ವಿಜಯಪುರ: ಕರ್ನಾಟಕದ ಏಕೀಕರಣಕ್ಕೆ ಆಲೂರು ವೆಂಟಕರಾಯರ ಕೊಡುಗೆ ಅಪಾರವಾಗಿದ್ದು ನಾಡಿನ ಗತ ವೈಭವದ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ಏಕೀಕರಣದ ಕಿಚ್ಚನ್ನು ಹತ್ತಿಸಿ ಬಡಿದೆಬ್ಬಿಸಿದ ಕೀರ್ತಿ ಸಲ್ಲುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ತಿಳಿದರು
ಪಟ್ಟಣದ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಜಿಲ್ಲಾ ಕಸಾಪ ವತಿಯಿಂದ ಆಯೋಜಿಸಿದ್ದ ಆಲೂರು ವೆಂಕಟರಾಯರ ಸ್ಮರಣಾರ್ಥ ಉಪನ್ಯಾಸದಲ್ಲಿ ಮಾತನಾಡಿದರು.
ಏಕೀಕರಣಕ್ಕೂ ಮೊದಲ ಕರ್ನಾಟಕ ರಾಜ್ಯ ಹೈದರಾಬಾದ್ ಕರ್ನಾಟಕ ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕಗಳಲ್ಲಿ ಹರಿದು ಹಂಚಿ ಹೋಗಿತ್ತು. ಅದರಂತೆ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಮರಾಠಿ ಶಿಕ್ಷಣ ನೀಡಲಾಗುತ್ತಿತ್ತು. ಇದನ್ನು ಮನಗಂಡ ವೆಂಕಟರಾಯರು ಏಕೀಕರಣ ಚಳವಳಿ ನಡೆಸಲು ತಮ್ಮ ಶಾಲಾ ವಿದ್ಯಾರ್ಥಿ ಸಮಯದಲ್ಲೇ ಮುಂದಾಗಿದ್ದರು. ನಾಡಿನಲ್ಲಿ ರಾಜ್ಯದ ಒಗ್ಗೂಡಿಕೆಗೆ ಪೂರಕ ಕಾರ್ಯಕ್ರಮ ನಡೆಸಿದರು ಎಂದರು.
ಮುಖ್ಯ ಶಿಕ್ಷಕ ರಾಮಯ್ಯ ಮಾತನಾಡಿ, ವೆಂಕಟರಾಯರು ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ಕನ್ನಡಿಗರಿಗೆ ಸ್ವ ಉದ್ಯೋಗ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಕರ್ನಾಟಕ ಏಕೀಕರಣ ಪರಿಷತ್ ಮೂಲಕ ಕರ್ನಾಟಕದ ಏಕೀಕರಣ ಮಾಡುವ ಮಹತ್ಕಾರ್ಯ ಮಾಡಿದ್ದರು. ತಮ್ಮ ಬಹುಮುಖ ವ್ಯಕ್ತಿತ್ವದ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆಂದರು. ಸಂಘಟನಾ ಕಾರ್ಯದರ್ಶಿ ಮುನಿರಾಜು, ಶಿಕ್ಷಕರು ಇದ್ದರು.