Advertisement

ಸಾಲ ಮನ್ನಾಕಿಂತ ಬೆಳೆಗೆ ಸೂಕ್ತ ಬೆಲೆ ಅಗತ್ಯ

11:50 AM Aug 16, 2018 | Team Udayavani |

ಹರಪನಹಳ್ಳಿ: ಸರ್ಕಾರ ರೈತರ ಸಾಲ ಮನ್ನಾ ಮಾಡುವುದಕ್ಕಿಂತ ಸಮರ್ಪಕ ವಿದ್ಯುತ್‌, ನೀರಾವರಿ ಮತ್ತು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವುದು ಅತ್ಯಗತ್ಯ ಎಂದು ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

Advertisement

ತಾಲೂಕಿನ ಗುಂಡಗತ್ತಿ ಗ್ರಾಮದಲ್ಲಿ ಶಿವಾನುಭವ ಸಮಿತಿ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಸಾಹಿತಿ
ಹಿ.ಚಿ. ಶಾಂತವೀರಯ್ಯನವರ “ಸಿದ್ಧರಾಮ ಚಾರಿತ್ರ್ಯ’ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ನೀರು ಜೀವ ಜಲ. ಮನುಷ್ಯನಿಗೆ ಮಾತ್ರವಲ್ಲ, ಸಕಲ ಜೀವ ಜಂತುಗಳಿಗೂ ಬೇಕು. ಹೀಗಾಗಿ ಸಿದ್ಧರಾಮೇಶ್ವರರು ಮೊದಲು ಕೆರೆಯನ್ನು ಕಟ್ಟಿಸುವ ಮೂಲಕ ನೀರು ಕೊಡುವ ಕೆಲಸ ಮಾಡಿದರು. ಮಳೆ ಬರಲು ಗಿಡ-ಮರಗಳ ಅಗತ್ಯವಿದೆ. ಗಿಡ ಕಡಿಯುವಲ್ಲಿ ನಾವು ಶೂರರಾಗಿ, ಬೆಳೆಸುವಲ್ಲಿ ಹೇಡಿಗಳಾಗಿದ್ದೇವೆ. ಸಿದ್ದರಾಮೇಶ್ವರರ ನೆನಪು ಮಾಡಿಕೊಳ್ಳುವ ನಾವು ಅವರಂತೆ ಕೆರೆ ಕಟ್ಟಿಸದಿದ್ದರೂ ಗಿಡ-ಮರಗಳನ್ನು ನೆಟ್ಟು ಬೆಳೆಸುವ ಕಾರ್ಯ ಮಾಡಬೇಕು ಎಂದರು.

ಅರಿವಿನ ಮತ್ತು ಅಡುಗೆ ಮನೆಗಿಂತ ಬಚ್ಚಲು ಮನೆ ಬಹಳ ಮುಖ್ಯವಾದುದು. ಪ್ರತಿಯೊಂದು ಮನೆಯೂ ಶೌಚಾಲಯವನ್ನು ಹೊಂದಬೇಕು. ಇದರಿಂದ ರೋಗರುಜಿನಗಳು ಕಡಿಮೆಯಾಗಿ ಆರೋಗ್ಯ ವರ್ಧಿಸಿ ಆದಾಯವೂ ಸಹಜವಾಗಿ ಹೆಚ್ಚಾಗುತ್ತದೆ. ನಿಜವಾದ ಜ್ಞಾನಿ ಹೊಗಳಿಕೆಯನ್ನು ನಿರೀಕ್ಷಿಸುವುದಿಲ್ಲ, ಅವನು ಗುರು-ಹಿರಿಯರಿಗೆ ಅಂಜಿ ನಡೆಯುತ್ತಾನೆ. ವ್ಯಕ್ತಿಗಳಲ್ಲಿ ಜ್ಞಾನ ಹೆಚ್ಚು-ಕಡಿಮೆ ಇರುವುದಿಲ್ಲ. ಅದನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಪ್ರತಿಯೊಬ್ಬರೂ ಜ್ಞಾನಿಗಳಾಗಲು ಸಾಧ್ಯ. ಲೋಕದ
ಒಳಿತನ್ನು ಬಯಸಿದರೆ ಖಂಡಿತ ಭಗವಂತ ಒಲಿಯುತ್ತಾನೆ. ಸ್ವಾರ್ಥಿಗಳಾದರೆ ಖಂಡಿತಾ ಒಲಿಯುವುದಿಲ್ಲ. ಸಿದ್ದರಾಮೇಶ್ವರ ಎಂದು ಹೆಸರಿಟ್ಟುಕೊಂಡರೆ ಸಾಲದು; ಬದಲಾಗಿ ಅವರ ಬದುಕಿನಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಶ್ರೀ ಶಿವಯೋಗಿ ಸಿದ್ಧರಾಮ ಕುರಿತಂತೆ ಹಿರಿಯ ಸಾಹಿತಿ ಹಿ.ಚಿ.ಶಾಂತವೀರಯ್ಯ ಉಪನ್ಯಾಸ ನೀಡಿ, 12ನೆಯ ಶತಮಾನದ ಸಿದ್ಧರಾಮ ಸೊನ್ನಲಗೆಯವರು. ಸೊನ್ನಲಗೆ ಎಂದರೆ ಬಂಗಾರದ ಹಲಗೆ ಎಂದರ್ಥ. ಸಿದ್ಧರಾಮ ಬಾಲಕನಾಗಿದ್ದಾಗಲೇ ಮಲ್ಲಿಕಾರ್ಜುನ ದೇವರನ್ನು ಒಲಿಸಿಕೊಂಡವನು. ಮಾತು ಮಂತ್ರವಾಗಬೇಕು, ನರ ಹರನಾಗಬೇಕು ಎಂದು ಹಂಬಲಿಸಿದವನು.

Advertisement

ಲೋಕಕಲ್ಯಾಣಾರ್ಥವಾಗಿ ಕೆರೆ, ಬಾವಿಗಳನ್ನು ಕಟ್ಟಿಸುವ ಕಾಯಕ ಮಾಡುತ್ತ ಲೋಕ ಸಂಚಾರ ಮಾಡಿದವರು. ಸ್ತ್ರೀಯರಿಗೆ ಯಾವ ಧರ್ಮದಲ್ಲೂ ಪೂಜೆ ಮಾಡುವ ಅಧಿ ಕಾರವನ್ನು ಕೊಟ್ಟಿಲ್ಲ, ಅದು ಸಿಕ್ಕಿರುವುದು ಲಿಂಗಾಯತ ಧರ್ಮದಲ್ಲಿ ಮಾತ್ರ ಎಂದರು. 

ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದ ಸಂದರ್ಭದಲ್ಲಿ ವರ್ಷವಿಡೀ ಕಷ್ಟಪಟ್ಟು ದುಡಿದು, ಬೆವರು ಹರಿಸಿದ ರೈತರು, ಶ್ರಮಿಕರು ಒಳ್ಳೆಯ ಬೆಳೆಯನ್ನು ಬೆಳೆದಿರುತ್ತಾರೆ. ಈ ಸಂದರ್ಭದಲ್ಲಿ ಇಂಥ ಸಮಯದಲ್ಲಿ ಒಳ್ಳೆಯ ಮಾತುಗಳನ್ನು ಶ್ರವಣ ಮಾಡಬೇಕೆನ್ನುವುದು ಹಿರಿಯರ ಆಶಯವಾಗಿತ್ತು. ಈ ಸಂದರ್ಭದಲ್ಲಿ ಆಚರಿಸುವ ನಾಗರ ಪಂಚಮಿ ಹಬ್ಬದಲ್ಲಿ ಹುತ್ತಕ್ಕೆ ಹಾಲೆರೆಯುವ ಬದಲು ಹಸಿದ ಮಕ್ಕಳಿಗೆ ಹಾಲು ಕುಡಿಸಬೇಕು ಎಂದರು.

ಗ್ರಾಮದಲ್ಲಿ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ವಚನಗಳನ್ನು ಹಾಡಿ ಪುರಸ್ಕಾರ ಪಡೆದುಕೊಂಡರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚಿನ ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಾಣೇಹಳ್ಳಿಯ ಶಿವಸಂಚಾರದ ದಾಕ್ಷಾಯಣಿ, ನಾಗರಾಜ್‌ ಮತ್ತು ಶರಣ್‌ ತಂಡದವರು ವಚನಗೀತೆಗಳನ್ನು ಹಾಡಿದರು. ಮಕ್ಕಳು ವಚನ ನೃತ್ಯರೂಪಕ ಪ್ರಸ್ತುತಪಡಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲ, ಸಾಧು ಲಿಂಗಾಯಿತ ಸಮಾಜದ ತಾಲೂಕಾಧ್ಯಕ್ಷ ಗುಂಡಗತ್ತಿ ಮಂಜುನಾಥ, ಮುಖಂಡರಾದ ಜಿ.ನಂಜನಗೌಡ, ಸಿದ್ದೇಶ್ವರ, ಬಿ.ಕೆ.ಪ್ರಕಾಶ್‌, ಅಧ್ಯಾಪಕಿ ಶೃತಿ ಬಿ.ಸಿದ್ದೇಶ್‌, ಎಚ್‌ ಎಸ್‌ ದ್ಯಾಮೇಶ್‌ ಇತರರಿದ್ದರು.

ಮನಸ್ಸಿನ ಬದಲಾವಣೆ ಮುಖ್ಯ ಧ್ಯೇಯ
ನಮ್ಮ ಅಂತರಂಗಕ್ಕೆ ಹೊಳೆಯದೆ ಯಾವ ಬಾಹ್ಯ ಒತ್ತಡದಿಂದಲೂ ಸದಾಚಾರ ಸಾಧ್ಯವಿಲ್ಲ. ಶ್ರಾವಣ ಸಂಜೆ ಯಾಂತ್ರಿಕ ಕ್ರಿಯೆಯಲ್ಲ. ಮನಸ್ಸಿನ ಬದಲಾವಣೆಯೇ ಶ್ರಾವಣ ಸಂಜೆಯ ಮುಖ್ಯ ಧ್ಯೇಯ. ನಿಮ್ಮ ಊರಿಗೆ ಹೆಚ್ಚಿನ ಹೆಣಗಳು ಆಸ್ಪತ್ರೆಯಿಂದ ಬರಬಾರದು ಎಂದರೆ ನಿಮ್ಮ ಊರನ್ನು, ಮನೆಯನ್ನು, ದೇಹವನ್ನು ಮೊದಲು ಸ್ವತ್ಛವಾಗಿಟ್ಟುಕೊಳ್ಳಬೇಕು. ಮೊಬೈಲ್‌ ತುಂಬ ಅಪಾಯಕಾರಿ ಸಾಧನವಾಗಿದ್ದು, ಅದನ್ನು ಎಚ್ಚರದಿಂದ ಬಳಸುವ ವ್ಯವಧಾನ ಪ್ರತಿಯೊಬ್ಬರಿಗೂ ಬರಬೇಕು.
 ಡಾ| ಪಂಡಿತಾರಾಧ್ಯ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next