Advertisement

ವ್ಯವಸ್ಥಿತ ನಗರಗಳ ನಿರ್ಮಾಣ ಯೋಜನೆ ಅವಶ್ಯ

10:20 AM Feb 03, 2020 | Suhan S |

ಹುಬ್ಬಳ್ಳಿ: ನಗರಗಳು ಬೆಳೆಯುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ನಗರಗಳ ಸಮರ್ಪಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು ಅವಶ್ಯಕವಾಗಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

Advertisement

ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್‌ ಸೇವೆ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್‌) ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಶೇ.55 ಜನರು ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ. ಸಂಯುಕ್ತ ರಾಷ್ಟ್ರಗಳ ವರದಿಯನ್ವಯ 2050ರ ವೇಳೆಗೆ ನಗರವಾಸಿಗಳ ಪ್ರಮಾಣ ಶೇ.68ರಷ್ಟಾಗಲಿದೆ ಎಂಬ ಅಂದಾಜಿದೆ. ಭಾರತದಲ್ಲಿ 416 ಮಿಲಿಯನ್‌ ಜನರು ನಗರಗಳಿಗೆ ವಲಸೆ ಬರುವ ಸಾಧ್ಯತೆಯಿದೆ ಎಂದರು.

ನಗರಗಳ ಅಭಿವೃದ್ಧಿಗೆ ಸರಕಾರಗಳಿಂದ ಉತ್ತಮ ಯೋಜನೆ ಹಾಗೂ ಸಮರ್ಪಕ ಅನುಷ್ಠಾನ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅಗತ್ಯವಾಗಿದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಂಚಾರ ವ್ಯವಸ್ಥೆ ಸವಾಲಾಗಿದ್ದು, ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದರ ತಡೆ ಸೂಕ್ತ ಕ್ರಮ ಅಗತ್ಯ ಎಂದು ಹೇಳಿದರು. ಹವಾಮಾನ ಅಸ್ಥಿರತೆ ಪ್ರತಿಯೊಂದು ಅಭಿವೃದ್ಧಿ ಯೋಜನೆಗಳ ಮೇಲೆ ಪ್ರಭಾವ ಬೀರುತ್ತದೆ. ಪ್ರಕೃತಿ ವಿಕೋಪ ತಡೆದುಕೊಳ್ಳುವಂತೆ ನಗರಗಳನ್ನು ರೂಪಿಸಬೇಕಿದೆ. ವಾಯುಮಾಲಿನ್ಯ ಮಾಡದ ಇಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚಾಗಬೇಕು ಎಂದರು.

ನಗರಗಳಲ್ಲಿ ವಾಸಿಸುವ ಜನರಿಗೆ ಉಜ್ವಲ ಭವಿಷ್ಯ ಒದಗಿಸುವ ದಿಸೆಯಲ್ಲಿ ನಗರಗಳು ಹಾಗೂ ಗ್ರಾಮಗಳ ಮಧ್ಯೆ ಅಂತರ ಕಡಿಮೆಗೊಳಿಸುವುದು ಅಗತ್ಯವಾಗಿದೆ. ಎಲ್ಲರೂ ಸ್ಥಿತ್ಯಂತರದ ಭಾಗವಾದರೆ ಇದು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು. ವಾಣಿಜ್ಯನಗರ ಹುಬ್ಬಳ್ಳಿ ಹಾಗೂ ವಿದ್ಯಾನಗರ ಧಾರವಾಡದ ಮಧ್ಯೆ ಸಂಚರಿಸಲು ಬಿಆರ್‌ಟಿಎಸ್‌ ಸೇವೆ ಅನುಕೂಲತೆ ಕಲ್ಪಿಸಿದೆ. ಹು-ಧಾ ಬಿಆರ್‌ ಟಿಎಸ್‌ ಯೋಜನೆ “ಬೆಸ್ಟ್‌ ಮಾಸ್‌ ಟ್ರಾನ್ಸಿಟ್‌’ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ.ಪ್ರತಿದಿನ 85,000 ಜನರು ಬಿಆರ್‌ಟಿಎಸ್‌ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಕೆಲವುಮೆಟ್ರೋ ಲೈನ್‌ಗಿಂತ ಹೆಚ್ಚು ಜನರು ಚಿಗರಿ ಬಸ್‌ಗಳಲ್ಲಿ ಸಂಚರಿಸುತ್ತಿರುವುದು ವಿಶೇಷ. 35 ನಿಮಿಷಗಳಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ತೆರಳಬಹುದಾಗಿದೆ ಎಂದು ಹೇಳಿದರು.

ಸಣ್ಣ ನಗರಗಳು ಸ್ಮಾರ್ಟ್‌ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯ ಎಂಬುದಕ್ಕೆ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ ಯೋಜನೆ ಉತ್ತಮ ಉದಾಹರಣೆಯಾಗಿದೆ. ಚಿಗರಿ ಮಾದರಿಯಂತೆ ರಾಜ್ಯದ ವಿವಿಧ ನಗರಗಳಲ್ಲಿ ಸ್ಮಾರ್ಟ್‌ ಸಮೂಹ ಸಂಚಾರ ವ್ಯವಸ್ಥೆ ಜಾರಿಗೊಳ್ಳುವುದು ಅವಶ್ಯಕವಾಗಿದೆ ಎಂದರು.

Advertisement

ನಗರಗಳ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ರೂಪಿಸದಿದ್ದರೆ ವಾಯುಮಾಲಿನ್ಯ, ಕುಡಿಯುವ ನೀರಿನ ಕೊರತೆ, ಘನತ್ಯಾಜ್ಯ ವಿಲೇವಾರಿ, ನೈರ್ಮಲ್ಯ ಕೊರತೆಯಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಉತ್ತಮ ನಗರ ನಿರ್ಮಾಣ ಯೋಜಕರ ಜವಾಬ್ದಾರಿಯಾಗಿದೆ. ಎಂ. ವೆಂಕಯ್ಯ ನಾಯ್ಡು, ಉಪ ರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next