Advertisement

ಮಾಧ್ಯಮದವರೆದುರೇ ಕೈ ಮುಖಂಡರ ವಾಗ್ವಾದ!

05:37 AM Feb 23, 2019 | |

ದಾವಣಗೆರೆ: ಯಾವುದೇ ಮುನ್ಸೂಚನೆ ಇಲ್ಲದೆ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂಬ ವಿಚಾರವಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲೇ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಎಸ್‌.ಎಸ್‌. ಪ್ರಕಾಶಂ ಮತ್ತು ಜಿಲ್ಲಾ
ಅಧ್ಯಕ್ಷ ಅಲ್ಲಾವಲಿ ಗಾಜಿಖಾನ್‌ ನಡುವೆ ಮಾತಿನ ಚಕಮಕಿ ನಡೆದಿದೆ.

Advertisement

ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಎಸ್‌.ಎಸ್‌. ಪ್ರಕಾಶಂ ಮತ್ತು ಜಿಲ್ಲಾ ಅಧ್ಯಕ್ಷ ಅಲ್ಲಾವಲಿ ಗಾಜಿಖಾನ್‌ ಇಬ್ಬರು ಒಟ್ಟಿಗೆ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಪ್ರಕಾಶಂ ದಾವಣಗೆರೆ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ಕೆ.ಸಿ. ಲಿಂಗರಾಜ್‌ ಅವರನ್ನು ನೇಮಕ ಮಾಡಿರುವ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಅಲ್ಲಾವಲಿ ಗಾಜಿಖಾನ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
 
“ನಾನು ಜಿಲ್ಲಾಧ್ಯಕ್ಷ ಇಲ್ಲೇ ಇದ್ದೇನೆ. ನೀವು ಮತ್ತೂಬ್ಬರನ್ನು ಆಯ್ಕೆ ಮಾಡಿರುವ ಬಗ್ಗೆ ಹೇಳುತ್ತಿದ್ದೀರಲ್ಲ. ಇದು ಸರಿಯಲ್ಲ. ಒಪ್ಪುವುದಿಲ್ಲ ಎಂದು ಹೇಳಿದರು. ಕುಳಿತಕೊಳ್ಳಪ್ಪ, ಅದೆಲ್ಲಾ ಹೇಳುವ ಅಧಿಕಾರ ನಿನಗೆ ಇಲ್ಲ ಎಂದಾಗ ನಿಮಗೂ ಅಧಿಕಾರ ಇಲ್ಲ. ನನಗೆ ಒಂದು ಮಾತು ತಿಳಿಸದೆ ಏಕಾಏಕಿ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಗಾಜಿಖಾನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
 
ಇದು ಸಂಘಟನೆ, ಪಕ್ಷದ ವಿಚಾರ. ಇಲ್ಲಿ ಮಾತನಾಡುವುದು ಬೇಡ. ನನ್ನ ಕಚೇರಿ ಬನ್ನಿ. ಅಲ್ಲಿ ಮಾತನಾಡೋಣ ಎಂದು ಪ್ರಕಾಶಂ ಹೇಳಿದರು. ನೀವು ಪ್ರಸ್‌ಮೀಟ್‌ನಲ್ಲೇ ನನ್ನ ವಿಷಯ ಪ್ರಸ್ತಾಪ ಮಾಡಿದ್ದರಿಂದಲೇ ನಾನೂ ಇಲ್ಲೇ ಪ್ರಸ್ತಾಪ ಮಾಡಿದ್ದೇನೆ ಎಂದು ಗಾಜಿಖಾನ್‌ ಹೇಳಿದರು. ಇದೇ ವಿಚಾರವಾಗಿ ಕೆಲ ಕಾಲ ವಾಗ್ವಾದ ನಡೆಯಿತು.

ಆ.10 ರಂದು ರಾಜೀವಗಾಂಧಿ ಜ್ಯೋತಿ ಯಾತ್ರೆ ದಾವಣಗೆರೆಗೆ ಬಂದಾಗ ಈ ಆಸಾಮಿ (ಅಲ್ಲಾವಲಿ ಗಾಜಿಖಾನ್‌) ಇರಲೇ ಇಲ್ಲ. ಇನ್‌ ಆ್ಯಕ್ಟಿವ್‌ ಆಗಿದ್ದಾರೆ ಮತ್ತು ಮುಖಂಡರೇ ಇವರನ್ನು ತೆಗೆದು ಹಾಕಿ ಎಂದಿರುವ ಕಾರಣಕ್ಕೆ ತೆಗೆದು ಹಾಕಲಾಗಿದೆ. ಲಿಂಗರಾಜ್‌ ನೇಮಕ ಮಾಡುವಂತೆ ಶಾಮನೂರು ಶಿವಶಂಕರಪ್ಪ ಅವರೇ ಪತ್ರ ನೀಡಿದ್ದಾರೆ ಎಂದು ಪ್ರಕಾಶಂ ಹೇಳಿದರು.

ಅಧ್ಯಕ್ಷರು ಹೇಳುತ್ತಿರುವುದೆಲ್ಲಾ ಸುಳ್ಳು. ನಾನು ಮುಖ್ಯ ಕಾಂಗ್ರೆಸ್‌ಗಿಂತ ಹೆಚ್ಚಿನ ಕೆಲಸ ಮಾಡಿದ್ದೇನೆ. ಅದಕ್ಕೆ ಸಾಕಷ್ಟು ದಾಖಲೆ ಇವೆ. ಶಾಮನೂರು ಶಿವಶಂಕರಪ್ಪನವರು ನನಗೂ ಪತ್ರ ನೀಡಿದ್ದಾರೆ. ನನ್ನನ್ನು ತೆಗೆದು ಹಾಕುವ ಅಧಿಕಾರ ಇವರಿಗೆ ಇಲ್ಲ ಎಂದು ಅಲ್ಲಾವಲಿ ಗಾಜಿಖಾನ್‌
ಒಂದು ಹಂತದಲ್ಲಿ ರಾಜ್ಯ ಅಧ್ಯಕ್ಷ ಪ್ರಕಾಶಂ ರಾಜೀನಾಮೆಗೂ ಒತ್ತಾಯಿಸಿದರು. 

ಇತರ ಮುಖಂಡರು ಎರಡೂ ಕಡೆಯವರನ್ನು ಸಮಾಧಾನಗೊಳಿಸಿದ ನಂತರ ಸುದ್ದಿಗೋಷ್ಠಿ ಮುಂದುವರೆಯಿತು. ಸುದ್ದಿಗೋಷ್ಠಿಯಲ್ಲಿ ಇಬ್ಬರ ನಡುವಿನ ಮಾತಿನ ಚಕಮಕಿ ವಿಷಯ ಪ್ರಸ್ತಾಪಿಸಿದಾಗ ಮತ್ತೆ ವಾಗ್ವಾದ ನಡೆಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next