Advertisement

ಮತಾಂತರ ಕಾಯ್ದೆ : ಮೂಲಭೂತ ಹಕ್ಕಿಗೆ ಧಕ್ಕೆ

08:41 PM Dec 27, 2021 | Team Udayavani |

ಕೋಲಾರ: ಮತಾಂತರ ಕಾಯ್ದೆಯ ಮೂಲಕ ಜನರಿಗಿದ್ದ ಸಂವಿಧಾನಬದ್ಧ ಮೂಲಭೂತ ಹಕ್ಕನ್ನು ಕಸಿಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಆರೋಪಿಸಿದರು.

Advertisement

ನಗರದ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಕಾಂಗ್ರೆಸ್‌ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್‌ ಅವರ ಹುಟ್ಟುಹಬ್ಬದ ಅಂಗವಾಗಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಮನುಷ್ಯ ಯಾವುದೇ ಜಾತಿಯಲ್ಲಿ ಹುಟ್ಟಲಿ ಅವರು ವಿದ್ಯಾವಂತ, ಜ್ಞಾನವಂತನಾದ ನಂತರ ತನ್ನ ಪರಿಸರಕ್ಕೆ ಅನುಗುಣವಾಗಿ ಯಾವುದೇ ಜಾತಿ, ಧರ್ಮ ಸ್ವೀಕರಿಸಲು ಅವನಿಗೆ ಹಕ್ಕು ಇದೆ. ಇದನ್ನು ಮೊಟಕುಗೊಳಿಸಲಾಗಿದೆ ಎಂದು ದೂರಿದರು.

ಜನತೆ ಜಾಗೃತರಾಗಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನೇ ಕಸಿಯುವ ಪ್ರಯತ್ನವಾಗಿ ಕಠೊರ ಕಾನೂನುಗಳನ್ನು ತರಲು ಪ್ರಯತ್ನಿಸುತ್ತಿವೆ, ಈ ನಿಟ್ಟಿನಲ್ಲಿ ಜನತೆ ಜಾಗೃತರಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಅವರು, ಕಳೆದ ವರ್ಷ ವರುಣನ ಕೃಪೆಯಿಂದ ಒಳ್ಳೆಯ ಮಳೆಯಾಗಿದೆ.

ಇದೇ ರೀತಿ ಮುಂದಿನ ವರ್ಷವೂ ಸುಭಿಕ್ಷವಾಗಿರಲಿ, ಜನತೆ ಭಾತೃತ್ವದಿಂದ ಬದುಕು ನಡೆಸುವ ವಾತಾವರಣ ಇರಲಿ ಎಂದು ಶುಭ ಕೋರಿದರು. ಮತಾಂತರ ಕಾಯ್ದೆ ಸಿದ್ದರಾಮಯ್ಯ ಅವರ ಕೂಸು ಎಂಬ ಪತ್ರಕರ್ತರ ಪ್ರಶ್ನೆಗೆ ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಯಿಬಾಬಾ ಮಂದಿರದಲ್ಲಿ ಜಯದೇವ್‌ ಹುಟ್ಟುಹಬ್ಬದ ಅಂಗವಾಗಿ ನಡೆದ ವಿಶೇಷ ಪೂಜಾಕಾರ್ಯದಲ್ಲೂ ಅವರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಹುಟ್ಟುಹಬ್ಬದ ಅಂಗವಾಗಿ ಕಿಲಾರಿಪೇಟೆ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಪೂಜೆ, ನಲ್ಲೂರಮ್ಮ ಅನಾಥಾಶ್ರಮ, ಅಂತರಗಂಗೆ ವಿದ್ಯಾಸಂಸ್ಥೆ, ಮತ್ತು ಮುಸ್ಸಂಜೆ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಾರತೀಯ ದಲಿತ ಸೇನೆ ದಲಿತ ನಾರಾಯಣಸ್ವಾಮಿ ನಚಿಕೇತ ನಿಲಯದಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಡ ಮಹಿಳೆಯರಿಗೆ ಸೀರೆ ಮತ್ತು ಯುವಕರಿಗೆ ಅಂಗಿಗಳನ್ನು ದಾನ ಮಾಡಲಾಯಿತು.

Advertisement

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ರೋಟರಿ ಅಧ್ಯಕ್ಷ ಸಿಎಂಆರ್‌ ಶ್ರೀನಾಥ್‌, ಕಾರ್ಯದರ್ಶಿ ಎಸ್‌.ಸುಧಾಕರ್‌, ಜೆಡಿಎಸ್‌ ಮುಖಂಡ ಬಣಕನಹಳ್ಳಿ ನಟರಾಜ್‌, ಕಾಂಗ್ರೆಸ್‌ ವಿವಿಧ ಘಟಕಗಳ ಪದಾಧಿಕಾರಿಗಳಾದ ಊರುಬಾಗಿಲು ಶ್ರೀನಿವಾಸ್‌, ಕಾರ್ಗಿಲ್‌ ವೆಂಕಟೇಶ್‌, ದಳಸನೂರು ಗೋಪಾಲಕೃಷ್ಣ, ಎಸ್ಟಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್‌, ಖಾದ್ರಿಪುರ ಬಾಬು, ಮುಖಂಡರಾದ ಕಿಲಾರಿಪೇಟೆ ಮುನಿವೆಂಕಟಪ್ಪ, ಚಾಂದ್‌ಪಾಷ, ಬಾಬಾ ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next