ಉಡುಪಿ: ಜಿಲ್ಲೆ ಮಾದಕ ವ್ಯಸನಮುಕ್ತವಾಗಬೇಕಿದ್ದಲ್ಲಿ ವೈದ್ಯಕೀಯ ಕ್ಷೇತ್ರದ ಕೊಡುಗೆ ತುಂಬಾ ಅವಶ್ಯವಾಗಿದೆ. ಮಕ್ಕಳು ಹೆತ್ತವರಿಗಿಂತ ಶಿಕ್ಷಕರ ಹಾಗೂ ವೈದ್ಯರ ಮಾತಿಗೆ ಹೆಚ್ಚು ಮಹತ್ವ ಕೊಡುವವರಾಗಿದ್ದು, ಅವರನ್ನು ತಿದ್ದಿ, ಉತ್ತಮ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ವೈದ್ಯಾಧಿಕಾರಿಯವರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದರು.
ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಡಿಎಚ್‌ಒ ಕಚೇರಿಯಲ್ಲಿ ಉಡುಪಿ ಮಾದಕ ದ್ರವ್ಯ ಲೇಪಿತ ಆಹಾರೋತ್ಪನ್ನಗಳ ಕುರಿತು ನಡೆದ ಜಾಗೃತಿ ಮತ್ತು ತಪಾಸಣೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಅಧೀಕ್ಷಕ ಡಾ| ಅರುಣ್ ಕೆ. ಮಾತನಾಡಿ, ಶಾಲಾ-ಕಾಲೇಜುಗಳ ಸಮೀಪ ವಿರುವ ಗೂಡಂಗಡಿ ಹಾಗೂ ಇತರ ಅಂಗಡಿಗಳಲ್ಲಿ ಮಾದಕ ದ್ರವ್ಯ ಲೇಪಿತ ಚಾಕೊಲೆಟ್, ಇನ್ನಿತರ ತಿಂಡಿ-ತಿನಿಸುಗಳು ಈಗಾಗಲೇ ರಾಜ್ಯದ ಕೆಲವು ಕಡೆಗಳಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದವರು ಹೆಚ್ಚಿನ ಗಮನಹರಿಸಿ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಮಂಗಳೂರಿನ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಹಿರಿಯ ಸೈಂಟಿಫಿಕ್ ಅಧಿಕಾರಿ ಡಾ| ಗಿರೀಶ್ ಕೆ.ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಮಾದಕ ವ್ಯಸನದ ಬಗ್ಗೆ ಮಾಹಿತಿ ನೀಡಿ, ಆಹಾರೋತ್ಪನ್ನಗಳಲ್ಲಿ ಬಳಕೆಯಾಗಿರುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ಬಗ್ಗೆ ವಿವರಿಸಿದರು.ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಡಿಎಚ್‌ಒ ಡಾ| ಎಚ್. ನಾಗಭೂಷಣ ಉಡುಪ ಸ್ವಾಗತಿಸಿದರು. ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ಡಾ| ಪ್ರೇಮಾನಂದ ವಂದಿಸಿದರು.