ಮಹಾನಗರ: ದಕ್ಷಿಣ ಒಳನಾಡಿನಲ್ಲಿ ಮೇಲ್ಮೆ ಸುಳಿಗಾಳಿ ಮತ್ತು ಗಾಳಿಯ ಒತ್ತಡ ಕಡಿಮೆ ಇದ್ದು, ಪರಿಣಾಮ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗಿನ ವೇಳೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಿದೆ. ಕೆಲವು ದಿನಗಳಿಂದ ನಗರದಲ್ಲಿ ವಿಪರೀತ ಸೆಕೆಯಿಂದ ಕೂಡಿದ್ದ ವಾತಾವರಣವು ಮಳೆಯಿಂದಾಗಿ ತಂಪಾಗಿದೆ.
ರವಿವಾರ ಸಂಜೆ ವೇಳೆಗೆ ನಗರದಲ್ಲಿ ಮೋಡಕವಿದ ವಾತಾವರಣ ಇತ್ತು. ರಾತ್ರಿ 10.30ರ ವೇಳೆಗೆ ಗುಡುಗು ಸಿಡಿಲಿನ ಆರ್ಭಟ ಹೆಚ್ಚಾಗಿತ್ತು. ಮಧ್ಯರಾತ್ರಿ ವೇಳೆಗೆ ಸಾಧಾರಣ ಮಳೆಯಾಗಿದ್ದು, ಸೋಮವಾರ ಬೆಳಗ್ಗಿನ ವೇಳೆಯೂ ಮಳೆ ಮುಂದುವರಿದಿತ್ತು. ಬಳಿಕ ನಗರದಲ್ಲಿ ಮೋಡ ಕವಿದ ವಾತಾವರಣ, ಮಧ್ಯಾಹ್ನವಾಗುತ್ತಿದ್ದಂತೆ ಸೆಕೆಯ ಅನುಭವ ಇತ್ತು.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ. ರವಿವಾರ ಉಷ್ಣಾಂಶವು ವಾಡಿಕೆಗಿಂತ 4 ಡಿ.ಸೆ. ಹೆಚ್ಚಾಗಿತ್ತು. ಮಳೆ ಬಂದ ಬಳಿಕ ಉಷ್ಣಾಂಶದಲ್ಲಿ ಇಳಿಕೆಯಾಗಿದ್ದು, ಸೋಮವಾರ 35 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಪೂರ್ವ ಮುಂಗಾರು ಮಳೆ ಸಾಮಾನ್ಯವಾಗಿ ಸಂಜೆ ವೇಳೆಗೆ ಬರಲಿದ್ದು, ಉತ್ತಮ ಮಳೆ ಬಂದರೆ, ನಗರದಲ್ಲಿ ನೀರಿನ ಸಮಸ್ಯೆ ಕೊಂಚ ಮಟ್ಟಿಗೆ ಸುಧಾರಿಸಬಹುದು.
ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಹಾಗಾಗಿ ನೀರಿನ ರೇಷನಿಂಗ್ ಮಾಡಲಾಗುತ್ತಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಂತೆ ಸರ್ವಧರ್ಮಿಯರು ಈಗಾಗಲೇ ಮಳೆಗಾಗಿ ಪ್ರಾರ್ಥನೆಯನ್ನೂ ನೆರವೇರಿಸಿದ್ದಾರೆ.
ಹವಾಮಾನ ಇಲಾಖೆಯು ಈಗಾಗಲೇ ನೀಡಿರುವ ಮುನ್ಸೂಚನೆಯ ಪ್ರಕಾರ ಈ ಬಾರಿಯ ಮುಂಗಾರು ಜೂ. 6ರಂದು ಕೇರಳ ಕರಾವಳಿ ತೀರಕ್ಕೆ ಪ್ರವೇಶಿಸಲಿದ್ದು, ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯ ಕರಾವಳಿಗೆ ಅಪ್ಪಳಿಸಲಿದೆ. ಕಳೆದ ವರ್ಷ ಮೇ 29ಕ್ಕೆ ರಾಜ್ಯ ಕರಾವಳಿ ತೀರಕ್ಕೆ ಮುಂಗಾರು ಆಗಮಿಸಿ, ನಗರದಲ್ಲಿ ಭಾರೀ ಮಳೆಯಾಗಿತ್ತು. ಪರಿಣಾಮ ನಗರದ ತಗ್ಗು ಪ್ರದೇಶಗಳು ಮುಳುಗಡೆಯಾಗಿತ್ತು.