Advertisement

ವೇಷಗಳು ನೂರಾರು ತಾಸುಗಳು ಇಪ್ಪತ್ತಾರು

06:00 AM Nov 09, 2018 | |

ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕಲಾಪೋಷಕ ಸಾಧಾರಣ ನೂರೈವತ್ತಕ್ಕೆ ಹತ್ತಿರ ದತ್ತಿನಿಧಿಗಳನ್ನು ಸ್ಥಾಪಿಸಿ ತಮ್ಮ ಒತ್ತಾಸೆಯಿಂದ ನಡೆಯುತ್ತಿದ್ದ ಕಾರ್ಯಕ್ರಮಗಳು ಜೀವಂತವಾಗಿರುವಂತೆ ಮಾಡಿದ ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯನವರು ತಮ್ಮ ಜೀವಿತಾವಧಿಯಲ್ಲಿ ಬಹುಜನಪ್ರಿಯರು. ಬಹುಜನ ಮಾನ್ಯರು. ಭೌತಿಕವಾಗಿ ಅವರು ಮರೆಯಾಗಿ ಹದಿನೈದು ಸಂವತ್ಸರಗಳು ಸಂದರೂ ಅವರ ನೆನಪಿನ ಉತ್ಸವ ಪ್ರತಿವರುಷವೂ ಅನೂಹ್ಯ ಇಂದ್ರವೈಭವದಂತೆ ಅದ್ದೂರಿಯಿಂದ ನಡೆಯುತ್ತಿದೆ. ಇದನ್ನು ನಮ್ಮ ಮುಂದೆ ಸಾಕಾಗೊಳಿಸುತ್ತಿರುವುದು ಸಂಪಾಜೆ ಯಕ್ಷೋತ್ಸವ. ದಕ್ಷಿಣಾದಿ, ಉತ್ತರಾದಿ ಯಕ್ಷಗಾನದ ಹಿಮ್ಮೇಳ ಮುಮ್ಮೇಳದ ನೂರಾರು ಮಂದಿ ಸುಪ್ರಸಿದ್ಧ ಮತ್ತು ಅಪ್ರಸಿದ್ಧ, ಹಿರಿ ಕಿರಿ ಮರಿ ಕಲಾವಿದರು ಅತ್ಯುತ್ಸಾಹದಿಂದ ಪಾಲ್ಗೊಂಡು ಕಲಾವೈಭವಕ್ಕೆ ಮೆರಗು ನೀಡುವ ಈ ಕಾರ್ಯಕ್ರಮ ಪ್ರತೀ ವರ್ಷ ಸಂಪಾಜೆಯಲ್ಲಿ ನಡೆಯುತ್ತಿತ್ತು. ಅನ್ಯಾನ್ಯ ಕಾರಣಗಳಿಂದ ಈ ವರುಷ ಮಲೆನಾಡಿನ ತಪ್ಪಲಿನ ಸಂಪಾಜೆಯಿಂದ ಕಡಲತೀರದ ಅಡ್ಯಾರಿನಲ್ಲಿ ವಿಜೃಂಭಣೆಯಿಂದ ನಡೆಯಿತು. ನೇತ್ರಾವತೀ ನದೀ ತೀರದಲ್ಲಿರುವ ಕಮನೀಯ ಕಲಾತ್ಮಕ ಸೌಂದರ್ಯದಿಂದ ಕಂಗೊಳಿಸುವ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆದ ಈ ಕಾರ್ಯಕ್ರಮ ಜನಮನ ರಂಜಿಸಿದ ಅವಧಿ ಇಪ್ಪತ್ತಾರು ತಾಸುಗಳು. ನೆರೆದ ಅಸಂಖ್ಯಾತ ಜನಸ್ತೋಮಕ್ಕೆ ಊಟೋಪಚಾರಗಳೊಂದಿಗೆ ಹೃದಯಾನಂದವನ್ನು ನೀಡಿ, ಡಾ.ಕೀಲಾರು ಅವರ ಸಂಸ್ಮರಣೆಯನ್ನು ಚಿರಂತನವಾಗಿಸಿತು. ಕೀರ್ತಿಶೇಷರಾದ ಬಳಿಕವೂ ಅವರದ್ದು ಸಾರ್ವಭೌಮ ಸಂಸ್ಮರಣೆ. 

Advertisement

ದ್ರೌಪದಿ ಪ್ರತಾಪ, ಏಕಾದಶಿ ಮಹಾತ್ಮೆ, ರಾಜಾ ಸೌದಾಸ, ಮಾಯಾ ವಿಹಾರಿ ಪ್ರದರ್ಶನಗೊಂಡ ನಾಲ್ಕು ಪ್ರಸಂಗಗಳು. ಏಕಾದಶಿ ಮಹಾತ್ಮೆ ಬಡಗಿನ ಕಲಾವಿದರದ್ದು. ಆಟ ಆರಂಭವಾದದ್ದು ಅ.27ರಂದು ಬೆಳಗ್ಗೆ 10 ಗಂಟೆಗೆ. ಮುಕ್ತಾಯವಾದದ್ದು ಅ.28ರಂದು ಮಧ್ಯಾಹ್ನ 12 ಗಂಟೆಗೆ. ಈ ಮಹಾಆಟದ ನಡುವೆ ನಡೆದ ಸಭಾ ಕಾರ್ಯಕ್ರಮದ ಅವಧಿ ಕೇವಲ 60 ನಿಮಿಷ.  ತೆಂಕುತಿಟ್ಟು ಯಕ್ಷಗಾನದಲ್ಲಿರುವ ಬಣ್ಣದ ವೇಷ, ರಾಜವೇಷ, ಪುಂಡುವೇಷ, ಸ್ತ್ರೀವೇಷ, ಹಾಸ್ಯವೇಷ, ಸಿರಿಮುಡಿಯ ವೇಷ, ಇತರ ವೇಷಗಳೆಂಬ ಏಳು ಜಾತಿಯ ವೇಷಗಳಿವೆ. ಈ ಪಾರಂಪರಿಕವಾದ ವೇಷಗಳಲ್ಲದೆ ನಾಟಕೀಯ ವೇಷಗಳೂ ಇವೆ. ಈ ಎಲ್ಲಾ ಜಾತಿಯ ವೇಷಗಳನ್ನು ಒಂದೇ ವೇದಿಕೆಯಲ್ಲಿ ನೋಡಬಹುದಾದ ಅವಕಾಶ ಈ ಆಟ ಒದಗಿಸಿದೆ. ಭಾಗವತಿಕೆ ಮತ್ತು ಹಿಮ್ಮೇಳ ವಾದನಗಳಲ್ಲೂ ವಿಭಿನ್ನ ಶೈಲಿಗಳನ್ನು ಒಂದೇ ವೇದಿಕೆಯಲ್ಲಿ ಆಸ್ವಾದಿಸಬಹುದಾದ ಅವಕಾಶವು ಇಲ್ಲಿ ದಕ್ಕಿದೆ. ಬಲಿಪ ನಾರಾಯಣ ಭಾಗವತರ ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ದೇಸಿ ಸೊಬಗಿನ ಭಾಗವತಿಕೆ, ಪಟ್ಲ ಸತೀಶ್‌ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆಯವರ ಆಧುನಿಕ ವಿನ್ಯಾಸದ ದ್ವಂದ್ವ ಹಾಡುಗಾರಿಕೆ, ಪ್ರಸಾದ್‌ ಬಲಿಪ ಮತ್ತು ಹೊಸಮೂಲೆ ಗಣೇಶ ಭಟ್‌ ಅವರ ಏರುಶ್ರುತಿಯ ಸ್ಪರ್ಧಾತ್ಮಕ ದ್ವಂದ್ವ, ಚೆಂಡೆಗಳ ಪ್ರಚಂಡ ಜುಗಲ್ಬಂದಿ, ಪುಂಡು ವೇಷಧಾರಿಗಳ ಮೇಲಾಟದ ಕುಣಿತಗಳು ಹಾಗೂ ರಕ್ಷಿತ್‌ ಶೆಟ್ಟಿ ಪಡ್ರೆ ಅವರ ಭರತನಾಟ್ಯ ಶೈಲಿಯ ಪೂಜಾನೃತ್ಯ, ಭೀಮಕಾಯದ ಶಬರೀಶ ಮಾನ್ಯ ಭೀಮನಾಗಿ ಸಭೆಯ ಮಧ್ಯೆ ಬಂಡಿ ಅನ್ನವನ್ನು ಬಕಾಸುರನಿಗೆ ಒಯ್ಯುವ ದೃಶ್ಯ ರಂಗೇರುವಂತೆ ಮಾಡಿತು. 

 ನವನವೀನ ದೃಶ್ಯಗಳ ಸಂಯೋಜನೆಯೊಂದಿಗೆ ನವರಸ ಭರಿತವಾದ ಗಾನ-ನೃತ್ಯಗಳು ಸಾಂಪ್ರದಾ ಯಿಕ ಮತ್ತು ಆಧುನಿಕತೆಗಳ ಮುಖಾಮುಖೀ ಪಾರಂಪರಿಕ ಮತ್ತು ಆಧುನಿಕ ಪ್ರೇಕ್ಷಕರನ್ನು ರಂಜಿಸಿತು. ಇಡೀ ದಿನವನ್ನು ಮೀರಿ ನಡೆದ ಕೀಲಾರು ಸಂಸ್ಮರಣಾ ಯಕ್ಷಗಾನ ಕಾರ್ಯಕ್ರಮ ಮನೋರಂಜನೆ ಯೊಂದಿಗೆ ಅಧ್ಯಯನಶೀಲರಿಗೆ ಅತ್ಯುತ್ತಮ ಮಾರ್ಗದರ್ಶಿಯಾದ ಅನನ್ಯ ಪ್ರದರ್ಶನ. ಆಟ ನೋಡುವುದಕ್ಕೆ ಪ್ರೇಕ್ಷಕರಿಗೆ ವ್ಯವಧಾನವಿಲ್ಲದುದರಿಂದ ಕಾಲಮಿತಿಯ ಯಕ್ಷಗಾನವೇ ಇಂದಿನ ಕಾಲಕ್ಕೆ ಸೂಕ್ತ ಎಂದು ವಾದಿಸುವವರ ಮುಂದೆ ಈ ಮಹಾಆಟ ಇಡೀ ದಿನವೂ ಆಟ ನೋಡುವ ಪ್ರೇಕ್ಷಕರಿದ್ದಾರೆ ಎಂದು ತೋರಿಸಿಕೊಟ್ಟಿತು.

 ಹೀಗೇ ಹಲವು ವಿಶೇಷಗಳಿಂದ ನೆರೆದ ಪ್ರೇಕ್ಷಕರ ಮನ ತಣಿಯುವಂತೆ ಬೆರಗು ಮೂಡುವಂತೆ ಇಡೀ ಕಲಾಲೋಕವನ್ನೇ ಆಕರ್ಷಿಸುತ್ತಾ ಪುರಾಣಯುಗದ ಚಕ್ರವರ್ತಿಗಳ ಯಾಗ-ಯಜ್ಞಗಳನ್ನು ನೆನಪಿಸುವಂ ತಹ ಇಡೀದಿನದ ಈ ಜ್ಞಾನಯಜ್ಞ ಕಲಾ ಇತಿಹಾಸದಲ್ಲಿಯೇ ಹೊಸ ಹೆಜ್ಜೆ ಗುರುತುಗಳನ್ನು ಸ್ಥಾಪಿಸಿತು.

ತಾರಾನಾಥ ವರ್ಕಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next