ಬಾಗಲಕೋಟೆ: ಅಯೋಧ್ಯೆ ಶ್ರೀರಾಮನ ಜನ್ಮಭೂಮಿ. ಇದನ್ನು ನ್ಯಾಯಾಲಯವೂ ಒಪ್ಪಿಕೊಂಡಿದೆ. ಅಲ್ಲಿ ನಾವು ಶ್ರೀರಾಮ ಮಂದಿರ ಕಟ್ಟೇ ತೀರುತ್ತೇವೆ. ಇದಕ್ಕೆ ಯಾರು ಅಡ್ಡಿಪಡಿಸುತ್ತಾರೋ ನೋಡುತ್ತೇವೆ.
-ಇದು ನಗರದ ಬಸವೇಶ್ವರ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಜನಾಗ್ರಹ ಸಭೆಯಲ್ಲಿ ಕೇಳಿ ಬಂದ ಒಮ್ಮತದ ಅಭಿಪ್ರಾಯ.
ಸಹಸ್ರಾರು ಜನರ ಮಧ್ಯೆ ಹಾಗೂ ಸುಮಾರು 40ಕ್ಕೂ ಹೆಚ್ಚು ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಇದಕ್ಕೆ ಕೇಂದ್ರದ ಸಂಸತ್ ಅಧಿವೇಶನದಲ್ಲಿ ಸಂಸದರು ಒಪ್ಪಿಗೆ ನೀಡಬೇಕೆಂದು ಒತ್ತಾಯಿಸುವ ಮನವಿ ಸಲ್ಲಿಸಲಾಯಿತು.
ಜನಾಗ್ರಹ ಸಭೆಯಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು ಹಾಗೂ ಜನರ ಪರವಾಗಿ ಹಾಲಕೆರೆ-ಹೊಸಪೇಟೆಯ ಡಾ.ಸಂಗನ ಬಸವ ಸ್ವಾಮೀಜಿ ಅವರು ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಮನವಿ ಸಲ್ಲಿಸಿದರು.
ಜನಾಗ್ರಹ ಸಭೆಯ ಮುಖ್ಯ ವಕ್ತಾರರಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತದೆ ಎಂಬ ನಂಬಿಕೆ, 2019ರಲ್ಲಿ ಅದಕ್ಕೆ ಭೂಮಿಪೂಜೆ ನಡೆಯಲಿದೆ ಎಂಬ ಅಚಲ ವಿಶ್ವಾಸವೂ ಇದೆ ಎಂದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಗ್ರಿವಾಜ್ಞೆ ಅಗತ್ಯವಿಲ್ಲ. ಅಧಿವೇಶನ ನಡೆದಾಗ, ಸುಗ್ರಿವಾಜ್ಞೆ ಹೊರಡಿಸಲು ಬರುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ, ಪ್ರತ್ಯೇಕ ಕಾನೂನು ಜಾರಿಗೊಳಿಸಿ ರಾಮ ಮಂದಿರ ನಿರ್ಮಿಸಲಿ.
– ಶಂಕರ ಬಿದರಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ