ಜೇವರ್ಗಿ: ದೇಶದ ಅಭಿವೃದ್ಧಿಯಲ್ಲಿ ಅದಾನಿ, ಅಂಬಾನಿ ಕೊಡುಗೆಗಿಂತಲೂ ರೈತರು ಹಾಗೂ ಕೂಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪ್ಯಾಧ್ಯಕ್ಷೆ ಕೆ.ನೀಲಾ ಹೇಳಿದರು.
ತಾಲೂಕಿನ ಕೋಳಕೂರ ಗ್ರಾಮದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪ್ರಾಂತ ಕೂಲಿಕಾರರ ಸಂಘದ ನೂತನ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಕಣ್ಣು, ಕಿವಿ ಹಾಗೂ ಕರಳು ಇಲ್ಲದ ಸರ್ಕಾರಗಳಿಂದ ಜನ ಬೇಸತ್ತು ಹೋಗಿದ್ದಾರೆ ಎಂದರು.
ರೈತರು, ಕೂಲಿಕಾರ್ಮಿಕರು, ಬಡವರ ಕಷ್ಟಗಳಿಗೆ ಸ್ಪಂದಿಸದ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು. ದಿನೇದಿನೇ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ, ಅಡುಗೆ ಎಣ್ಣೆ ದುಬಾರಿಯಾಗಿದೆ. ಅನ್ನದಾತ ಬೀದಿಗೆ ಬಂದಿದ್ದಾನೆ. ಡಿಜಿಟಲ್ ಇಂಡಿಯಾ ಮಾಡುತ್ತೇನೆ ಎಂದವರು ದೇಶವನ್ನು ದಿವಾಳಿ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ರೈತರು, ಕೂಲಿಕಾರ್ಮಿಕರನ್ನು ನೆನಪು ಮಾಡಿಕೊಳ್ಳುವ ರಾಜಕಾರಣಿಗಳು ಬೇಸಿಗೆ ಕಾಲದಲ್ಲಿ ಒಮ್ಮೆಯಾದರೂ ಬಂದು ರೈತರ, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸುವ ಕೆಲಸ ಮಾಡದಿರುವುದು ದುರ್ದೈವದ ಸಂಗತಿ ಎಂದರು. 200 ದಿನಗಳ ಕಾಲ ಉದ್ಯೋಗ ಕಾತ್ರಿ ಕೆಲಸ ನೀಡಬೇಕು. 600 ವೇತನ ಹೆಚ್ಚಳ ಮಾಡಬೇಕು ಹಾಗೂ ಸಮಯಕ್ಕೆ ಸರಿಯಾಗಿ ಕೂಲಿ ಹಣವನ್ನು ಖಾತೆಗೆ ಜಮಾ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ರೈತರು, ಕೂಲಿಕಾರರ ಸಹಕಾರ ಅಗತ್ಯವಾಗಿದೆ. ಸರ್ಕಾರಗಳು ರೈತರಿಗೆ ಸೌಲಭ್ಯ ಕೊಟ್ಟು ಅನುಕೂಲ ಕಲ್ಪಿಸಿಕೊಡುವುದಿಲ್ಲವೋ ಅಲ್ಲಿಯ ವರೆಗೆ ರೈತರು ಸುಧಾರಣೆಯಾಗಲು ಸಾಧ್ಯವಿಲ್ಲ. ಸಮಸ್ಯೆಗಳ ವಿರುದ್ಧ ಸಂಘರ್ಷ ಮಾಡಿ, ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಇದೇ ವೇಳೆ ಕರ್ನಾಟಕ ಪ್ರಾಂತ ರೈತ ಕೂಲಿಕಾರ ಸಂಘದ ಗ್ರಾಮ ಘಟಕದ ನೂತನ ಅದ್ಯಕ್ಷರಾಗಿ ಬಸವರಾಜ ನಡುವಿನಕೇರಿ ಅವರನ್ನು ನೇಮಿಸಲಾಯಿತು. ಜನವಾದಿ ಸಂಘಟನೆಯ ಮುಖಂಡರಾದ ಜಗದೇವಿ ನೂಲ್ಕರ್, ಜಗದೇವಿ ಚಂದನಕೇರಾ, ಚಂದ್ರಪ್ಪ ಹಾವನೂರ, ಬಾಬು ಹಾವನೂರ, ಲಿಂಗರಾಜ ಹಾವನೂರ, ಸಿದ್ಧರಾಮ ಹರವಾಳ, ಮಲ್ಲಯ್ಯಸ್ವಾಮಿ ನಂದೂರಮಠ, ರುದ್ರಯ್ಯ ಕುರನಳ್ಳಿ, ಸಿದ್ಧಣ್ಣ ಹಂಗರಗಿ, ಬಸವರಾಜ ಕಟ್ಟಿ, ನಿಂಗಣ್ಣ ಆಡೀನ್, ಮಲ್ಲಿಕಾರ್ಜುನ ಗುತ್ತಾ, ಬಸವರಾಜ, ರಾಜಶೇಖರ ಬೂಸಾ, ಶ್ರೀಶೈಲ ಕುಂಬಾರ, ಭೀಮಾಶಂಕರ ಬಿದನೂರ, ರಾಜು ತಳವಾರ, ಶರಣಮ್ಮ ಪರಸಗೊಂಡ ಹಾಗೂ ಗ್ರಾಮ ಘಟಕದ ಪದಾಕಾರಿಗಳು, ರೈತರು, ಕೂಲಿಕಾರ್ಮಿಕರು ಇದ್ದರು.