ಮಾಯಕೊಂಡ: ಮಾಯಕೊಂಡ ಮತ್ತು ಆನಗೋಡು ಹೋಬಳಿಯ ರೈತರಿಗೆ ಮೆಕ್ಕೆಜೋಳ ಬೆಳೆಗಾರರಿಗೆ ಕೊರೊನಾ ಬಿಸಿ ತಟ್ಟಿದೆ. ಕೊರೊನಾ ಬಿಸಿ ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿರುವ ಕಾರಣಕ್ಕೆ ಕೋಳಿಯ ಪ್ರಮುಖ ಆಹಾರ ಧಾನ್ಯವಾದ ಮೆಕ್ಕೆಜೋಳದ ಬೇಡಿಕೆ ಕುಸಿದಿದ್ದು, ದರ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಕಳೆದ ಮುಂಗಾರಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ಮಾರಾಟ ಮಾಡದೆ ರೈತರು ಕಣಗಳಲ್ಲಿ ಸಂಗ್ರಹಣೆ ಮಾಡಿಟ್ಟುಕೊಂಡ ಪರಿಣಾಮ ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಕೊರೊನಾ ಭೀತಿಗಿಂತ ಮೊದಲು ಮೆಕ್ಕೆಜೋಳದ ದರ 1900-2000 ರೂ. ಗಡಿ ದಾಟಿತ್ತು. 2000 ರೂ. ದರ ನಿರೀಕ್ಷೆ ಮಾಡಿದ್ದ ರೈತರುಗಳು ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಬಂಗಾರದ ಬೆಲೆ ಸಿಕ್ಕಿತ್ತು ಎಂದು ಸಂತಸಗೊಂಡಿದ್ದರು. ಈಗ ದಿಢೀರ್ ದರ ಕುಸಿದು ಸಾವಿರದಿಂದ ಸಾವಿರದ ಇನ್ನೂರು ರೂ.ಗೆ ವ್ಯಾಪಾರ ನಡೆಯುತ್ತಿರುವುದರಿಂದ ರೈತರು ಇನ್ನು ಬೆಲೆ ಕುಸಿಯಬಹುದು ಎಂಬ ಅತಂಕದಲ್ಲಿದ್ದಾರೆ.
ಮುಂಗಾರಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ತೆನೆ ಸಮೇತ ಕಣಗಳಲ್ಲಿ ಸಂಗ್ರಹಿಸಿಡುವ ರೈತರು ಜನವರಿ ತಿಂಗಳ ನಂತರ ಮಾರಾಟ ಮಾಡುವುದು ವಾಡಿಕೆ. ಮೆಕ್ಕೆಜೋಳವನ್ನು ಜನವರಿ ಬಳಿಕ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದ ರೈತರಿಗೆ ಇದೀಗ ಕೊರೊನಾ ವೈರಸ್ ರೈತರ ಮಗ್ಗಲ ಮುಳ್ಳು ಮುರಿಯುತ್ತಿದೆ.
ತತ್ತರಿಸಿದ ಪೌಲ್ಟ್ರಿ ಉದ್ಯಮ ಕೋಳಿ ತಿಂದರೆ ಕೊರೊನಾ ವೈರಸ್ ಬರುತ್ತದೆ ಎಂಬ ವದಂತಿಗಳಿಂದಾಗಿ ಉದ್ಯಮ ತಲ್ಲಣಿಸಿದ ಕಾರಣಕ್ಕೆ ಕೋಳಿಗಳ ಪ್ರಮುಖ ಆಹಾರ ಧಾನ್ಯ ಮೆಕ್ಕೆಜೋಳವನ್ನು ಖರೀದಿ ಮಾಡಲು ಖರೀದಿದಾರರು ಮುಂದೆ ಬಾರದ ಕಾರಣಕ್ಕೆ ಮೆಕ್ಕೆಜೋಳ ದರ ಕೂಡ ದಿನೇ ದಿನೇ ಕುಸಿತಗೊಳ್ಳುತ್ತಿದೆ. ಪ್ರತಿ ಕ್ವಿಂಟಲ್ ಮೆಕ್ಕೆಜೋಳ ದರ 1000-1200 ರೂ.ಗೆ ಖರೀದಿ ನಡೆಯುತ್ತಿದೆ. ಇನ್ನೂ ದರ ಕುಸಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಹೋಬಳಿಯ ರೈತರು ಸರ್ಕಾರದ ಮೆಕ್ಕೆಜೋಳ ಸಂರಕ್ಷಣ ಘಟಕಗಳಲ್ಲಿ ಸಂಗ್ರಹ ಮಾಡುತ್ತಿದ್ದಾರೆ. ಇನ್ನೂ ಕೆಲವು ರೈತರು ವರ್ತಕರಿಗೆ ತಿಂಗಳ ನಂತರ (ಸಾಲ) ನಂತರ ಹಣ ಪಡೆದುಕೊಳ್ಳಲು 1400 -1600 ರೂ.ಗೆ ಮಾರಟ ಮಾಡುತ್ತಿರುವುದು ಸಾಮಾನ್ಯವಾಗಿ ಹೋಬಳಿಯ ಗ್ರಾಮಗಳಲ್ಲಿ ಕಂಡು ಬರುತ್ತದೆ. ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು ಹೋಬಳಿಗಳಲ್ಲಿ ಶೇ.40% ರಷ್ಟು ಮೆಕ್ಕೆಜೋಳ ಇದುವರೆಗೆ ಮಾರಾಟವಾಗಿದೆ. ಇನ್ನೂ ಶೇ. 60%ರಷ್ಟು ರೈತರು ಉತ್ತಮ ಬೆಲೆಗಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಕೊರೊನಾ ವೈರಸ್‌ನಿಂದ ಹಠಾತ್ ಬೆಲೆ ಇಳಿಕೆ ಕಂಡಿರುವುದರಿಂದ ರೈತರನ್ನು ಚಿಂತೆಗೀಡು ಮಾಡಿದೆ.
ಒಂದು ಎಕ್ಕರೆ ಮೆಕ್ಕೆಜೋಳ ಬೆಳೆಯಲು 20 ರಿಂದ 25 ಸಾವಿರ ರೂ. ಖರ್ಚು ತಗಲುತ್ತದೆ. ಬಿತ್ತನೆ ಬೀಜ ಪ್ಯಾಕೆಟ್ ಸುಮಾರು ಸಾವಿರದಿಂದ ಎರಡು ಸಾವಿರ ರೂಪಾಯಿವರೆಗೂ ಬೆಲೆ ಇದೆ. ಇಂತಹ ಸಂದಿಗ್ಧ ಕಾಲದಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಿಸಿ 2500 ದರ ನಿಗದಿಪಡಿಸಿ ಸಕಾಲದಲ್ಲಿ ಖರೀದಿಸಲು ಖರೀದಿ ಕೇಂದ್ರ ತೆರೆಯಬೇಕು. ಖರೀದಿ ಕೇಂದ್ರ ತೆರೆದರೆ ರೈತರನ್ನು ಸಂಕಷ್ಟದಿಂದ ದೂರ ಮಾಡಬಹುದು ಎಂಬುದು ರೈತಪರ ಸಂಘಟನೆಗಳು ಮತ್ತು ಈ ಭಾಗದ ರೈತರ ಒತ್ತಾಯವಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತರಿಗೆ ಕೊರೊನಾದಿಂದ ಮೆಕ್ಕೆಜೋಳದ ಬೆಲೆ ಕುಸಿತ ಒಂದು ಕಡೆ ಅದರೆ, ಕಣದಲ್ಲಿ ಸಂಗ್ರಹಣೆ ಮಾಡಿದ ಜೋಳದ ರಾಶಿ ಬಿಸಿಲಿನ ತಾಪಮಾನದಿಂದ ತೇವಾಂಶ ಕಳೆದುಕೊಂಡು ತೂಕ ಕಡಿಮೆ ಅಗಿರುವುದು. ನಾನಾ ಸಂಕಷ್ಟಗಳಿಂದ ನೊಂದಿರುವ ರೈತರ ಕಷ್ಟಕ್ಕೆ ಸರ್ಕಾರ ನೆರವಿಗೆ ಬಾರದಿರುವುದು ವಿಪರ್ಯಸವೇ ಸರಿ.
-ಶಶಿಧರ್ ಶೇಷಗಿರಿ