ಹುಬ್ಬಳ್ಳಿ: ದೇಶಭಕ್ತಿಯ ಕಾರಣದಿಂದ ಸೇವೆಗೆ ಸೇರಿರುವ ಪೊಲೀಸರು ಯಾವುದೇ ಬಗೆಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ. ಭ್ರಷ್ಟರಾದವರು ದೇಶಭಕ್ತರಾಗಲು ಸಾಧ್ಯವಿಲ್ಲವೆಂದು ಜಂಗಲವಾಲೆ ಬಾಬಾ ಖ್ಯಾತಿಯ ದಿಗಂಬರ ಸಂತ ಮುನಿಶ್ರೀ ಚಿನ್ಮಯಸಾಗರ ಮಹಾರಾಜರು ನುಡಿದರು.
ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಿಎಆರ್ ಮೈದಾನದ ಆವರಣದಲ್ಲಿ ಶುಕ್ರವಾರ ಪೊಲೀಸ್ ಸಿಬ್ಬಂದಿ ಉದ್ದೇಶಿಸಿ ಆಶೀರ್ವಚನ ನೀಡಿದ ಮುನಿಶ್ರೀ, ದುರ್ಜನರಿಗೆ ಕಡಿವಾಣ ಹಾಕುವ ಪೊಲೀಸರು ಸಜ್ಜನರ ರಕ್ಷಣೆಗೆ ಮುಂದಾಗಬೇಕು. ಸಜ್ಜನರಿಗೆ ಎಂದೂ ತೊಂದರೆ ಕೊಡಬೇಡಿ ಎಂದರು.
ಸಂತರು ಹಾಗೂ ಪೊಲೀಸರ ದಾರಿಗಳು ಬೇರೆಯಾಗಿರಬಹುದು. ಆದರೆ ಇಬ್ಬರ ಉದ್ದೇಶ ಒಂದೇ ಆಗಿದೆ. ಸಮಾಜವನ್ನು ಪಾಪಮುಕ್ತಗೊಳಿಸುವ ಸಮಾನ ಕಾರ್ಯ ಮಾಡುತ್ತಿದ್ದಾರೆ. ದೇಶಸೇವೆ ಮಾಡಬೇಕು. ಉತ್ತಮ ಸಮಾಜ ನಿರ್ಮಿಸಬೇಕೆಂಬ ಭಾವನೆ ಹೊಂದಿ ಪೊಲೀಸ್ ಸೇವೆಗೆ ಸೇರಿರುವ ನೀವು ಸತ್ಯ ಮಾರ್ಗದಲ್ಲಿ ಮುನ್ನಡೆಯಲು ಎಂದಿಗೂ ಭೀತಿ ಪಡಬೇಡಿ.
ಸಮಯದ ಪರಿವಿಲ್ಲದೆ ಕುಟುಂಬದ ಸದಸ್ಯರಿಂದ ದೂರ ಉಳಿದು ಸಮಾಜದ ಸುರಕ್ಷೆಗಾಗಿ ಶ್ರಮಿಸುವ ನಿಮ್ಮ ಬಗ್ಗೆ ನಿಮ್ಮ ಪರಿವಾರ ಮಾತ್ರವಲ್ಲ ಇಡೀ ಸಮಾಜಕ್ಕೆ ಹೆಮ್ಮೆ ಇದೆ ಎಂದರು. ನಿಮ್ಮ ಅಧಿಕಾರ, ಸಂಪತ್ತು, ಐಶ್ವರ್ಯ ನೋಡಿ ಜನ ನಿಮ್ಮನ್ನು ಗುರುತಿಸುವುದಿಲ್ಲ. ನಿಮ್ಮ ಸೇವೆ, ಸಮವಸ್ತ್ರಕ್ಕೆ ಮಹತ್ವ ಕೊಡುತ್ತಾರೆ.
ಆದ್ದರಿಂದ ನಿಮ್ಮಬಗ್ಗೆ ಯಾರಾದರೂ ಟೀಕೆ-ಟಿಪ್ಪಣೆಗಳನ್ನು ಮಾಡಿದರೆ ಅದಕ್ಕೆ ನೀವು ಎದೆಗುಂದಬೇಡಿ. ಸಶಕ್ತ ಸಮಾಜ ನಿರ್ಮಾಣವೇ ನಿಮ್ಮ ಗುರಿಯಾಗಬೇಕು. ಪಾಪಗಳನ್ನು ತಡೆಯುವುದೇ ನಿಮ್ಮ ಉದ್ದೇಶವಾಗಬೇಕು. ನಿಮ್ಮ ಕಾಯಕದಲ್ಲಿ ಧೈರ್ಯವಾಗಿ ಮುನ್ನುಗ್ಗಿ. ಯಾವುದೇ ಆಮಿಷ, ಒತ್ತಡಗಳಿಗೆ ಮಣಿಯಬೇಡಿ ಎಂದರು.
ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ಮುನಿಶ್ರೀಗಳ ಬೋಧನೆಗಳನ್ನು ಪೊಲೀಸರು, ಸಮಾಜ ಆದರ್ಶವಾಗಿಟ್ಟುಕೊಂಡರೆ ಸಮಾಜದಲ್ಲಿ ಶಾಂತಿ-ನೆಮ್ಮದಿ ಸ್ಥಾಪನೆ ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಜೈನ ಸಮಾಜದ ವತಿಯಿಂದ ಹಾಗೂ ಮುನಿಶ್ರೀ ಚಿನ್ಮಯಸಾಗರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಜೈನ ಸಮಾಜ ಅಧ್ಯಕ್ಷ ಶಾಂತಿನಾಥ ಹೋತಪೇಟಿ, ಉಪಾಧ್ಯಕ್ಷರಾದ ವಿಮಲ ತಾಳಿಕೋಟಿ, ರಾಜೇಂದ್ರ ಬೀಳಗಿ, ಶ್ರೇಣಿಕರಾಜ ರಾಜಮಾನೆ, ಮಹಾವೀರ ಸೂಜಿ, ಧನಪಾಲ ಮುನ್ನೊಳ್ಳಿ, ಬ್ರಹ್ಮಕುಮಾರ ಬೀಳಗಿ, ಸುನಂದಾ ಗೋಟಡಕಿ, ತ್ರಿಶಲಾ ಮಾಲಗತ್ತಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.