Advertisement

ಮೇಲ್ಸೇತುವೆ ನಿರ್ಮಾಣ ಆಗಲೇಬೇಕು

12:49 PM Sep 24, 2019 | Team Udayavani |

ಹೊನ್ನಾವರ: ಮೇಲ್ಸೇತುವೆ ನಿರ್ಮಾಣ ಆಗದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂಬುದನ್ನು ತಿಳಿದುಕೊಂಡು ಮೇಲ್ಸೇತುವೆ ಬೇಕು ಎಂಬ ಬೇಡಿಕೆಗೆ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ನಾಗರಿಕರು ಮನವಿ ಸಲ್ಲಿಸಲು ಮೆರವಣಿಗೆಯಲ್ಲಿ ಬಂದಿದ್ದು ಜನಾಭಿಪ್ರಾಯದ ಶಕ್ತಿಪ್ರದರ್ಶನವಾಯಿತು.

Advertisement

ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಲ್ಲಿ ಒಳಗೊಂಡಿದ್ದ ಮೇಲ್ಸೇತುವೆ ಯೋಜನೆಯನ್ನು ಯಾರದೋ ಹಿತಾಸಕ್ತಿಗೆ ಕೈಬಿಟ್ಟು ರಸ್ತೆ ಅಗಲೀಕರಣವನ್ನು 45 ಮೀಟರ್‌ನಿಂದ 30 ಮೀಟರ್‌ಗೆ ಕಡಿತಗೊಳಿಸಿ ಸರ್ವಿಸ್‌ ರಸ್ತೆಗಳನ್ನೂ ಇಲ್ಲವಾಗಿಸಿದ ಐಆರ್‌ಬಿ ಕಂಪನಿ ವಿರುದ್ಧ 10 ಸಾವಿರಕ್ಕೂ ಹೆಚ್ಚು ಮಂದಿ ಹೆದ್ದಾರಿಯಲ್ಲಿಮೆರವಣಿಗೆ ನಡೆಸಿ ಮೇಲ್ಸೇತುವೆ ಬೇಕೇಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ಪ್ರಜ್ಞಾವಂತ ನಾಗರಿಕರು ಸೇರಿ ರಚಿಸಿಕೊಂಡ ಮೇಲ್ಸೇತುವೆ ಹೋರಾಟ ಸಮಿತಿ ಕರೆನೀಡಿದ್ದ ಹಕ್ಕೊತ್ತಾಯ ಮೆರವಣಿಗೆಗೆ ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಮೂಲಯೋಜನೆಯಲ್ಲಿ 45 ಮೀಟರ್‌ ಅಗಲದ ರಸ್ತೆ ಹಾಗೂ

ಮೇಲ್ಸೇತುವೆ ಇದ್ದ ಕಾರಣ ಹೆಚ್ಚಿನ ಜನರು ಪಟ್ಟಣದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಅದೇ ಕಾರಣ ಇನ್ನೂ ಕೆಲಸ ಪ್ರಾರಂಭಿಸಿಲ್ಲ ಅಂದುಕೊಂಡಿದ್ದರು. ಆದರೆ ಯೋಜನೆಗೆ ಸಂಬಂಧಪಟ್ಟ ದತ್ತಾಂಶಗಳನ್ನು

ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡಾಗ ಆಘಾತಕಾರಿ ಅಂಶ ಬಯಲಾಗಿದ್ದು ರಸ್ತೆ ಅಗಲವನ್ನು ಕಡಿತಗೊಳಿಸಿ ಮೇಲ್ಸೇತುವೆ ಯೋಜನೆ ಹಾಗೂ ಸಂಪರ್ಕ ರಸ್ತೆ ಕೈಬಿಟ್ಟು ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ.

Advertisement

ತಾಲೂಕು ಕೇಂದ್ರವಾಗಿರುವ ಹೊನ್ನಾವರದಲ್ಲಿ ಶಾಲಾ ಕಾಲೇಜುಗಳು, ಆಸ್ಪತ್ರೆ, ಸರ್ಕಾರಿ ಕಚೇರಿಗಳು ಸೇರಿದಂತೆ ತಾಲೂಕಿನ ಪ್ರತಿಯೊಬ್ಬರ ವ್ಯವಹಾರದ ಕೇಂದ್ರವಾಗಿ ರೂಪುಗೊಂಡಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ ದಿನ ಪಟ್ಟಣಕ್ಕೆ ಸುತ್ತ 28 ಹಳ್ಳಿಗಳಿಂದ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯೇ 12 ಸಾವಿರ ದಾಟುತ್ತದೆ. ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ವ್ಯವಹಾರ ಆರೋಗ್ಯ ಸಂಬಂಧ ಕೆಲಸ ಕಾರ್ಯಗಳಿಗೆ ಜನರು ಆಗಮಿಸುತ್ತಾರೆ. ಪಟ್ಟಣದ ಜನಸಂಖ್ಯೆ ಈಗಾಗಲೇ 20 ಸಾವಿರ ದಾಟಿದೆ. ಹೀಗಿರುವಾಗ ಮೂಲ ಯೋಜನೆ ಅನುಷ್ಠಾನ ಮಾಡದೆ ರಸ್ತೆಯ ಅಗಲವನ್ನು ಕಡಿಮೆ ಮಾಡಿ ಸಂಪರ್ಕ ರಸ್ತೆಗಳನ್ನೂ ಇಲ್ಲವಾಗಿಸಿದರೆ ಮುಂದಿನ ದಿನಗಳಲ್ಲಿ ತಾಲೂಕಿನ ಜನ ಕಷ್ಟ ಪಡಬೇಕಾಗುತ್ತದೆ ಎಂದು ಎಚ್ಚರಿದರು.

ಕ್ಷೇತ್ರದ ಶಾಸಕರನ್ನು ಜಿಲ್ಲೆಯ ಸಂಸದರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನುವ ಮಾತನ್ನು ಹೋರಾಟದ ಮುಂಚೂಣಿಯಲ್ಲಿರುವ ಪ್ರಮುಖರು ಹೇಳಿದ್ದಾರೆ. ಜನಾಭಿಪ್ರಾಯ ಸೂಚಿಸುವಂತೆ ಇಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬೃಹತ್‌ ಪ್ರಮಾಣದಲ್ಲಿ ಸೇರಿ ಮನವಿ ಸಲ್ಲಿಸಿದ್ದಾರೆ.

ಮೇಲ್ಸೇತುವೆ ಕಾಮಗಾರಿ ಮೊದಲಿದ್ದಂತೆ ಆರಂಭಿಸಿದರೆ ಸರ್ಕಾರಕ್ಕಾಗಲಿ ಗುತ್ತಿಗೆದಾರಕಂಪನಿಗಾಗಲೀ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ. ಈಗಾಗಲೇ 45 ಮೀಟರ್‌ಗೆ ಭೂಮಿ ವಶಪಡಿಸಿಕೊಂಡಿದ್ದು ಮಣ್ಣು ಪರೀಕ್ಷೆಯನ್ನೂ ಮಾಡಿದ್ದು ಕಂಪನಿ ಈಗಾಗಲೇ ತಾಂತ್ರಿಕ ಒಪ್ಪಿಗೆಯನ್ನೂ ಪಡೆದುಕೊಂಡಿದ್ದು ಯೋಜನೆ ಕೈ ಬಿಡುವುದಕ್ಕೆ ಯಾವುದೇ ಸಕಾರಣವಿಲ್ಲವಾದ್ದರಿಂದ ಮೇಲ್ಸೇತುವೆ ನಿರ್ಮಾಣವಾಗಲೇಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next