ಬೆಂಗಳೂರು: ಅಮೆರಿಕದ ಬ್ಯಾಂಕ್ ಖಾತೆಯಲ್ಲಿ ಸಾವಿರಾರು ಕೋಟಿ ರೂ. ಹಣ ಇದ್ದು, ಅಲ್ಲಿಂದ ಡ್ರಾ ಮಾಡಲು ತೆರಿಗೆ ಪಾವತಿಸಬೇಕಿದೆ ಎಂದು ಹೇಳಿ ವ್ಯಕ್ತಿಯೊಬ್ಬರಿಗೆ ನಾಲ್ಕು ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೃಷ್ಣೇಗೌಡ (50) ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸಹಕಾರ ನಗರ ನಿವಾಸಿ ಶ್ರೀನಾಥ್ ಸಿ.ವಿ ಎಂಬುವವರು ನೀಡಿದ ದೂರಿನ ಮೇರೆಗೆ ಉದ್ಯಮಿ ಎಂದು ಹೇಳಿಕೊಳ್ಳುವ ಕೃಷ್ಣೇಗೌಡ ಹಾಗೂ ಪತ್ನಿ, ಅರಣ್ಯ ಇಲಾಖೆ ಅಧಿಕಾರಿ ಕವಿತಾಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದು, ಕೃಷ್ಣೇಗೌಡನನ್ನು ಬಂಧಿಸಲಾಗಿದೆ. ಈ ದಂಪತಿ ಹಲವರಿಗೆ ನೂರಾರು ಕೋಟಿ ರೂ. ವಂಚಿಸಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿಸಲಾಗಿದೆ. ಸಾಲ ನೀಡಿದವರಿಗೆ ಕವಿತಾ ಗೌಡ ಸಹಿಯುಳ್ಳ ಚೆಕ್‌ಗಳನ್ನು ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಾಥ್‌ಗೆ ಹೇಗೆ ವಂಚಿಸಿದ್ದರು ಆರೋಪಿ ದಂಪತಿ?: ಸಹಕಾರ ನಗರದಲ್ಲಿ ವಾಸವಿರುವ, ಕೋಲಾರ ಮೂಲದ ಶ್ರೀನಾಥ್‌ಗೆ ಐದು ವರ್ಷಗಳ ಹಿಂದೆ ಕೃಷ್ಣೇಗೌಡ ಹಾಗೂ ಕವಿತಾ ಪರಿಚಯವಾಗಿದ್ದು, ಮೊದಲಿಗೆ ವಾರದ ಮಟ್ಟಿಗೆ 15 ಲಕ್ಷ ರೂ. ಸಾಲ ಪಡೆದು ವಾರದೊಳಗೆ ಹಿಂದಿರುಗಿಸಿದ್ದಾರೆ. ಒಂದು ತಿಂಗಳ ನಂತರ ಬಂದು ವಿದೇಶಿ ಕಂಪನಿಯಿಂದ ನಮಗೆ ಹಣ ಬರಬೇಕಿದೆ.
ತೆರಿಗೆ ಪಾವತಿ ಮಾಡಿದರೆ ಹಣ ಬರುತ್ತದೆ. ಹೀಗಾಗಿ ಹಣ ಬೇಕಿದೆ. ಅಮೆರಿಕದ ಬ್ಯಾಂಕ್ ಒಂದರ ಖಾತೆಯಲ್ಲಿ ಹಣ ಇದೆ ಎಂಬುದಕ್ಕೆ ಸಾಕ್ಷಿಯಾಗಿ ನಕಲಿ ದಾಖಲೆ ಸಹ ತೋರಿಸಿದ್ದರು. ಆದರೆ, ಶ್ರೀನಾಥ್ ಹಣವಿಲ್ಲ ಎಂದಾಗ ಅವರ ಹೆಸರಿನಲ್ಲಿದ್ದ ಕೊಡಿಗೇಹಳ್ಳಿಯ 60/40 ನಿವೇಶನವನ್ನು ಅವರೇ ಮಾರಾಟ ಮಾಡಿಸಿ ಬಂದ ಅಷ್ಟೂ ಹಣ ತೆಗೆದುಕೊಂಡಿದ್ದರು.
ಇದಾದ 10 ದಿನಗಳಲ್ಲಿ ಮತ್ತೆ ಶ್ರಿನಾಥ್ ಬಳಿ ಬಂದು ಮತ್ತಷ್ಟ ಹಣ ಬೇಕಿದೆ ಎಂದು ಪೀಡಿಸಿ ಮಾದನಾಯಕನಹಳ್ಳಿಯಲ್ಲಿದ್ದ 30/40 ಅಳತೆಯ ಸೈಟ್ ಮಾರಾಟ ಮಾಡಿಸಿ ಆ ಹಣವನ್ನೂ ಕೊಂಡೊಯ್ದಿದ್ದರು. ಅಷ್ಟಕ್ಕೇ ಸುಮ್ಮನಾಗದೆ, ಬ್ಯಾಂಕ್ ಆಫ್ ಅಮೆರಿಕ ಖಾತೆಯ ನಕಲಿ ಪ್ರತಿ ತೋರಿಸಿ, ಕಡೆಯದಾಗಿ 40 ಲಕ್ಷ ರೂ. ತೆರಿಗೆ ಪಾವತಿಸಿದರೆ ಹಣ ಅಕೌಂಟ್‌ಗೆ ಬರಲಿದೆ ಎಂದು ನಂಬಿಸಿ, ಮತ್ತೆ 40 ಲಕ್ಷ ರೂ. ಕಿತ್ತಿದ್ದರು. ಆ ನಂತರ ಹಣ ವಾಪಸ್ ಮಾಡದೆ ವಂಚಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ರಾಜಕಾರಣಿಗಳ ಆಪ್ತ?: ಆರೋಪಿ ಕೃಷ್ಣೇಗೌಡ ಹಾಗೂ ಆತನ ಪತ್ನಿ ಕವಿತಾ ಗೌಡ, ತಮಗೆ ರಾಜ್ಯದ ಪ್ರಮುಖ ರಾಜಕಾರಣಿಗಳು ಹಾಗೂ ಐಎಎಸ್, ಐಪಿಎಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿಕೊಂಡಿದ್ದಾರೆ. ಕೃಷ್ಣೇಗೌಡ ಕೆಲವೆಡೆ ತಾನು ವಕೀಲ, ಐಎಫ್ಎಸ್ ಅಧಿಕಾರಿ ಎಂದೂ ಹೇಳಿಕೊಂಡಿದ್ದ.
ಹಣ ಇರುವ ರಾಜಕಾರಣಿಗಳನ್ನು ಪರಿಚಯಿಸಿಕೊಂಡು ಸ್ನೇಹ ಸಂಪಾದಿಸಿ ಬಳಿಕ ಅಮೆರಿಕದಲ್ಲಿ ತನ್ನ ಸಹಭಾಗಿತ್ವದ ಕಂಪನಿಯಲ್ಲಿ ನೂರಾರು ಕೋಟಿ ರೂ. ಹಣ ಇದೆ. ನೀವೂ ಹಣ ಹೂಡಿಕೆ ಮಾಡಿ, ತೆರಿಗೆ ಕಟ್ಟಬೇಕಿದೆ ಎಂದು ಸಬೂಬು ಹೇಳಿ ಹಣ ಪಡೆಯುತ್ತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಆರೋಪಿ ಹಾಗೂ ಆತನ ಪತ್ನಿಯ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ಆರೋಪಿ ಇದೇ ರೀತಿ ಹಲವರಿಗೆ ವಂಚಿಸಿರುವ ಸಾಧ್ಯತೆಯಿದ್ದು, ವಂಚನೆಗೊಳಗಾದವರು ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ಗಿರೀಶ್, ಡಿಸಿಪಿ ಈಶಾನ್ಯ ವಿಭಾಗ