ಮುದ್ದೇಬಿಹಾಳ: ಮಠಗಳು ಅನಾದಿ ಕಾಲದಿಂದಲೂ ಸಮಾಜೋದ್ಧಾರ, ಧರ್ಮ ಜಾಗೃತಗೊಳಿಸುವ ಕೆಲಸ ಮಾಡಿ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ನಡೆಸುವುದಕ್ಕೆ ಅವಕಾಶ ಮಾಡಿಕೊಡುತ್ತಿವೆ ಎಂದು ಇಂಗಳೇಶ್ವರ ವಚನಶಿಲಾ ಮಂಟಪದ ಚನ್ನಬಸವ ಸ್ವಾಮೀಜಿ ಹೇಳಿದರು.
ಹಳೆ ಕಾಯಿಪಲ್ಯೆ ಮಾರುಕಟ್ಟೆ ಬಳಿಯಿರುವ ಖಾಸ್ಗತೇಶ್ವರ ಮಠದಲ್ಲಿ ನಡೆದ ಶ್ರೀಮಠದ ಆರನೇ ವಾರ್ಷಿಕೋತ್ಸವ, ಧರ್ಮಸಭೆ ಮತ್ತು ಖಾಸ್ಗತೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಖಾಸ್ಗತೇಶ್ವರ ಮಠದ ಪೀಠ ಅಲಂಕರಿಸಿರುವ ಸಿದ್ದಲಿಂಗದೇವರು ಇನ್ನೂ ಚಿಕ್ಕವರು. ಇವರನ್ನು ಭಕ್ತರು ತಮ್ಮ ಮನೆ ಮಗನಂತೆ ಜೋಪಾನ ಮಾಡಿ ಬೆಳೆಸಬೇಕು. ಸಿದ್ದಲಿಂಗದೇವರಿಗೆ ಎಲ್ಲ ರೀತಿಯ ಸಹಾಯ, ಸಹಕಾರ, ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಚಿತ್ತಾಪುರ ಕಂಬಳೇಶ್ವರ ಸಂಸ್ಥಾನಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ರಾಜಕಾರಣಿಗಳು ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯೋದನ್ನು ನಿಲ್ಲಿಸಬೇಕು. ಸಮಾಜ ಒಡೆದಲ್ಲಿ ರಾಜಕಾರಣಿಗಳಿಗೆ ಅನುಕೂಲ ಎಂದು
ತಿಳಿದುಕೊಂಡಿದ್ದು ತಪ್ಪು ಎಂದರು.
ಹೊಸಳ್ಳಿ ಸಂಸ್ಥಾನಮಠದ ಅಭಿನವ ಭೂದೇಶ್ವರ ಶ್ರೀ, ಹಿರೂರು ಅನ್ನದಾನೇಶ್ವರ ಸಂಸ್ಥಾನಮಠದ ಜಯಸಿದ್ದೇಶ್ವರ ಶಿವಾಚಾರ್ಯ ಶ್ರೀ, ಬಳ್ಳಾರಿ ಹಿರೇಹಡಗಲಿಯ ಅಭಿನವ ಹಾಲಶ್ರೀ ವೀರಪ್ಪಜ್ಜ ಸ್ವಾಮೀಜಿ, ಹಿರಿಯ ಸಾಹಿತಿ ಪ್ರೊ| ಬಿ.ಎಂ. ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಜಿ. ಪಾಟೀಲ ಮಾತನಾಡಿದರು. ಶ್ರೀಮಠದ ಸಿದ್ದಲಿಂಗ ದೇವರು, ವಕೀಲ ವಿಜಯಮಹಾಂತೇಶ ಸಾಲಿಮಠ, ಶಾಂತಯ್ಯ ಶಿವಯೋಗಿಮಠ, ಶ್ರೀಮಠದ ಉಸ್ತುವಾರಿ ಶ್ರೀಧರ ಕಾರಗನೂರಮಠ ಇದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಸಾಪ ತಾಲೂಕಾಧ್ಯಕ್ಷ ಎಂ.ಬಿ. ನಾವದಗಿ, ಹಸಿರು ತೋರಣ ಬಳಗದ ಅಧ್ಯಕ್ಷ ಕೆ.ಆರ್. ಕಾಮಟೆ, ಮಹಿಳಾ ಒಕ್ಕೂಟ ಅಧ್ಯಕ್ಷೆ ಗಿರಿಜಾ ಕಡಿ, ಸಂತ ಶಿಶುನಾಳ ಷರೀಫ ಪ್ರಶಸ್ತಿ ಪುರಸ್ಕೃತ ನಿವೃತ್ತ ಸಂಗೀತ ಶಿಕ್ಷಕ ಎ.ಎಸ್. ವಠಾರ, ಸಿದ್ದಯ್ಯ ಕಲ್ಯಾಣಮಠ, ಪ್ರವಚನಕಾರ ಗದುಗಿನ ವಿರುಪಾಕ್ಷಯ್ಯ ಶಾಸ್ತ್ರಿ, ಸಂಗೀತ ಶಿಕ್ಷಕರಾದ ಭೀಮಾರೆಡ್ಡಿ
ಗೊಂದಗನೂರ, ಬಸವರಾಜ ಚೊಕಾವಿ ಅವರನ್ನು ಸನ್ಮಾನಿಸಲಾಯಿತು. ವಿಜಯಕುಮಾರ ಹಿರೇಮಠ ಸ್ವಾಗತಿಸಿದರು. ರಾಜೇಂದ್ರಗೌಡ ರಾಯಗೊಂಡ ನಿರೂಪಿಸಿದರು. ಉದಯಸಿಂಗ್ ರಾಯಚೂರ ವಂದಿಸಿದರು.