Advertisement

ಐಐಟಿ ಶಾಶ್ವತ ಕ್ಯಾಂಪಸ್‌ ನಿರ್ಮಾಣ ಕಾರ್ಯ ಆಮೆಗತಿ

09:52 AM Mar 22, 2017 | |

ಧಾರವಾಡ: ವಿದ್ಯಾಕಾಶಿ ಧಾರವಾಡಕ್ಕೆ ಮುಕುಟಪ್ರಾಯವಾಗಿ ಕಳೆದ ವರ್ಷದಿಂದ ಆರಂಭಗೊಂಡಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಶಾಶ್ವತ ಕಟ್ಟಡ ನಿರ್ಮಾಣ ಕಾರ್ಯ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಪೂರ್ಣ ಕಟ್ಟಡ ತಲೆ ಎತ್ತಲು ಇನ್ನೂ 5 ವರ್ಷಗಳು ಬೇಕಂತೆ.

Advertisement

ಹೀಗಂತ ಹೇಳುತ್ತಿರುವುದು ಸ್ವತಃ ಐಐಟಿ ಅಧಿಕಾರಿಗಳೇ. ಕಳೆದ ವರ್ಷ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿಯೇ 1411 ಕೋಟಿ ರೂ.ಗಳನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಡಿ ಧಾರವಾಡ ಐಐಟಿಗೆ ಕಾಯ್ದಿರಿಸಿತ್ತು. ಅಂದು ಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ಸರ್ವೇ ಕಾರ್ಯ ಮುಗಿದು ಕಾಂಪೌಂಡ್‌ ಗೋಡೆ ತಲೆ ಎತ್ತಬೇಕಿತ್ತು. ಆದರೆ ಕಾಮಗಾರಿಯಲ್ಲ, ಇನ್ನೂ ಐಐಟಿ ತನಗೆ ಸರ್ಕಾರ ನೀಡಿದ ಜಾಗವನ್ನು ಸರ್ವೇ ಮಾಡಿಕೊಳ್ಳುತ್ತಿದೆಯಷ್ಟೆ. ಆಕರ್ಷಕವಾದ ಐಐಟಿ ಮುಖ್ಯ ಕಟ್ಟಡ, ದೈತ್ಯ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣ, ವಿದ್ಯಾರ್ಥಿ ನಿಲಯ, ಕ್ಲಾಸ್‌ರೂಮ್‌ಗಳು, ಹೈಟೆಕ್‌ ಕಟ್ಟಡಗಳು ತಲೆ ಎತ್ತುವುದಕ್ಕೆ ಇಷ್ಟೊತ್ತಿಗೆ ಚಾಲನೆ ಸಿಗಬೇಕಿತ್ತು. ಆದರೆ ಈವರೆಗೂ ಐಐಟಿಗೆ ನೀಡಿರುವ 500 ಎಕರೆಯಷ್ಟು ಭೂಮಿಯ (ಅರಣ್ಯವೂ ಸೇರಿ) ಸರ್ವೇ ಕಾರ್ಯವೇ ಮುಗಿದಿಲ್ಲ. ಎಲ್ಲವೂ ಆಮೆಗತಿಯಲ್ಲಿ ಸಾಗುತ್ತಿದ್ದು, ಐಐಟಿ ಕ್ಲಾಸ್‌ಗಳು ಹೆಚ್ಚು ಕಡಿಮೆ ಇನ್ನೂ ನಾಲ್ಕೈದು ವರ್ಷಗಳ ಕಾಲ ಇಲ್ಲಿನ ವಾಲಿ ಕಟ್ಟಡದಲ್ಲಿಯೇ ನಡೆಯುವ ಅನಿವಾರ್ಯತೆ ಎದುರಾಗಿದೆ. ಅಷ್ಟೇಯಲ್ಲ, ವಾಲಿ ಸಾಲದಿದ್ದರೆ, ಪಕ್ಕದಲ್ಲಿರುವ ದಕ್ಷಿಣ ಭಾರತ
ಹಿಂದಿ ಪ್ರಚಾರ ಸಭೆ ವ್ಯಾಪ್ತಿಯ ಹೈಟೆಕ್‌ ಕಟ್ಟಡದಲ್ಲಿ ಐಐಟಿ ತರಗತಿ ನಡೆಸಲು ಚಿಂತನೆ ನಡೆದಿದೆ. 2ನೇ ವರ್ಷಕ್ಕೆ ಸಿದ್ಧತೆ: ಐಐಟಿ ಎರಡನೇ ವರ್ಷಕ್ಕೆ 450 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದು, ಕಲಿಯುವ ವಿಷಯಗಳ ಸಂಖ್ಯೆಯೂ ಹೆಚ್ಚಾಗಲಿದೆ. ಸದ್ಯಕ್ಕೆ ಮೆÂಕಾನಿಕಲ್‌, ಆಟೋಮೊಬೈಲ್‌ ಮತ್ತು ಕಂಪ್ಯೂಟರ್‌ ಇಂಜಿನಿಯರಿಂಗ್‌ ಮಾತ್ರ ಇಲ್ಲಿ ನಡೆಯುತ್ತಿದ್ದು, ಈ ವರ್ಷ ಇನ್ನಷ್ಟು ತಾಂತ್ರಿಕ
ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ. ಸದ್ಯಕ್ಕೆ ರಾಜ್ಯ ಸರ್ಕಾರದಿಂದ 7 ಕೋಟಿ ರೂ.ಗಳು ಎರಡನೇ ವರ್ಷದ ಐಐಟಿ ನಡೆಸಲು ಅಗತ್ಯ ಮೂಲಭೂತ ಸೌಕರ್ಯಕ್ಕೆ ಬಿಡುಗಡೆಯಾಗಿದ್ದು, ಬಿಟ್ಟರೆ ಶಾಶ್ವತ ಕ್ಯಾಂಪಸ್‌ನ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

507 ಎಕರೆ ಸರ್ವೇ ಆರಂಭ
ಕೊನೇ ಪಕ್ಷ ಐಐಟಿ ಭೂಮಿಯ ಸರ್ವೇ ಕಾರ್ಯಕ್ಕೆ ಕಳೆದ ವಾರ ಚಾಲನೆ ಸಿಕ್ಕಿದ್ದು ಧಾರವಾಡದ ಶಿಕ್ಷಣ ಪ್ರೇಮಿಗಳಲ್ಲಿ ಕೊಂಚ ಸಮಾಧಾನ ತಂದಿದೆ. 7 ಕಿ.ಮೀ.ನಷ್ಟು ಸುತ್ತಳತೆ ಹೊಂದಿರುವ ಐಐಟಿಯ 500 ಎಕರೆ ಪ್ರದೇಶದಲ್ಲಿ ಪ್ರತಿ 30 ಮೀಟರ್‌ಗೆ ಒಂದರಂತೆ ಭೂಮಾಪನ ಸರ್ವೇ ಕಲ್ಲುಗಳನ್ನು ಸದ್ಯಕ್ಕೆ ನಡೆಸಲಾಗುತ್ತಿದ್ದು, ಧಾರವಾಡ ಮೂಲದ ಖಾಸಗಿ ಕಂಪನಿಯೊಂದು ಈ ಭೂಮಾಪನ ಸಮೀಕ್ಷೆ ಮತ್ತು ಕಾಂಪೌಂಡ್‌ ಗೋಡೆ ನಿರ್ಮಿಸಲು ಸಜ್ಜಾಗಿದೆ.

ಸಮೀಕ್ಷೆಯೇ ಮುಗಿದಿಲ್ಲ
507 ಎಕರೆ ಭೂಮಿ ಐಐಟಿಗಾಗಿ ಕಾಯ್ದಿರಿಸಲಾಗಿದ್ದು, ಮೊದಲ ವರ್ಷಕ್ಕೆ 180 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಎರಡನೇ ವರ್ಷ 450, ಮೂರನೇ ವರ್ಷ 928 ವಿದ್ಯಾರ್ಥಿಗಳು ಹೀಗೆ ಮುಂದಿನ ಐದು ವರ್ಷಗಳಲ್ಲಿ ಪರಿಪೂರ್ಣ ಕ್ಯಾಂಪಸ್‌ ನಿರ್ಮಾಣವಾಗಬೇಕಿತ್ತು. ಇದಕ್ಕೆ 1411 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವೆಚ್ಚ ಮಾಡಲಿದೆ. ಒಂದು ವರ್ಷದ ಅವಧಿಯಲ್ಲಿ ಸರ್ವೇ ಮುಗಿದು ಕಾಂಪೌಂಡ್‌ ಗೋಡೆ ತಲೆ ಎತ್ತಬೇಕಿತ್ತು. ಆದರೆ ಎರಡನೇ ವರ್ಷಕ್ಕೆ ಐಐಟಿ ಕಾಲಿಡುತ್ತಿದ್ದರೂ ಸಮೀಕ್ಷೆಯೇ ಮುಗಿದಿಲ್ಲ. ಒಟ್ಟಿನಲ್ಲಿ ಐಐಟಿ ಕೇಂದ್ರ ತಲೆ ಎತ್ತಲು ಇನ್ನೂ ಐದು ವರ್ಷಗಳು ಬೇಕು ಎನ್ನುತ್ತಿದ್ದಾರೆ ಇಲ್ಲಿನ ಕಟ್ಟಡ ನಿರ್ವಹಣಾ ವಿಭಾಗದ ಅಧಿಕಾರಿಗಳು. 

Advertisement

Udayavani is now on Telegram. Click here to join our channel and stay updated with the latest news.

Next