ಮೈಸೂರು: ಕಳೆದ ಹತ್ತಿಪ್ಪತ್ತು ವರ್ಷಗಳ ಹಿಂದೆ ವಾಣಿಜ್ಯಾತ್ಮಕವಾಗಿ ಉತ್ತುಂಗದಲ್ಲಿದ್ದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಮೈಸೂರು ಆರ್ಥಿಕತೆಯ ಕೇಂದ್ರವಾಗಿದ್ದವು. ನಗರದಲ್ಲಿ ಶತಮಾನದಿಂದ ವಾಣಿಜ್ಯಾತ್ಮಕವಾಗಿ ನಗರದ ಅರ್ಥಿಕತೆ ಸದೃಢಗೊಳಿಸುವಲ್ಲಿ ಈ ಎರಡೂ ಕಟ್ಟಡಗಳದ್ದು ಸಿಂಹಪಾಲು. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ವಾಣಿಜ್ಯಾತ್ಮಕವಾಗಿ ಮೈಸೂರಿಗೆ ಕಾಣಿಕೆ ನೀಡಿದ ಅವಳಿಕಟ್ಟಡಗಳಾಗಿವೆ. ಏಕೆಂದರೆ 20 ವರ್ಷಗಳ ಹಿಂದೆ ಮಾಲ್, ವಾಣಿಜ್ಯ ಮಳಿಗೆಗಳು ಇಲ್ಲದ ಸಂದರ್ಭ ಈ ಕಟ್ಟಡಗಳಲ್ಲಿ ನಡೆಯುತ್ತಿದ್ದ ವಾಣಿಜ್ಯ ವ್ಯವಹಾರಗಳು ಮೈಸೂರಿನ ಆರ್ಥಿಕತೆಯ ವೇಗ ಹೆಚ್ಚಿಸಿದ್ದವು.
ಈ ಎರಡೂ ಕಟ್ಟಡಗಳು ನಗರದ ಹೃದಯ ಭಾಗದಲ್ಲಿರುವುದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಲು ಕಾರಣವಾಗಿದ್ದಲ್ಲದೇ, ಆರ್ಥಿಕತೆಯ ಬೆಳವಣಿಗೆ ನೆರವಾಯಿತು. ಡಿ. ದೇವರಾಜ ಅರಸು ರಸ್ತೆ, ಸಯ್ನಾಜಿರಾವ್ ರಸ್ತೆ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳು ಪ್ರಮುಖವಾಗಿ ವಾಣಿಜ್ಯ ಕಟ್ಟಡಗಳು ಇಂದು ಮುನ್ನೆಲೆಗೆ ಬರಲು ಈ ಅವಳಿ ಕಟ್ಟಡಗಳೇ ಕಾರಣ. ಒಂದು ವೇಳೆ ಈ ಕಟ್ಟಡಗಳು ಇಲ್ಲದಿದ್ದರೆ, ದೇವರಾಜ ಅರಸು ರಸ್ತೆ, ಸಯ್ನಾಜಿ ರಾವ್ ರಸ್ತೆ, ಧನ್ವಂತಿರಿ ರಸ್ತೆ ಈ ಮಟ್ಟಕ್ಕೆ ಅಭಿವೃದ್ಧಿಯಾಗುತ್ತಿರಲಿಲ್ಲ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.
ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ಇದ್ದ 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೆ ಸದಾ ಜನದಟ್ಟಣೆಯಿಂದ ಕೂಡಿದ್ದ ಪ್ರದೇಶವಾಗಿತ್ತು. ಇದರಂತೆ ದೇವರಾಜ ಮಾರುಕಟ್ಟೆಯೂ ವಾಣಿಜ್ಯ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದುಕೊಂಡ ಸ್ಥಳ. ಆದರೆ ಈ ಎರಡೂ ಅವಳಿ ಕಟ್ಟಡಗಳು ಸಮರ್ಪಕ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿವೆ.
ಅವಳಿ ಕಟ್ಟಡ ಉಳಿವಿಗೆ ಯದುವೀರ್ ಬೆಂಬಲ: ಈ ಎರಡೂ ಅವಳಿ ಕಟ್ಟಡಗಳ ಅಳಿವು-ಉಳಿವು ಚರ್ಚೆಯ ಕಾವು ಹೆಚ್ಚಾಗಿದ್ದು, ಒಂದೆಡೆ ಕಟ್ಟಡವನ್ನು ನೆಲಸಮಗೊಳಿಸಿ, ಅದೇ ಮಾದರಿಯಲ್ಲಿ ಕಟ್ಟಡ ಕಟ್ಟಬೇಕು ಎಂಬ ಅಭಿಪ್ರಾಯ ವ್ಯಕ್ತವಾದರೆ, ಈಗಿರುವ ಕಟ್ಟಡವನ್ನು ಹಂತ ಹಂತವಾಗಿ ನವೀಕರಿಸಿ ಸಂರಕ್ಷಣೆ ಮಾಡಬೇಕು ಎಂಬುದು ಮತ್ತೂಂದು ಬಣದ ಒತ್ತಾಯ. ಇವೆರೆಡರ ಮಧ್ಯೆ ಕಟ್ಟಡವನ್ನು ಉಳಿಸಿಕೊಳ್ಳಬೇಕು ಎಂಬ ಹೋರಾಟವೂ ರೂಪುಗೊಂಡಿದೆ. ಇದಕ್ಕೆ ರಾಜವಂಶಸ್ಥ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಬೆಂಬಲ ನೀಡಿದ್ದಾರೆ.
ಇತ್ತೀಚೆಗೆ ಮಾರುಕಟ್ಟೆಗೆ ದಂಪತಿ ಭೇಟಿ ನೀಡಿ ಕಟ್ಟಡವನ್ನು ಪೂರ್ಣ ವೀಕ್ಷಿಸುವುದರ ಜೊತೆಗೆ, ಅಲ್ಲಿನ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಮಾರುಕಟ್ಟೆ ಕೆಡವಿ ಹೊಸ ಕಟ್ಟಡ ನಿರ್ಮಿಸಕೂಡದು. ಮಾರುಕಟ್ಟೆಯನ್ನು ನವೀಕರಿಸಿದರೆ, ಕನಿಷ್ಠ 100 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಾರಂಪರಿಕ ತಜ್ಞರು ಕಟ್ಟಡವನ್ನು ಸೂಕ್ತವಾಗಿ ಪರಿಶೀಲನೆ ನಡೆಸಬೇಕು. ಮಾರುಕಟ್ಟೆ ಮೈಸೂರಿನ ಪ್ರಮುಖ ಗುರುತು. ಹೀಗಾಗಿ ಇದನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಸರ್ಕಾರದ ತೀರ್ಮಾನದ ಬಳಿಕ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ. ಜೊತೆಗೆ ಯಾವುದೇ ಕಾರಣಕ್ಕೂ ವ್ಯಾಪಾರಿಗಳ ಕೈಬಿಡುವುದಿಲ್ಲ ಎಂದು ಹೇಳಿದ್ದರು. ಇದರಿಂದ ಕಟ್ಟಡ ಉಳಿಸಿಕೊಳ್ಳುವ ಹೋರಾಟಕ್ಕೆ ಮತ್ತಷ್ಟು ಚೈತನ್ಯ ಸಿಕ್ಕಿದಂತಾಗಿದೆ.
ತಂತ್ರಜ್ಞಾನದಿಂದ ಕಟ್ಟಡ ಉಳಿಸಿ: ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಿ ಸರ್ಕಾರದಿಂದ ಹಣ ತಂದು ಸದ್ಯ ಇರುವ ಕಟ್ಟಡವನ್ನು ಉಳಿಸಿಕೊÛಬೇಕು. ಈಗಾಗಲೆ ವಿಶ್ವದಾದ್ಯಂತ ನಾನಾ ತಾಂತ್ರಜ್ಞಾನವನ್ನು ಅಳವಡಿಸಿಕೊಂಡು ಕಟ್ಟಡಗಳನ್ನು ಇರುವ ಸ್ಥಿತಿಯಲ್ಲಿಯೆ ಅಭಿವೃದ್ಧಿಪಡಿಸಿ¨ªಾರೆ. ಅದನ್ನೆ ನಾವೂ ಮಾದರಿಯಾಗಿಟ್ಟುಕೊಂಡು ಎರಡೂ ಕಟ್ಟಡಗಳನ್ನು ನವೀಕರಿಸಬಹುದು. ಇಚ್ಛಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆ ಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಟ್ಟಡ ನಿರ್ವಹಣೆಯಾದರೆ ಇನ್ನೂ 100 ವರ್ಷ ಬಾಳಿಕೆ…
1886ರಲ್ಲಿ ಗವರ್ನರ್ ಲ್ಯಾನ್ಸ್‌ಡೌನ್ ಭೇಟಿ ನೆನಪಿಗಾಗಿ ನಿರ್ಮಿಸಿದ ಲ್ಯಾನ್ಸ್‌ಡೌನ್ ಕಟ್ಟಡ ಇಂದಿನ ಶಿವರಾಂಪೇಟೆವರೆಗೂ ಹಬ್ಬಿತ್ತು. ನಂತರ ರಸ್ತೆಗಾಗಿ ಕಟ್ಟಡವನ್ನು ತೆರವುಗಳಿಸಲಾಗಿತ್ತು. ಜೊತೆಗೆ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಸಂತೆಯಾಗಿದ್ದ ದೇವರಾಜ ಮಾರುಕಟ್ಟೆ, 10ನೇ ಚಾಮರಾಜ ಒಡೆಯರ್ ಕಾಲದಲ್ಲಿ ಓಪನ್ ಮಾರ್ಕೆಟ್ ಆಗಿ ಪರಿವರ್ತನೆಯಾಯಿತು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ವಾಣಿಜ್ಯದ ದೃಷ್ಟಿಯಿಂದ ದೇವರಾಜ ಮಾರುಕಟ್ಟೆ ನಿರ್ಮಿಸಿದರು. ಆದರೆ ಈ ಎರಡೂ ಕಟ್ಟಡಗಳು ನಿರ್ವಹಣೆ ಇಲ್ಲದೇ ಶಿಥಿಲಗೊಳ್ಳುತ್ತಿವೆ. ಸಮರ್ಪಕವಾಗಿ ನಿರ್ವಹಣೆ ಮತ್ತು ಸಂರಕ್ಷಣೆ ಮಾಡಿದರೆ ಇನ್ನೂ ನೂರು ವರ್ಷಗಳ ಕಾಲ ಗಟ್ಟಿಯಾಗಿರುತ್ತವೆ. ಆದರೆ ಕೆಲವರಿಗೆ ಈ ಎರಡೂ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕೆಂಬ ಹಠ. ಮಾರುಕಟ್ಟೆ ಕಟ್ಟಡ ಕುಸಿತ ಮಾನವ ಪ್ರೇರಿತವಾದುದು.
-ಈಚನೂರು ಕುಮಾರ್, ಇತಿಹಾಸ ತಜ್ಞ
* ಸತೀಶ್ ದೇಪುರ