Advertisement

ಅಭಿವೃದ್ಧಿಗೆ ಸಂವಿಧಾನ ಕೊಡುಗೆ ಅಪಾರ

05:32 PM Jan 27, 2018 | Team Udayavani |

ಯಾದಗಿರಿ: ದೇಶ ಸರ್ವ ರೀತಿಯಿಂದ ಅಭಿವೃದ್ಧಿ ಹೊಂದಬೇಕೆಂಬ ಚಿಂತನೆಯಿಂದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜನಾಂಗದವರಿಗೆ ಸಮಾನ ಹಕ್ಕುಳನ್ನು ಕಲ್ಪಿಸಿದ್ದಾರೆ. ಹೀಗಾಗಿ ಸಂವಿಧಾನಾತ್ಮಕವಾಗಿ ನಡೆದುಕೊಂಡಾಗ ಮಾತ್ರ ಅಭಿವೃದ್ಧಿ ರಾಷ್ಟ್ರವಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಎಂ. ಖರ್ಗೆ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 1947 ಅಗಸ್ಟ್‌ 15ರಂದು ಭಾರತ ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಸಂಪೂರ್ಣ ಕಾರ್ಯೋನ್ಮುಖವಾದ ಸಂವಿಧಾನ ರಚನಾ ಸಮಿತಿಯು 2 ವರ್ಷ 11 ತಿಂಗಳು 17 ದಿನಗಳ ಕಾಲ ನಿರಂತರ ಶ್ರಮವಹಿಸಿ ಸಂವಿಧಾನದ ಪ್ರಾಥಮಿಕ ಕರಡು ಪ್ರತಿಯನ್ನು ಸಿದ್ಧಪಡಿಸಿತು. ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ವಿವಿಧ ದೇಶಗಳ ಸಂವಿಧಾನದ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸಂವಿಧಾನ ರಚಿಸಿದ ನಂತರ ಕರಡು ಪ್ರತಿಯ ಬಗ್ಗೆ ಚರ್ಚಿಸಿ ನವೆಂಬರ್‌ 26, 1949ರಂದು ಸಂವಿಧಾನವನ್ನು ಅಂಗೀಕರಿಸಿದ ನಂತರ ಜನವರಿ 26, 1950ರಂದು ಸಂವಿಧಾನ ಜಾರಿಗೆ ತರಲಾಯಿತು ಎಂದು ತಿಳಿಸಿದರು. 

ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ ಮತ್ತು ಸರ್ವಧರ್ಮ ಸಹಿಷ್ಣುತೆಯು ಗಣತಂತ್ರ ವ್ಯವಸ್ಥೆಯ ಮೂಲ ಆಶಯವಾಗಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಸರ್ಕಾರ ನಡೆಸುವ ಮೂಲತತ್ವ ಸಂವಿಧಾನದಲ್ಲಿ ಅಡಗಿವೆ. ವಿಭಿನ್ನ ಧರ್ಮ, ಭಾಷೆ, ಆಚಾರ-ವಿಚಾರಗಳ ವೈವಿಧ್ಯತೆಯ ನಡುವೆಯೂ ದೇಶದ ಐಕ್ಯತೆ ಕಾಪಾಡಿಕೊಂಡು ಬರುತ್ತಿರುವುದು ಸಂವಿಧಾನದ ಹೆಗ್ಗಳಿಕೆಯಾಗಿದೆ ಎಂದರು.

ಹಸಿವು ಮುಕ್ತ ರಾಜ್ಯವನ್ನಾಗಿಸಲು ನಮ್ಮ ಸರಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ನಿರ್ಗತಿಕರಿಗೆ, ಬಡವರಿಗೆ ಬಹುದೊಡ್ಡ ಅನುಕೂಲ ಕಲ್ಪಿಸಿದೆ. ರಾಜ್ಯದಲ್ಲಿ 8 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿದೆ. ಅಲ್ಲದೆ 33 ಲಕ್ಷ ಟನ್‌ ತೊಗರಿ ಖರೀದಿಸಲಾಗಿದ್ದು, ರೈತರ ಏಳ್ಗೆಗಾಗಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಬಹಳ ವರ್ಷಗಳ ಕನಸು ನನಸಾಗಿದ್ದು, ಮೂರು ತಾಲೂಕಗಳನ್ನಾಗಿ ಘೋಷಣೆ ಮಾಡಲಾಗಿದೆ. ಗುರುಮಠಕಲ್‌, ಹುಣಸಗಿ ಹಾಗೂ ವಡಗೇರಾ ತಾಲೂಕಗಳನ್ನು ಇದೇ ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲು ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
 
ಸಂವಿಧಾನದ 371 (ಜೆ) ಕಲಂ ಜಾರಿಯಿಂದಾಗಿ ಈ ಭಾಗದ ನಿರೋದ್ಯೋಗಿಗಳಿಗೆ ಉದ್ಯೋಗ ದೊರೆಯುತಿದ್ದು, ಹೈ.ಕ. ಭಾಗದಲ್ಲಿ ಮೀಸಲಾಗಿದ್ದ ಹುದ್ದೆಗಳಲ್ಲಿ ಈಗಾಗಲೇ 24 ಸಾವಿರ ಭರ್ತಿ ಮಾಡಿದ್ದು, ಉಳಿದ 10 ಸಾವಿರ ಹುದ್ದೆಗಳಿಗೆ ಈಗಾಗಲೇ ಭರ್ತಿ ಮಾಡಲು ಪ್ರಕ್ರಿಯೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಅತ್ಯುನ್ನತ ಸೇವೆಗೈದ ವಿವಿಧ ಇಲಾಖೆ ಸರಕಾರಿ ನೌಕರರಾದ ಆರ್‌.ಎಮ್‌. ನಾಟೇಕರ್‌, ವಿಕ್ರಮಸಿಂಗ್‌ ಗೌತಮ್‌, ಚಂದ್ರಶೇಖರ ದೊರೆ, ಸಂತೋಷ, ವಿದ್ಯಾಸಾಗರ ಹಾಗೂ ವಿಶ್ವನಾಥ ರೆಡ್ಡಿ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗೂ 10,000 ಸಾವಿರ ನಗದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಕುಮಾರ ದೊಡ್ಡಪ್ಪ ನಾಯಕ ಕ್ರೀಡಾ ಕ್ಷೇತ್ರ, ವಿಶ್ವೇಶ್ವರಯ್ಯ ಮಲ್ಲಿನಾಥಮಠ (ಉತ್ತಮ ಗಣಕ ಯಂತ್ರ ನಿರ್ವಾಹಣೆ ಕ್ಷೇತ್ರ, ರಿಯಾಜ್‌ ಪಟೇಲ್‌ ಕಲಾ ಕ್ಷೇತ್ರ, ಅಲ್ಲದೆ ಸಕಾಲದಲ್ಲಿ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೆ ಶೀಘ್ರವಾಗಿ ವಿಲೇ ಮಾಡಿರುವ ಐದು ಜನ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಸರಕಾರಿ ಶಾಲೆಗಳಾದ ಮೂರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಕೊಡೇಕಲ್‌, ಮೂರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಕೆಂಭಾವಿ, ಕಿತ್ತೂರು ರಾಣಿ ಚೆನ್ನಮ್ಮ
ವಸತಿ ಪ್ರೌಢಶಾಲೆ ರಾಜನಕೋಳೂರು, ಆದರ್ಶ ವಿದ್ಯಾಲಯ ಆರ್‌.ಎಂ.ಎಸ್‌.ಎ ವಜ್ಜಲ್‌ ಶಾಲೆಗಳಿಗೆ ನಗದು 10,000 ರೂ. ನೀಡಿ ಗೌರವಿಸಲಾಯಿತು. ಈ ವೇಳೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪೊಲೀಸ್‌ ಪರೇಡ್‌ ನಡೆಸಲಾಯಿತು.

ವೇದಿಕೆ ಮೇಲೆ ಜಿಪಂ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪುರ, ನಗರಸಭೆ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪುರ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಚಂದ್ರಕಲಾ ಶರಣಗೌಡ ಹೊಸಮನಿ, ತಾಪಂ ಅಧ್ಯಕ್ಷ ಭಾಷು ಎಸ್‌. ರಾಠೊಡ, ನಗರಸಭೆ ಉಪಾಧ್ಯಕ್ಷ ಸ್ಯಾಂಸನ್‌ ಮಾಳಿಕೇರಿ, ಜಿಲ್ಲಾಧಿ ಕಾರಿ ಜೆ. ಮಂಜುನಾಥ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಸಹಾಯಕ ಆಯುಕ್ತ ಮಂಜುನಾಥ ಸ್ವಾಮಿ ಇದ್ದರು.

ಚಂದ್ರಶೇಖರ ಗೋಗಿ ಕಲಾ ತಂಡದವರಿಂದ ನಾಡಗೀತೆ ಹಾಡಿದರು. ಡಾ| ಜೋತಿಲತಾ ತಡಿಬಿಡಿಮಠ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ವಂದಿಸಿದರು.

ಹೈ.ಕ ಅಭಿವೃದ್ಧಿಗೆ ಸರಕಾರ ನಿರಂತರ ಪ್ರಯತ್ನ ಈ ಭಾಗದ ನೀರಾವರಿಗೆ ಸರಕಾರ ಹೆಚ್ಚು ಆದ್ಯತೆ ನೀಡಿದ್ದು, ಸನ್ನತಿ  ಹತ್‌ ನೀರಾವರಿ ಯೋಜನೆಗಳ ಮೂಲಕ 1.15 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.  ದ್ರಾಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸರಕಾರ ನಿರಂತರ ಪ್ರಯತ್ನದಿಂದ ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನಗಳು ಲಭಿಸಿವೆ. ಹೈದ್ರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಯಾದಗಿರಿ ಜಿಲ್ಲೆಯಲ್ಲಿ 446
ಕೋಟಿ ರೂ. ಅನುದಾನದಲ್ಲಿ ಶಾಲಾ ಕಾಲೇಜು ಕಟ್ಟಡ, ಪಶು ಆಸ್ಪತ್ರೆ ನಿರ್ಮಾಣ, ನೀರು ಸರಬರಾಜು, ರಸ್ತೆ ಸಂಪರ್ಕ ಸೇರಿದಂತೆ ಒಟ್ಟು 1454 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 
 ಪ್ರಿಯಾಂಕ್‌ ಎಂ. ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ
 

Advertisement

Udayavani is now on Telegram. Click here to join our channel and stay updated with the latest news.

Next