೊಬೈಲ್‌ಗೆ ಸಂದೇಶ ಹೋಗುತ್ತದೆ. ಶೇ.80ರಷ್ಟು ಕಸ ಸಂಗ್ರಹವಾದರೆ ಆಯಾ ವಾರ್ಡ್‌ನ ಸದಸ್ಯರು ಹಾಗೂ ಹೆಲ್ತ್‌ ಇನ್‌ಸ್ಪೆಕ್ಟ‌rರ್‌ಗೆ, ಶೇ.90ರಷ್ಟು ಸಂಗ್ರಹವಾದರೆ ಸೆಕ್ಷನ್‌ ಆಫೀಸರ್‌ ಹಾಗೂ ಶೇ.100ರಷ್ಟು ಸಂಗ್ರಹವಾದರೆ ಪಾಲಿಕೆ ಆಯುಕ್ತರ ಮೊಬೈಲ್‌ಗೆ ಸಂದೇಶ ರವಾನೆ ಆಗುತ್ತದೆ. ಸ್ಮಾರ್ಟ್‌ ಸಿಟಿಯ ಕಮಾಂಡ್‌ ಸೆಂಟರ್‌ಗೂ ಸಂದೇಶ ಹೋಗುತ್ತದೆ.

Advertisement

ವಿಶೇಷತೆ ಏನು?
– ತೊಟ್ಟಿ ತುಂಬಿದರೆ ಕಾರ್ಪೊರೇಟರ್‌, ಅಧಿ ಕಾರಿಗಳಿಗೆ ಸಂದೇಶ
– ರಿಮೋಟ್‌ ಕಂಟ್ರೋಲ್‌ ಮೂಲಕ ಕಸ ವಿಲೇವಾರಿ
– ದುರ್ವಾಸನೆ ಬೀರದಂತೆ ತೊಟ್ಟಿ ತೊಳೆಯುವ ವ್ಯವಸ್ಥೆ
– ಕಸ ವಿಲೇವಾರಿಗೆ ಅಲಾರಾಂ.
– ಪ್ರತಿ ತೊಟ್ಟಿಗೆ 6.50 ಲ.ರೂ. ವೆಚ್ಚ
– 83 ಲಕ್ಷ ರೂ. ಮೌಲ್ಯದ ವಾಹನ ವ್ಯವಸ್ಥೆ

ಸೆನ್ಸಾರ್‌ ಭೂಗತ ಕಸದ ತೊಟ್ಟಿ ದೇಶದಲ್ಲೇ ಮೊದಲ ಯೋಜನೆ. ಕಸ, ದುರ್ವಾಸನೆಯಿಂದ ಮುಕ್ತಗೊಳಿಸಲು ಹೊಸ ತಂತ್ರಜ್ಞಾನ ಇದಾಗಿದೆ. ತೊಟ್ಟಿಯಲ್ಲಿ ಕಸ ತುಂಬಿದಾಗ ಸಂಬಂ ಧಿಸಿದವರಿಗೆ ಸಂದೇಶ ಬರುತ್ತದೆ. ಶೇ.100ರಷ್ಟು ತೊಟ್ಟಿ ತುಂಬಿದಾಗಲೂ ವಿಲೇವಾರಿ ಮಾಡದಿದ್ದರೆ ನೋಟಿಸ್‌ ಕಳುಹಿಸಿ ದಂಡ ವಿಧಿ ಸಲಾಗುವುದು.
– ಅಭಯ ಪಾಟೀಲ್‌, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ

ನಗರದ ದಕ್ಷಿಣ ಮತಕ್ಷೇತ್ರದಲ್ಲಿ ಸದ್ಯ 18 ಭೂಗತ ಕಸದ ತೊಟ್ಟಿಗಳನ್ನು ಅಳವಡಿಸಲಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಒಂದರಂತೆ ಒಟ್ಟು 24 ಈ ತೊಟ್ಟಿಗಳನ್ನು ಅಳವಡಿಸಲಾಗುವುದು.
– ಹನುಮಂತ ಕಲಾದಗಿ, ಎಇಇ, ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next