Advertisement

ರಾಜ್ಯದಲ್ಲಿ ಮುಂದುವರಿದ ಮಳೆ ಅಬ್ಬರ

10:48 PM Sep 24, 2019 | Lakshmi GovindaRaju |

ಬೆಂಗಳೂರು/ಹುಬ್ಬಳ್ಳಿ: ರಾಜ್ಯದ ಹಲವೆಡೆ ಮಂಗಳವಾರವೂ ವರುಣನ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆ ಸಂಬಂಧಿ ಘಟನೆಯಲ್ಲಿ ಮನೆ ಮಾಳಿಗೆ ಕುಸಿದು ಯುವತಿ ಮೃತಪಟ್ಟಿದ್ದಾಳೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಮಳೆ-ಗಾಳಿಗೆ ಮನೆಯ ಮಾಳಿಗೆ ಕುಸಿದು ಸಂಗೀತಾ ಜಗಪ್ಪ ಕತ್ತಿ (19) ಸಾವನ್ನಪ್ಪಿದ್ದಾರೆ. ಮೃತಳ ತಾಯಿ ಭಾಗ್ಯಶ್ರೀ ಅಪಾಯದಿಂದ ಪಾರಾಗಿದ್ದಾರೆ.

Advertisement

ರಾಜಧಾನಿ ಬೆಂಗಳೂರು ಸೇರಿ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರದ ಹಲವೆಡೆ ಮಳೆಯಾಗಿದ್ದು, ಸೋಮವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬಂಡೆಯೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಮಹದೇಶ್ವರ ಬೆಟ್ಟ -ಪಾಲಾರ್‌ ಮಧ್ಯೆ ಸಂಚಾರಕ್ಕೆ ಅಡಚಣೆಯಾಗಿತ್ತು. ಹಾಸನ ನಗರದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದ್ದರಿಂದ ಸಾರ್ವಜನಿಕರು ಪರದಾಡಿದರು.

ಮಂಡ್ಯ ಜಿಲ್ಲಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಕೆಲವೆಡೆ ಒಡೆದು ಬೆಳೆಗಳಿಗೆ ನೀರು ನುಗ್ಗಿದರೆ, ಮತ್ತೆ ಕೆಲವೆಡೆ ಒಡೆಯುವ ಆತಂಕದಲ್ಲಿವೆ. ಶಿಂಷಾ ನದಿ ತುಂಬಿ ಹರಿದು ಪ್ರವಾಹ ಸ್ಥಿತಿ ತಲುಪಿದೆ. ಕೆಲ ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಗೊಳಿಸಿ ಪರ್ಯಾಯ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ.

ಸೋಮವಾರ ತಡರಾತ್ರಿ ಗದಗ ಜಿಲ್ಲೆಯಲ್ಲಿ ಒಟ್ಟು 124.2 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಸತತ ಮೂರ್‍ನಾಲ್ಕು ಗಂಟೆ ಸುರಿದ ಮಳೆಯಿಂದ ಗದಗ-ಬೆಟಗೇರಿ ಅವಳಿ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ಇನ್ನು, ಮಂಗಳವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮಾರುತಗಳು ಸಕ್ರಿಯವಾಗಿದ್ದರೆ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಯಿತು.

ಶ್ರವಣಬೆಳಗೊಳದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 9 ಸೆಂ. ಮೀ. ಮಳೆಯಾಗಿದೆ. ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು(ಸೆಂ.ಮೀ.ಗಳಲ್ಲಿ): ನುಗ್ಗೇಹಳ್ಳಿ, ಬರ ಗೂರು ತಲಾ 8, ನಾಗಮಂಗಲ, ತಿಪಟೂರು ತಲಾ 7, ಮೈಸೂರು 6, ಮಂಡ್ಯ, ಕೃಷ್ಣರಾಜಪೇಟೆ, ಪಾವಗಡ, ಮಳವಳ್ಳಿ, ಮಲೆಮಹದೇಶ್ವರ ಬೆಟ್ಟ 5, ಶಿರಾ, ಹೆಸರಘಟ್ಟ 4, ಹೊಳೆನರಸೀಪುರ, ಬೆಳ್ಳೂರು 3, ಸುಬ್ರಹ್ಮಣ್ಯ, ಸೈದಾಪುರ, ಶ್ರೀರಂಗಪಟ್ಟಣ,

Advertisement

ನೆಲಮಂಗಲ, ಮಧುಗಿರಿ, ಗುಬ್ಬಿ, ಹುಲಿಯೂರುದುರ್ಗ, ಕಡೂರು, ಚಾಮರಾಜನಗರ 2, ಹೊಸದುರ್ಗ, ಹಾಸನ, ಹಳೇಬೀಡು, ಚನ್ನರಾಯ ಪಟ್ಟಣ, ಕನಕಪುರ, ಮಾಗಡಿ, ಚಿಕ್ಕಮಗಳೂರು, ಬೆಂಗಳೂರು ನಗರ, ಸರಗೂರು, ಮಡಿಕೇರಿ, ಕುಶಾಲನಗರ, ಭಾಗಮಂಡಲ, ಸೋಮವಾರಪೇಟೆ, ಕೊರಟಗೆರೆ, ಬುಕ್ಕಪಟ್ಣ, ಹೊಸಕೋಟೆ, ಆನೇಕಲ್‌ನಲ್ಲಿ 1 ಸೆಂ.ಮೀ.ಮಳೆಯಾಗಿದೆ. ಗುರುವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

ಉಕ್ಕೇರಿದ ಹಳ್ಳದಲ್ಲೇ ಶವ ಸಾಗಿಸಿ ಅಂತ್ಯಸಂಸ್ಕಾರ: ಬಿಸಿಲುನಾಡು ಬಳ್ಳಾರಿಯಲ್ಲಿ 2 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಉಕ್ಕೇರಿದ ಹಳ್ಳದಲ್ಲೇ ಶವ ಸಾಗಿಸಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಸೋಮವಾರ ಅಸುಂಡಿ ಗ್ರಾಮದಲ್ಲಿ ಪರಶುರಾಮ್‌ (45) ಎಂಬುವವರು ಹೃದಯಾಘಾತದಿಂದ ನಿಧನರಾಗಿದ್ದರು. ಗ್ರಾಮದ ಪಕ್ಕದ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದ ಆಚೆಗಿನ ಸ್ಮಶಾನಕ್ಕೆ ತೆರಳಲು ರಸ್ತೆಯೇ ಇಲ್ಲದ ಕಾರಣ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲೆಂದು ಕುಟುಂಬಸ್ಥರು ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ ಹಳ್ಳದಲ್ಲಿ ನೀರು ಕಡಿಮೆಯಾಗದ್ದರಿಂದ ಅನಿವಾರ್ಯ ವಾಗಿ ಮಂಗಳವಾರ ತುಂಬಿ ಹರಿಯುತ್ತಿರುವ ಹಳ್ಳದಲ್ಲೇ ಶವವನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next