ಕಾರವಾರ: ಮಕ್ಕಳ ಮೂಲಕ ಗಾಂಜಾ ಮಾರಾಟ ಮಾಡುವ ಜಾಲದ ಪತ್ತೆಗೆ ಇದೀಗ ಪೊಲೀಸರು ಮುಂದಾಗಿದ್ದಾರೆ. ಕಳೆದ ಗುರುವಾರ ಹುಬ್ಬಳ್ಳಿ-ಧಾರವಾಡ ಪೊಲೀಸರು 52.5 ಕೆಜಿ ಗಾಂಜಾ ವಶಪಡಿಸಿಕೊಂಡ ಘಟನೆ ನಂತರ ಗಾಂಜಾ ಜಾಲದ ಲಿಂಕ್ ಬೀದರ್‌ದಿಂದ ಕಾರವಾರದ ವರೆಗೆ ಹಬ್ಬಿದೆ ಎಂಬ ಸೂಕ್ಷ್ಮಗಳು ಬಯಲಾಗಿವೆ.
ಧಾರವಾಡದ ಕಲ್ಲಾಪುರ ಬಡಾವಣೆ ಬಳಿ ವಾಹನವೊಂದನ್ನು ತಡೆದು ಪೊಲೀಸರು ಪರಿಶೀಲಿಸುವಾಗ ಅರ್ಧ ಕ್ವಿಂಟಾಲ್ ಗಾಂಜಾ ಸಿಕ್ಕಿತ್ತು. ವಾಹನ ಚಾಲಕ ಗಾಂಜಾವನ್ನು ಕಾರವಾರಕ್ಕೆ ಸಾಗಿಸುತ್ತಿದ್ದೇನೆ ಎಂಬ ಸಂಗತಿ ಬಾಯಿಬಿಟ್ಟಿದ್ದಾನೆ. ಈತನ ಹೆಸರು ಸಿದ್ರಾಮ ಅಲಿಯಾಸ್ ಸುನೀಲ್ ಗುಂಡೆ. ಈತ ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ತ್ರಿಪುರನಾಥ ಗ್ರಾಮದವನು. ಗಾಂಜಾ ಭಾಲ್ಕಿ ನಗರದ ವಿಕ್ರಮ್ ರಾಥೋಡ್ ಮತ್ತು ಎಸ್.ಬಿ. ಮುದ್ದಾ ಎಂಬುವವರಿಗೆ ಸೇರಿದ್ದು ಎಂದು ಪೊಲೀಸರಿಗೆ ವಿವರಿಸಿದ್ದಾನೆ. ಈ ಸಂಗತಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದು ಆಗಿದೆ. ಹಾಗಾಗಿ ಪೊಲೀಸರು ಈ ಅಂತಾರಾಜ್ಯ ಮಾದಕ ವಸ್ತು ಸಾಗಾಟ ಮತ್ತು ವ್ಯಾಪಾರದ ಲಿಂಕ್‌ಗಳನ್ನು ಹಿಡಿದು ಕಾನೂನು ಚೌಕಟ್ಟಿನಲ್ಲಿ ಸಿಕ್ಕಿಸಲು ಯತ್ನ ಮುಂದುವರಿಸಿದ್ದಾರೆ.
ಓರಿಸ್ಸಾ, ಆಂಧ್ರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾದಕ ವಸ್ತು ಸಾಗಾಟದ ಜಾಲ ಹರಡಿಕೊಂಡಂತೆ ಕಾಣುತ್ತಿದೆ. ಈಚೆಗೆ ಗೋಕರ್ಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ ಸಹ ಬಯಲಾಗಿತ್ತು. ಗೋವಾದಲ್ಲಿ ಗಾಂಜಾ ಮಾರಾಟಕ್ಕೆ ಅಲ್ಲಿನ ಸರ್ಕಾರ ತಡೆಯೊಡ್ಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಂತೆ ಈ ವಹಿವಾಟು ಕಾರವಾರ ಮತ್ತು ಗೋಕರ್ಣದಂಥ ಪ್ರವಾಸಿ ತಾಣಗಳಲ್ಲಿ ಹರಡಿಕೊಂಡಿದೆ ಎಂಬ ಗುಸು ಗುಸು ಪ್ರಾರಂಭವಾಗಿದೆ.
ಮೆಡಿಕಲ್ ಮತ್ತು ಎಂಜಿನಿಯರಿಂಗ್‌ಗೆ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಗಾಂಜಾ ಮಾರಾಟ ನಡೆಯುತ್ತಿದೆ ಎನ್ನಲಾಗುತ್ತಿದೆ. ಜೊತೆಗೆ ವಿಲಾಸಿ ಪ್ರವಾಸಿಗರಿಗೂ ಗಾಂಜಾ ಮಾರಾಟದ ಯತ್ನಗಳಾಗುತ್ತಿವೆ. ಅಲ್ಲದೇ ನಗರದಲ್ಲಿನ ಗಾಂಜಾ ವ್ಯಸನಿಗಳನ್ನು ಹುಡುಕಿಕೊಂಡು ಗಾಂಜಾ ವ್ಯಾಪಾರಿಗಳು ನಾನಾ ತಂತ್ರ ಬಳಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಗಾಂಜಾ ವಶ: ಮೂವರು ಬಾಲಕರು ವಶಕ್ಕೆ: ನಗರದ ಬಸ್ ನಿಲ್ದಾಣದಲ್ಲಿ ತಲಾ ಹತ್ತು ಗ್ರಾಂ ಗಾಂಜಾದೊಂದಿಗೆ ನಿಂತಿದ್ದ ಮೂವರು ಬಾಲಕರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ಬಸ್ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ನಿಂತಿದ್ದ ಮಕ್ಕಳನ್ನು ಪೊಲೀಸರು ತಪಾಸಣೆ ಮಾಡಿದಾಗ ತಲಾ ಹತ್ತು ಗ್ರಾಂ ಗಾಂಜಾ ದೊರೆತಿದೆ. ಬಾಲಾಪರಾಧಿ ಕೇಂದ್ರಕ್ಕೆ ಮಕ್ಕಳನ್ನು ನೀಡಲಾಗಿದ್ದು, ತನಿಖೆ ನಡೆದಿದೆ ಎಂದು ಪಿಎಸ್‌ಐ ನವೀನ್ ನಾಯ್ಕ ತಿಳಿಸಿದ್ದಾರೆ.