ಬೆಂಗಳೂರು: ಮೈಮೇಲೆ ಬಟ್ಟೆಯಿಲ್ಲದೆ, ಮೂರು ದಿನಗಳಿಂದ ಹಸಿವಿನಿಂದ ನರಳುತ್ತಿದ್ದ ವ್ಯಕ್ತಿಯ ನೋವಿಗೆ ಬೆಂಗಳೂರು ನಗರ ಸಂಚಾರ ಪೊಲೀಸರ ಹೃದಯ ಮಿಡಿದ ಪ್ರಸಂಗ ಜರುಗಿದೆ.
ಹೊರಮಾವು ಜಂಕ್ಷನ್‌ನಲ್ಲಿ ಗುರುವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದು ನರಳುತ್ತಿದ್ದಾನೆ ಎಂಬ ವಿಷಯವನ್ನು ಬಾಣಸವಾಡಿ ಸಂಚಾರ ಠಾಣೆಯ ಪೇದೆಗಳಾದ ಅತಿಕ್ ಹಾಗೂ ನಯಾಜ್‌ಗೆ ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ.
ಕೂಡಲೇ ನೆರವಿಗೆ ತೆರಳಿದ ಪೇದೆಗಳಾದ ಅತಿಕ್ ಹಾಗೂ ನಯಾಜ್, ಸ್ಥಳೀಯರ ಸಹಕಾರದಿಂದ ಆತನಿಗೆ ಬಟ್ಟೆ, ಊಟ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಧರ್ಮಪುರಿ ಮೂಲದ ವ್ಯಕ್ತಿ ತಮಿಳು ಮಾತನಾಡುತ್ತಿದ್ದು, ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆತನಿಗೆ ಬಟ್ಟೆ ಹಾಗೂ ಊಟ ಕೊಡಿಸಿದ ಬಳಿಕ ಸಿಬ್ಬಂದಿ ಕರ್ತವ್ಯಕ್ಕೆ ಮರಳಬೇಕಿದ್ದರಿಂದ, ವ್ಯಕ್ತಿಯನ್ನು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲು ಸ್ಥಳೀಯರಿಗೆ ತಿಳಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ.
ಕರ್ತವ್ಯ ಪಾಲನೆ ಜತೆಗೆ ಅಸಹಾಯಕ ವ್ಯಕ್ತಿಗೆ ನೆರವಾಗಿ ಮಾನವೀಯತೆ ಮೆರೆದ ಪೊಲೀಸ್ ಪೇದೆಗಳ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ