ಮೈಸೂರು: ಭಾರತ ದೇಶವನ್ನು ಬಲಿಷ್ಠಗೊಳಿಸಬೇಕಿದ್ದರೆ ಮಕ್ಕಳ ಸಬಲೀಕರಣದಿಂದ ಮಾತ್ರವೇ ಸಾಧ್ಯ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಅಭಿಪ್ರಾಯಪಟ್ಟರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಗುರುವಾರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ್ದ ಬಾಲ್ಯ ವಿವಾಹ ತಡೆ ಹಾಗೂ ಶಾಲೆ ಕಡೆ ನನ್ನ ನಡೆ, ಮಕ್ಕಳ ಕಾಯ್ದೆಗಳಿಗೆ ಸಂಬಂಧಿಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
2022ರ ವೇಳೆಗೆ ಭಾರತ ಬಲಿಷ್ಠವಾಗಿ ಬೆಳೆಯುತ್ತದೆ ಎನ್ನುತ್ತಾರೆ. ಆದರೆ, ಭಾರತದಲ್ಲಿ ಎಲ್ಲಿಯವರೆಗೆ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹ ಜೀವಾಂತವಾಗಿರುತ್ತದೆಂೋ ಅಲ್ಲಿಯವರಗೆ ಅದು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಶೇ.23 ರಷ್ಟು ಬಾಲ್ಯ ವಿವಾಹವಾಗುತ್ತಿದ್ದು, ಶೇ.4 ರಷ್ಟು ಹೆಣ್ಣು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡುತ್ತಿದ್ದಾರೆ. ಇದರಿಂದಾಗಿ ಆರೋಗ್ಯ ಹಾಗೂ ಶಿಕ್ಷಣ ಮುಂತಾದ ಕ್ಷೇತ್ರದಲ್ಲಿ ಏರುಪೇರು ಆಗಲಿದೆ. ಇದಲ್ಲದೆ ದೇಶದ ಲಿಂಗಾನುಪಾತ ಸಾವಿರ ಪುರುಷರಿಗೆ 909 ಮಹಿಳೆಯರಿದ್ದಾರೆ. ಇದೆಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮಕ್ಕಳಿಗೆ ಶಿಕ್ಷಣ ನೀಡಿ ಅವರ ಸಬಲೀಕರಣ ಮಾಡಬೇಕಿದೆ ಎಂದರು.
ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳ ಸಂಖ್ಯೆ ಕಡಿಮೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳುತ್ತಾರೆ, ಆದರೆ, ಒಮ್ಮೆ ಚಿತ್ರದುರ್ಗದಲ್ಲಿ ಈ ಕುರಿತು ಕೇಳಿದಾಗ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ 73 ಮಕ್ಕಳು ಮಾತ್ರ ಶಾಲೆಯಿಂದ ಹೊರಗೊಳಿದಿದ್ದಾರೆ ಎಂದಿದ್ದರು, ಆದರೆ ಅಲ್ಲಿ ಸಮಿಕ್ಷೆ ಮಾಡಿದಾಗ 700 ಮಕ್ಕಳು ಹೊರಗೊಳಿದಿರುವುದು ಕಂಡುಬಂತು.
ಈ ರೀತಿಯ ಪ್ರಕರಣ ನಮ್ಮಲ್ಲಿ ಹೆಚ್ಚಾಗಿದೆ. ಜಿಲ್ಲಾವಾರು ಶಾಲೆಯಿಂದ ಹೊರಗೊಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸದಸ್ಯ ವೈ.ಮರಿಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೆಶಕಿ ಕೆ.ರಾಧಾ ಉಪಸ್ಥಿತರಿದ್ದರು.