ನವದೆಹಲಿ: ದೇಶದ ಅರ್ಥ ವ್ಯವಸ್ಥೆ ಕುಸಿಯುವ ಹಂತದಲ್ಲಿ ಇಲ್ಲ. ಅದು ಅಭಿವೃದ್ಧಿ ಹಂತದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಐದು ಲಕ್ಷಕೋಟಿ ಡಾಲರ್ ಮೌಲ್ಯದ ಅರ್ಥ ವ್ಯವಸ್ಥೆಯನ್ನು ದೇಶ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರ್ಥ ವ್ಯವಸ್ಥೆಯ ಸಾಧನೆಗಳನ್ನು ಹೇಳಿಕೊಂಡ ವಿತ್ತ ಸಚಿವೆ, ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ, ಕಾರ್ಖಾನೆಗಳಲ್ಲಿನ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ, ಹಿಂದಿನ 3 ತಿಂಗಳ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹ 1ಲಕ್ಷ ಕೋಟಿ ರೂ. ದಾಟಿರುವುದೇ ಇದಕ್ಕೆ ಸಾಕ್ಷಿ. ದೇಶದ ಅರ್ಥ ವ್ಯರ್ಥ ವ್ಯವಸ್ಥೆ ತೊಂದರೆಗೆ ಸಿಕ್ಕಿ ಹಾಕಿಕೊಂಡಿಲ್ಲ. ಅದು ಅಭಿವೃದ್ಧಿಯ ಪಥದಲ್ಲಿದೆ ಎಂದಿದ್ದಾರೆ.
“ಜಗತ್ತಿನ ರಾಷ್ಟ್ರಗಳು ಭಾರತದ ಬಗ್ಗೆ ಹೊಂದಿರುವ ದೃಷ್ಟಿಕೋನ ಈಗ ಬದಲಾಗಿದೆ. 2019-20ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ 24.4 ಬಿಲಿಯನ್ ಡಾಲರ್‌ಗಳಷ್ಟು ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದೆ ಎಂದಿದ್ದಾರೆ. ಹಿಂದಿನ ವಿತ್ತೀಯ ವರ್ಷದಲ್ಲಿ 21.2 ಬಿಲಿಯನ್ ಡಾಲರ್ ಇತ್ತು ಎಂದಿದ್ದಾರೆ.
ಚಿದುಗೆ ತಿರುಗೇಟು: ಪರಿಣತರಲ್ಲದೇ ಇರುವವರು ಅರ್ಥ ವ್ಯವಸ್ಥೆಯನ್ನು ನಿಭಾಯಿಸಿದ್ದರಿಂದಲೇ ಅದು ಕುಸಿದು ಹೋಗಿದೆ ಎಂದು ಮಾಜಿ ಸಚಿವ ಪಿ.ಚಿದಂಬರಂ ಟೀಕೆಗೆ ತಿರುಗೇಟು ನೀಡಿರುವ ವಿತ್ತ ಸಚಿವರು, ಯುಪಿಎ ಅವಧಿಯಲ್ಲಿಯೇ ಜಿಡಿಪಿ ಕುಸಿದಿತ್ತು ಎಂದಿದ್ದಾರೆ. 2008-2009ನೇ ಸಾಲಿನಲ್ಲಿ ಶೇ.6.1, 2009-2010ನೇ ಸಾಲಿನಲ್ಲಿ ಶೇ.6.6, 2010-2011ನೇ ಸಾಲಿನಲ್ಲಿ ಶೇ.4.9, 2011-2012ನೇ ಸಾಲಿನಲ್ಲಿ ಶೇ.5.9, 2012-13ನೇ ಸಾಲಿನಲ್ಲಿ ಶೇ.4.9, ಶೇ.2013-14ನೇ ಸಾಲಿನಲ್ಲಿ ಶೇ.4.5ರಲ್ಲಿ ಜಿಡಿಪಿ ಕುಸಿದಿತ್ತು. ಈ ಅಂಶವನ್ನು ಚಿದಂಬರಂ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಮೊದಲಾರ್ಧ ಮುಕ್ತಾಯ:
ಜ.31ರಂದು ಶುರುವಾಗಿದ್ದ ಬಜೆಟ್ ಅಧಿವೇಶನದ ಮೊದಲ ಹಂತ ಮಂಗಳವಾರ ಮುಕ್ತಾಯವಾಗಿದೆ. ಎರಡನೇ ಹಂತದ ಅಧಿವೇಶನ ಮಾ.2ರಿಂದ ಏ.3ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬಜೆಟ್ ಬಗ್ಗೆ ಚರ್ಚೆ ನಡೆದು ಅದನ್ನು ಅನುಮೋದಿಸಲಾಗುತ್ತದೆ.