Advertisement

ಚರ್ಚ್‌ನ ಶಾಲೆಗಳಲ್ಲಿ ಇನ್ನು “ಸಂವಿಧಾನ‌’ಕಲಿಕೆ ಕಡ್ಡಾಯ

06:00 AM Jul 12, 2018 | |

ಮಂಗಳೂರು: ರಾಜ್ಯ ಸಹಿತ ದೇಶದೆಲ್ಲೆಡೆ, ಕೆಥೋಲಿಕ್‌ ಕ್ರಿಶ್ಚಿಯನ್‌ ಚರ್ಚ್‌ ಆಡಳಿತದ 1ರಿಂದ 10ನೇ ತರಗತಿ ವರೆಗಿನ ಶಾಲೆಗಳಲ್ಲಿ ಇನ್ನು ಭಾರತದ ಸಂವಿಧಾನವನ್ನು ಒಂದು ಪಠ್ಯವಾಗಿ ಕಲಿಸಲಾಗುವುದು. ಭಾರತೀಯ ಕೆಥೋಲಿಕ್‌ ಧರ್ಮಾಧ್ಯಕ್ಷರ ಮಂಡಳಿ (ಸಿಬಿಸಿಐ)ಯ “ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗ’ ಈ ತೀರ್ಮಾನ ಕೈಗೊಂಡಿದೆ. ಚರ್ಚ್‌ ನಡೆಸುವ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯಲ್ಲಿ ನಮೂದಿತ ವಿಷಯ  ಕಲಿಸಲು  9 ಪುಟಗಳ ಕೈಪಿಡಿಯನ್ನು ಜೂ. 11ರಂದು ಬಿಡುಗಡೆ ಮಾಡಲಾಗಿದೆ. 

Advertisement

ರಾಜ್ಯದಲ್ಲಿ ಪಠ್ಯ ವಿಷಯದ ಜತೆಗೆ ನೈತಿಕ ಮೌಲ್ಯ ಶಿಕ್ಷಣವನ್ನು ಬೋಧಿಸಲಾಗುತ್ತಿದೆ. ಈ ಸಮಯದಲ್ಲೇ  ಸಂವಿಧಾನದ ಕಲಿಕೆಯನ್ನೂ ಒಳಗೊಳಿಸಲಾಗುತ್ತಿದೆ. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ದೇಶದ 176 ಮಂದಿ ಧರ್ಮಾಧ್ಯಕ್ಷರು ಭಾಗವಹಿಸಿದ್ದ ಸಿಬಿಸಿಐ 33ನೇ ಅಧಿವೇಶನದಲ್ಲಿ ಕೈಗೊಂಡ 20 ಪ್ರಮುಖ ನಿರ್ಣಯಗಳಲ್ಲಿ ಇದೂ ಒಂದು. ಕೇರಳದಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ನಾಲ್ಕು ಹಂತಗಳಲ್ಲಿ ಕಲಿಕೆ 
ನಾಲ್ಕು  ಹಂತಗಳಲ್ಲಿ ಸಂವಿಧಾನವನ್ನು ಕಲಿಸಲು ಉದ್ದೇಶಿಸಲಾಗಿದೆ. 
1. ಸಂವಿಧಾನದ ಪೀಠಿಕೆಯಲ್ಲಿರುವ 85 ಶಬ್ದಗಳನ್ನು ಕಂಠ ಪಾಠ. ಹೈಸ್ಕೂಲ್‌ ಹಂತದ ಮಕ್ಕಳಿಗೆ ಕಂಠ ಪಾಠದ ಜತೆಗೆ ಆಶು ಭಾಷಣವನ್ನು ಏರ್ಪಡಿಸಿ ಅಂಕ ನೀಡುವುದು. 
2. ಸಂವಿಧಾನದ ಪೀಠಿಕೆಯ ಮಹತ್ವ ತಿಳಿಸುವುದು ಮತ್ತು ಗುಂಪು ಚರ್ಚೆ, ಕ್ವಿಜ್‌, ಪ್ರಬಂಧ, ಪೋಸ್ಟರ್‌ ಸ್ಪರ್ಧೆ.
3. “ನಾವು ಭಾರತದ ಪ್ರಜೆಗಳು’ ವಾಕ್ಯವನ್ನು ಎತ್ತಿಕೊಂಡು ಕಿರು ನಾಟಕ. 
4. ಸಂವಿಧಾನದ ಪೀಠಿಕೆಯಲ್ಲಿರುವ ಸಾರ್ವಭೌಮ, ಸಮಾಜವಾದಿ, ಪ್ರಜಾಪ್ರಭುತ್ವ, ಜಾತ್ಯತೀತ, ಗಣ ತಂತ್ರ ಇತಾದಿ ಮನದಟ್ಟು ಮಾಡಿಸುವುದು.

75,000ಕ್ಕೂ ಶಾಲೆಗಳಲ್ಲಿ ಜಾರಿ
ದೇಶದಲ್ಲಿ ವಿವಿಧ ಕ್ರಿಶ್ಚಿಯನ್‌ ಚರ್ಚ್‌ಗಳು 75,000ಕ್ಕೂ ಮಿಕ್ಕಿದ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, 6ರಿಂದ 7 ಕೋಟಿ ಮಕ್ಕಳು ಕಲಿಯು ತ್ತಿದ್ದಾರೆ. ಅವರಿಗೆ ಸಂವಿಧಾನದ ಪರಿಚಯ, ತಿಳಿವಳಿಕೆ, ಮೌಲ್ಯ ಗಳು, ತತ್ವಗಳನ್ನು ಕಲಿಸಿ ನೈಜ ದೇಶ ಪ್ರೇಮ, ರಾಷ್ಟ್ರೀಯ ಭಾವೈಕ್ಯ ಮತ್ತು ರಾಷ್ಟ್ರದ ಬಗೆಗಿನ ಪ್ರೀತಿ ಬೆಳೆಸಬಹುದು ಎಂದು ಸಿಬಿಸಿಐ ಭಾವಿಸಿದೆ.

ಸಂವಿಧಾನದ ಪರಿಚಯ ಪ್ರತಿ ನಾಗರಿಕನಿಗೂ ಬಹಳ 
ಅಗತ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಇದರ ಬಗ್ಗೆ ಅರಿವು ಮೂಡಿಸಲು ಶಾಲೆಗಳಲ್ಲಿ ಕಲಿಕೆಗೆ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆ. ನಮ್ಮ ಧರ್ಮ ಪ್ರಾಂತ ನಡೆಸುತ್ತಿರುವ ಶಾಲೆಗಳಲ್ಲಿ ಸಂವಿಧಾನದ ವಿಷಯ ಕಲಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು.
ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ, ಮಂಗಳೂರು ಧರ್ಮ ಪ್ರಾಂತದ ಬಿಷಪ್‌ 

Advertisement

ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next