Advertisement

ಕ್ರಾಂತಿಕಾರಿ ಕೃಷಿಕ ಯಶೋಧರ ಕೋಟ್ಯಾನ್‌ ಮಟ್ಟು

10:26 PM Mar 07, 2020 | mahesh |

ಇಚ್ಛಾ ಶಕ್ತಿ ಇದ್ದರೆ ಸಾಧನೆಗೆ ಯಾವತ್ತೂ ಅಡ್ಡಿಯಾಗಲಾರದು. ಆ ನಿಟ್ಟಿನಲ್ಲಿ ಉಡುಪಿಯ ಮಟ್ಟು ಅಂಬಾಡಿಯ ಯಶೋಧರ ಕೋಟ್ಯಾನ್‌ ಅವರ ಸಾಧನೆ ಅನುಕರಣೀಯ. ಅವರು ಸಾಧನೆಗೆ ಕ್ಷೇತ್ರವಾಗಿ ಬಳಸಿಕೊಂಡದ್ದು ಕೃಷಿಯನ್ನು.

Advertisement

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯಶೋಧರ ಕೋಟ್ಯಾನ್‌ ಕೃಷಿಗೆ ಮಾರು ಹೋಗಿದ್ದು, ಈ ಬಾರಿ 20 ಸೆಂಟ್ಸ್‌ ಗದ್ದೆ ಯಲ್ಲಿ ಸುಮೋ ತಳಿಯ ವಾಟರ್‌ ಮೆಲನ್‌ ಬೆಳೆ ಯನ್ನು ಬೆಳೆದಿದ್ದಾರೆ. ಸುಮಾರು 3.5 ಟನ್‌ ಕಲ್ಲಂಗಡಿ ಬೆಳೆ ಪಡೆದ ಸಾಧನೆ ಇವರದ್ದು. ಜತೆಗೆ ಇತರ ಎರವಲು ಪಡೆದ ಗದ್ದೆಯಲ್ಲಿ ಸುಮಾರು 600 ಕಿ. ಲೋ. ಸೌತೆಕಾಯಿ, ಮಿಶ್ರ ಬೆಳೆ ಯಾಗಿ ತರಕಾ ರಿಗಳನ್ನು ಬೆಳೆದಿದ್ದು, 30 ಕೆ.ಜಿ. ಯಷ್ಟು ಅಲಸಂಡೆ, 100 ಕೆ.ಜಿ. ಅಷ್ಟು ಮೂಲಂಗಿ, 40 ಕೆ.ಜಿ.ಗೂ ಅಧಿಕ ಹಾಲು ಬೆಂಡೆಕಾಯಿ ಈ ಬಾರಿಯ ಮಾರುಕಟ್ಟೆ ಕಂಡಿದೆ.

ಮೆಣಸು, ಟೊಮೆಟೋ, ಗೆಣಸು ಕೂಡಾ ಬೆಳೆಯುತ್ತಿದ್ದು, ಹರಿವೆ ಮತ್ತು ನೆಲ ಕಡಲೆ ಬೆಳೆಯೂ ಕಂಡು ಬರುತ್ತಿದೆ. 1 ಎಕರೆ ಪ್ರದೇಶದಲ್ಲಿ ಮಟ್ಟುಗುಳ್ಳವನ್ನು ಬೆಳೆದು ಸಮಗ್ರ ಕೃಷಿಕನಾಗಿ ವರ್ಷವಿಡೀ ಕೃಷಿ ಮಣ್ಣಿನ ನಂಟಿನೊಂದಿಗೆ ಗಾಢವಾದ ಬಾಂಧವ್ಯವನ್ನು ಬೆಸೆದುಕೊಂಡಿದ್ದಾರೆ.

ಮಳೆಗಾಲದಲ್ಲಿ ಮಳೆ ನೀರನ್ನು ಆಶ್ರಯಿಸಿ ಗದ್ದೆಯಲ್ಲಿ ಸಾಂಪ್ರದಾಯಿಕ ಕೃಷಿ ನಡೆಸುವ ಮೂಲಕ ತನ್ನ ಕೃಷಿ ಪ್ರೇಮ ವನ್ನು ಮೆರೆದಿದ್ದಾರೆ. ಕೃಷಿ ಯಿಂದಲೇ ಪತ್ನಿ ನೀತಾ, ಪುತ್ರಿ ಲಿಶಿಕಾ ಜತೆ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಪರಿಸರದ ಮನೆ ಮಂದಿ ಗೆಲ್ಲಾ ತರಕಾರಿ ಬೆಳೆಯನ್ನು ಮನೆಯ ಉಪಯೋಗಕ್ಕೂ ನೀಡುತ್ತಿದ್ದಾರೆ.

ಭೂ ಮಾಲಕನಲ್ಲ. ಕೃಷಿ ಮಾಲಕ
ಯಶೋಧರ ಕೋಟ್ಯಾನ್‌ 3 ಎಕ್ರೆ ಜಮೀನಿನಲ್ಲಿ ಭತ್ತದ ಬೇಸಾಯದಲ್ಲಿ ಬತ್ತದ ಉತ್ಸಾಹದಿಂದ ತೊಡಗಿಸಿಕೊಂಡಿದ್ದು, ಸ್ವಂತ ಜಮೀನು ಹೊಂದಿಲ್ಲ. ಕುಟುಂಬಕ್ಕೆ ಗದ್ದೆ ಹಾಗೂ ಜತೆಗೆ ಕೃಷಿಯಲ್ಲಿನ ಆಸಕ್ತಿ, ಕೃಷಿ ವೈಖರಿಯನ್ನು ಕಂಡ ಸುತ್ತಲಿನ ಹಡಿಲು ಬಿಟ್ಟಿದ್ದ ಗದ್ದೆಗಳ ಮಾಲೀಕರು ತಮ್ಮ ಹಡಿಲು ಗದ್ದೆಗಳನ್ನು ಹೆಚ್ಚಿನ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೃಷಿ ಚಟುವಟಿಕೆ ನಡೆಸಲು ಅವಕಾಶ ಕೊಟ್ಟಿದ್ದಾರೆ.

Advertisement

3.5 ಟನ್‌
ಈ ಬಾರಿಯ ಕಲ್ಲಂಗಡಿ ಬೆಳೆಗೆ ಗೊಬ್ಬರ, ಮಲಿcಂಗ್‌ ಶೀಟ್‌, ಕೃಷಿ ಕಾರ್ಮಿಕರ ಬಳಕೆ ಸಹಿತ ಸುಮಾರು 20 ಸಾವಿರ ರೂ. ನಷ್ಟು ಹಣವನ್ನು ಎರವಲು ಕೃಷಿ ಗದ್ದೆಯಲ್ಲಿ ತೊಡಗಿಸಿ ಬೆಳೆಯನ್ನು ಬೆಳೆದಿದ್ದಾರೆ. 70 ದಿನಗಳ ಸೂಕ್ತ ಆರೈಕೆಯ ಬಳಿಕ 3.5 ಟನ್‌ಗೂ ಅಧಿಕ ಕಲ್ಲಂಗಡಿ ಹಣ್ಣನ್ನು ಪಡೆದಿರುತ್ತಾರೆ. ಸ್ವತಃ ಹೋಲ್‌ಸೇಲ್‌ ವ್ಯಾಪಾರಸ್ಥರೇ ಪ್ರಯೋಗ ಶೀಲ ರೈತ ಕ್ಷೇತ್ರಕ್ಕೆ ಬಂದು ಬೆಳೆಯನ್ನು ಖರೀದಿಸಿ ಕೊಂಡೊಯ್ಯುತ್ತಾರೆ.

ಅಂದು ಫುಟ್ಬಾಲ್‌ ಆಟಗಾರ
ಬಾಲ್ಯದಲ್ಲಿಯೇ ಮುಂಬಯಿಯಲ್ಲಿ ಶಿಕ್ಷಣ ಪಡೆದು ಉದ್ಯೋಗಿಯಾಗಿದ್ದು, ಫುಟ್‌ಬಾಲ್‌ ದಂತಕತೆಯಾಗಿದ್ದ ಮರಡೋನಾ ಆಟಕ್ಕೆ ಮರುಳಾಗಿದ್ದು, ಫುಟ್ಬಾಲ್‌ ಸಾಧಕನಾಗುವ ಕನಸು ಚಿಗುರೊಡೆದಿತ್ತು. ಮಹಾರಾಷ್ಟ್ರದ ಬಾಂಬೆ ಪೋರ್ಟ್‌ ಫುಟ್‌ಬಾಲ್‌ ಜೂನಿಯರ್‌ ತಂಡವನ್ನು ಪ್ರತಿನಿಧಿಸಿದ್ದ ಯಶೋಧರ ಫಾರ್ವರ್ಡ್‌ ಆಟಗಾರನಾಗಿ ಮಿಂಚಿದ್ದರು. ಪರಿಸ್ಥಿತಿಯ ಕೈಗೊಂಬೆಯಾಗಿ ತಾಯ್ನಾಡಿಗೆ ಮರಳಿದ ಅನಂತರ ಕೃಷಿಯೇ ಜೀವನವಾಯಿತು. ಸಮರ್ಪಕ ನೀರು ಇಲ್ಲದ ಪ್ರದೇಶದಲ್ಲಿ ಈ ಕೃಷಿಯ ಸಾಧನೆ ಅಚಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಎರವಲು ಭೂಮಿ ಪಡೆದು ಕೃಷಿ ನಡೆಸಬೇಕೆಂಬ ಅದಮ್ಯ ಉತ್ಸಾಹ ಇವರದ್ದು.

ನವಿಲು ಉಪಟಳಕ್ಕೆ ಸರಳ ಪ್ರತ್ಯಸ್ತ್ರ
ಗದ್ದೆಯಲ್ಲಿ ನವಿಲಿನ ಉಪಟಳಕ್ಕೆ ಮುಕ್ತಿ ಹಾಡಲು ಯೂ-ಟ್ಯೂಬ್‌ನಲ್ಲಿ ಮಾಹಿತಿ ಸಂಗ್ರಹಿಸುತ್ತಾ ಇದ್ದ ಯಶೋಧರ ಕೋಟ್ಯಾನ್‌ ಲಭ್ಯ ಮಾಹಿತಿಯಂತೆ ಸ್ವತಃ ಸುಲಭ, ಸರಳ ಉಪಕರಣವನ್ನು ಸಿದ್ಧಪಡಿಸಿಕೊಂಡಿದ್ದಾರೆ. 1 ದೊಡ್ಡ ಮತ್ತು 1 ಸಣ್ಣ ಬಾಟಲಿಯನ್ನು ಒಂದು ಬಲಯುತವಾದ ಕೋಲಿನಲ್ಲಿ ಎರಡು ತುದಿಗಳಲ್ಲಿ ಇಳಿಬಿಡಬೇಕು. ಗಾಳಿಯ ಹೊಡೆತ ಅನುಭವಕ್ಕೆ ಬರಲು ಎರಡು ಕಾರ್ಡ್‌ ಬೋರ್ಡುಗಳನ್ನು ಬಾಟಲಿಗಳ ನಡುವೆ ತೂಗು ಹಾಕಬೇಕು. ಅದನ್ನು ನೆಲಕ್ಕೆ ಊರಿದ ಕೋಲಿಗೆ ಇಳಿಬಿಡಬೇಕು. ಅದಾಗ ಬೀಸುವ ಗಾಳಿಯ ಬಲಕ್ಕೆ ಬಾಟಲಿಗಳು ಒಂದಕ್ಕೊಂದು ತಗುಲಿ ಉಂಟಾಗುವ ಶಬ್ದಕ್ಕೆ ಬೆದರುವ ನವಿಲುಗಳು ಈ ಗದ್ದೆಯ ಪಕ್ಕಕ್ಕೆ ಸೋಂಕುವುದೇ ಇಲ್ಲ. ಹಾಗಾಗಿ ಬೆಳೆಯು ಸುರಕ್ಷಿತವಾಗಿರುತ್ತದೆ ಎನ್ನುತ್ತಾರೆ ಯಶೋಧರ್‌.

- ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next