ಬೆಂಗಳೂರು: ದೇಶದಲ್ಲಿ ಅಧಿಕಾರ ದುರುಪಯೋಗ ನಡೆಯುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆ ಮೂಲಕ ಪ್ರತಿಪಕ್ಷಗಳಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿ ಕತೆ ಏನೇನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿಗೆ ಹೋದ 70% ಜನ ಅಲ್ಲಿ ಸೋತಿದ್ದಾರೆ. ಮುಂದೆ ಹೋಗುವ ಎಲ್ಲರೂ ಸೋಲ್ತಾರೆ. ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜನರನ್ನ ಒಡೆದು ಆಳುವ ಮೂಲಕ ಎತ್ತಿಕಟ್ಟುವ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. ಆದರೇ ಮತದಾರರರ ಮೇಲೂ ಒತ್ತಡದ ತಂತ್ರಗಾರಿಕೆ ಮಾಡಿದರೆ ಇಲ್ಲಿ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪ್ರವಾಹವಾದಾಗ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಹಾರ ನೀಡದೆ ನಿರ್ಲಕ್ಷಿಸಿದರು. ಪ್ರಧಾನಿ ಪ್ರವಾಹ ಸ್ಥಳಕ್ಕೆ ಬರಲೇ ಇಲ್ಲ. ಕೇವಲ ಮಾತಿನ ಭರವಸೆಯಲ್ಲೇ ಕಾಲ ಕಳೆದಿದ್ದಾರೆ. ಸಂತ್ರಸ್ಥರು ಇವತ್ತಿಗೂ ಬೀದಿಯಲ್ಲೇ ಇದ್ದಾರೆ. ಯಡಿಯೂರಪ್ಪ ಮೇಲಿನ ಸಿಟ್ಟನ್ನ ಮೋದಿ ಈ ರೀತಿ ತೋರಿಸಿಕೊಳ್ತಿದ್ದಾರೆ. ಕಲಬುರಗಿಯಲ್ಲಿ ಏರ್ ಪೋರ್ಟ್ ನಿರ್ಮಾಣವಾಗಿ ಎರಡು ವರ್ಷಗಳ ಹಿಂದೆ ಮುಗಿದರೂ ಉದ್ಘಾಟನೆ ಮಾಡಿರಲಿಲ್ಲ.
ಉಡಾನ್ ಯೋಜನೆಯಡಿ ಕ್ರಮಗಳನ್ನೂ ತೆಗೆದುಕೊಂಡಿರಲಿಲ್ಲ. ಸಂಪೂರ್ಣ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಿತ್ತು. ಮೊದಲ ವಿಮಾನ ಹಾರಾಟಕ್ಕೂ ಪ್ರಧಾನಿ ಬರಲಿಲ್ಲ. ಬಂದರೆ ಯಡಿಯೂರಪ್ಪ ಅವರನ್ನು ನೋಡ್ಬೇಕಾಗುತ್ತದೆ ಅಂತ ಬರಲಿಲ್ಲ. ಜೊತೆಗೆ ಜನರಿಗೆ ಹೆದರಿ ಬರಲಿಲ್ಲ. ಜನ ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಈ ಭಾರಿ ಜನ ಅನರ್ಹರನ್ನ ಸೋಲಿಸಬೇಕು. ಮತದಾರರು ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಜಿಡಿಪಿ ದರ ಕುಸಿದಿದೆ. ಇದನ್ನ ಮೇಲಕ್ಕೆತ್ತುವ ಕೆಲಸ ಮಾಡುತ್ತಿಲ್ಲ. ಉದ್ಯೋಗ ಸೃಷ್ಠಿ ಇಲ್ಲ, ಇದೆಲ್ಲವನ್ನೂ ಮುಚ್ಚಿಡುವ ಪ್ರಯತ್ನವನ್ನು ಬಿಜೆಪಿಯವರು ಮಾಡ್ತಿದ್ದಾರೆ. ಇಷ್ಟು ದಿನ ಮಹಾರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯನಾಗಿದ್ದೆ. ಹೀಗಾಗಿ ಇಲ್ಲಿ ಪ್ರಚಾರಕ್ಕೆ ತೊಡಗಲಾಗಲಿಲ್ಲ. ಇಂದು, ನಾಳೆ ಹಲವು ಸಭೆಗಳಲ್ಲಿ ಭಾಗಿಯಾಗುತ್ತೇನೆ. ದೇಶದ ಪರಿಸ್ಥಿತಿಯನ್ನು ಕಾರ್ಯಕರ್ತನಾಗಿ ನಾನು ಜನರಿಗೆ ತಿಳಿಸಬೇಕಾಗಿದೆ ಎಂದರು.