Advertisement

ಸಕಾರಾತ್ಮಕ ಬದಲಾವಣೆಯಿಂದ ಸಂವಿಧಾನ ಆಶಯ ಪರಿಪೂರ್ಣ

09:13 PM Feb 11, 2020 | Lakshmi GovindaRaj |

ಚಾಮರಾಜನಗರ: ಯಾವುದೇ ಸಂವಿಧಾನ, ಸರಿಯಾದ ರೀತಿಯಲ್ಲಿ ಜಾರಿಗೊಂಡು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದಾಗ ಮಾತ್ರ, ಅದರ ಆಶಯ ಪರಿಪೂರ್ಣಗೊಳ್ಳಲಿದೆ ಎಂದು ಬರಹಗಾರ ಡಾ.ಕೃಷ್ಣಮೂರ್ತಿ ಚಮರಂ ಅಭಿಪ್ರಾಯಪಟ್ಟರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ ನಿಜಗುಣ ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌ ಓದು ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಉತ್ತಮ ವಿಚಾರಗಳಿಂದ ಮಾತ್ರ ಶ್ರೇಷ್ಠವಾಗುವುದಿಲ್ಲ.

ಅದು ಸಾಮಾಜಿಕ ವ್ಯವಸ್ಥೆಯಲ್ಲಿ ಸಮರ್ಪಕ ರೀತಿಯಲ್ಲಿ ಜಾರಿಯಾಗಬೇಕು. ಆಗ ಅದರ ಉದ್ದೇಶ ಈಡೇರಿಸಿದಂತಾಗಲಿದೆ. ಇದಕ್ಕಾಗಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಕರ್ತವ್ಯಗಳನ್ನು ತಪ್ಪದೇ ಪಾಲಿಸುವಂತಾಗಬೇಕು. ಸಂವಿಧಾನವನ್ನು ಜೀವನದ ಆದರ್ಶವಾಗಿ ಅಳವಡಿಸಿಕೊಂಡು ಬದುಕಬೇಕು ಎಂದರು.

ಅಭಿವೃದ್ಧಿಗೆ ಪ್ರತಿಯೊಬ್ಬರು ಮುಖ್ಯ: ದೇಶದ ಅಖಂಡತೆಯನ್ನು ಎತ್ತಿ ಹಿಡಿಯುವ ಮಾದರಿಯಲ್ಲಿ ಭಾರತೀಯ ಸಂವಿಧಾನ ರಚಿತವಾಗಿದೆ. ಆದರೆ, ಅವುಗಳ ಪಾಲನೆ ಆಗಬೇಕಿದೆ. ಸಾಮಾಜಿಕ ತಾರತಮ್ಯ ಹಾಗೂ ಗಡಿಗಳ ವೈಷಮ್ಯ ತೊರೆದು ದೇಶ ಮೊದಲು ಎಂಬ ದೃಷ್ಟಿ ಎಲ್ಲರಲ್ಲೂ ಇರಬೇಕು. ಏಕೆಂದರೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಕೊಡುಗೆಯೂ ಮುಖ್ಯವಾಗಿದೆ. ಡಾ.ಅಂಬೇಡ್ಕರ್‌ ಅವರು ಅನೇಕ ಅವಮಾನಕರ ಸನ್ನಿವೇಶಗಳನ್ನು ಮೆಟ್ಟಿ ನಿಂತರು.

ಈ ಗುಣವನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಅಂಬೇಡ್ಕರ್‌ ಅವರು ವಿಶಾಲ ವ್ಯಕ್ತಿತ್ವದವರಾಗಿದ್ದು, ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸುವ ಪರಿಪಾಠ ನಿಲ್ಲಬೇಕು. ಜತೆಗೆ ಅವರ ಉದಾತ್ತ ವಿಚಾರಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು. ಆಗ ದೇಶ ಮಹತ್ವದ ಬದಲಾವಣೆಯನ್ನು ಕಾಣಲಿದೆ ಎಂದು ಹೇಳಿದರು.

Advertisement

ಅಸಮಾನತೆ ನಿವಾರಿಸಲು ಯುವಕರ ಪಾತ್ರ ಮುಖ್ಯ: ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪೊ›.ಶಿವಬಸವಯ್ಯ ಮಾತನಾಡಿ, ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳೇ ಕಳೆದರೂ, ಪೂರ್ಣ ಪ್ರಮಾಣದ ಸಾಮಾಜಿಕ ಸಮಾನತೆ ಸಾಧಿಸಲು ಇನ್ನೂ ಬಹಳ ದೂರ ಕ್ರಮಿಸಬೇಕಿದೆ. ಈ ಅಸಮಾನತೆಯನ್ನು ನಿವಾರಿಸುವಲ್ಲಿ ಯುವಜನತೆಯ ಪಾತ್ರ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಗಳು ದಾರಿದೀಪವಾಗಲಿದೆ. ಹೀಗಾಗಿ ಯುವಕರು ಅಂಬೇಡ್ಕರ್‌ ಅವರ ಬಗ್ಗೆ ಓದುವಂತಾಗಬೇಕು ಎಂದು ತಿಳಿಸಿದರು.

ಎಲ್ಲರಿಗೂ ಮಾದರಿಯಾಗಿ: ಕನ್ನಡ ವಿಭಾಗದ ಮುಖ್ಯಸ್ಥ ಪೊ›.ಕೃಷ್ಣಮೂರ್ತಿ ಹನೂರು ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್‌ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದರು. ಹೀಗಿದ್ದೂ ಅವರು ಅದನ್ನು ಎಂದೂ ವೈಯಕ್ತಿಕವಾಗಿ ಕಾಣದೇ, ಸಾಮಾಜಿಕ ಸಮಸ್ಯೆಯಾಗಿ ಪರಿಗಣಿಸಿದರು. ಸಮಾಜದಲ್ಲಿರುವ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದಲೇ ಅವರು ಸಂವಿಧಾನ ರಚಿಸಿದರು. ಸಂವಿಧಾನದ ಪ್ರತೀ ಭಾಗದಲ್ಲೂ ಮನುಕುಲದ ಒಳಿತಿನ ಆಶಯವನ್ನು ನಾವು ಕಾಣಬಹುದಾಗಿದ್ದು, ಅದು ಎಲ್ಲರಿಗೂ ಮಾದರಿಯಾಗಬೇಕು ಎಂದರು.

ಈ ವೇಳೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ, ಪ್ರಬಂಧ, ಆಶುಭಾಷಣ ಹಾಗೂ ಕವನ ವಾಚನ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಕೆ.ಗಿರೀಶ್‌, ಕೇಂದ್ರದ ಉಪನ್ಯಾಸಕರಾದ ಡಾ. ಸುನೀಲ್‌ ಕುಮಾರ್‌, ಡಾ. ಸೌಮ್ಯ, ಡಾ. ನಿಂಗರಾಜು, ಮಲ್ಲಿಕಾರ್ಜುನ ಸ್ವಾಮಿ, ಸವಿತಾ, ಮಹದೇವಮೂರ್ತಿ, ಡಾ.ಪಿ.ಮಹೇಶ್‌ ಬಾಬು, ಬಿ.ಗುರುರಾಜು, ಎಂ.ಎಸ್‌. ಬಸವಣ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next