Advertisement

ಸಂವಿಧಾನ ರಾಷ್ಟ್ರದ ವ್ಯವಸ್ಥೆಯ ಭದ್ರ ಬುನಾದಿ

10:32 PM Jan 25, 2022 | Team Udayavani |

ಬ್ರಿಟಿಷ್‌ ಆಡಳಿತದ ಕೊಂಡಿ ಕಳಚುವ ಮುನ್ನವೇ ನಮ್ಮದೇ ನೂತನ ಸ್ವತಂತ್ರ ಭಾರತದ ಹೊಂಗನಸಿಗೆ ಅಡಿಗಲ್ಲು ಹಾಕಲಾಯಿತು. 1946 ಡಿಸೆಂಬರ್‌ 9ರಂದು “ಸಂಪೂರ್ಣ ಪ್ರಭುತ್ವ ಸಂಪನ್ನತೆ’ಯ ಸಾರ್ವಭೌಮ ರಾಷ್ಟ್ರದ ಪೂರ್ಣಾಂಕ ದೊರೆಯುವ ಮುನ್ನವೇ ಸ್ವಾತಂತ್ರ್ಯ ಘೋಷಣೆಯೂ ಇನ್ನೂ ಆಗಿರದ ಆ ದಿನದÇÉೇ ವಿಶಾಲ ಭಾರತದ ಭವಿಷ್ಯದ ನಿರೂಪಣೆಯ ಹೊತ್ತಗೆಗೆ ಸಿದ್ಧತೆ ಶುಭಾರಂಭಗೊಂಡಿತು.

Advertisement

ಫ್ರೆಂಚ್‌ ಮಾದರಿಯಂತೆ ಹೊಸದಿಲ್ಲಿಯಲ್ಲಿ ಅಂದು ಸೇರಿದ 211 ಪ್ರತಿನಿಧಿಗಳ ಪೈಕಿ ವಯೋಮಾನದ ಆಧಾರದಲ್ಲಿ ಡಾ| ಸಚ್ಚಿದಾನಂದ ಸಿನ್ಹಾ ಸಂವಿಧಾನ ರಚನಾ ಸಭೆಯ ಸಮಿತಿಯ ಅಧ್ಯಕ್ಷ ಪೀಠವನ್ನು ಅಲಂಕರಿಸಿದರು. ಮುಂದೆ ಡಿ.11 ರಂದು ಡಾ| ಬಾಬು ರಾಜೇಂದ್ರ ಪ್ರಸಾದರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ, ಎಚ್‌. ಸಿ. ಮುಖರ್ಜಿ ಉಪಾಧ್ಯಕ್ಷರಾಗಿ, ಮಂಗಳೂರಿನ ಬ್ಯಾರಿಸ್ಟರ್‌ ಬೆನಗಲ್‌ ನರಸಿಂಹರಾಯರು ಸಂವಿಧಾನದ ಸಲಹೆಗಾರರಾಗಿ ಆಯ್ಕೆಗೊಂಡರು. 5 ಪ್ರಮುಖ ಸಮಿತಿಗಳು, 15 ಉಪ ಸಮಿತಿಗಳು ತಂತಮ್ಮ ಕ್ಷೇತ್ರ ಪರಿಧಿಯಲ್ಲಿ ರಾಜ್ಯಾಂಗ ಘಟನೆಯ ವಿವಿಧ ವಿಧಿವಿಧಾನಗಳ ರೂಪುರೇಖೆಗಳನ್ನು ಸೃಜಿಸಲು ಆರಂಭಿಸಿತು. ಅವುಗಳ ಪೈಕಿ ಕರಡು ರಚನಾ ಸಮಿತಿ (Drafting Committee) ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಹಿರಿತನದಲ್ಲಿ ಪ್ರಧಾನ ಭೂಮಿಕೆ ತನ್ನದಾಗಿಸಿತು. ಸಂವಿಧಾನ ಜನಕರ ಒಟ್ಟು 2 ವರ್ಷ , 11 ತಿಂಗಳು, 18 ದಿನಗಳ ಸಾಮೂಹಿಕ ಕಾರ್ಯಕ್ಷಮತೆಯೊಂದಿಗೆ ಭಾರತದ ವಿನೂತನ ಮೂಲದಾಖಲೆಯಾಗಿ ನಮ್ಮ ಸಂವಿಧಾನ ಜನ್ಮ ತಾಳಿತು.

ಸುದೀರ್ಘ‌ ರಾಜ್ಯಾಂಗ ಘಟನೆ
ಸಹಸ್ರಾರು ವರ್ಷಗಳ ಪರಂಪರೆಯ, ಜಗದಗಲದ ಅತ್ಯಂತ ಪ್ರಾಚೀನ ಸಂಸ್ಕೃತಿ, ಸಭ್ಯತೆಯ ನಮ್ಮ ವಿಶಾಲ ಭಾರತದಲ್ಲಿ ನೂತನ ಶಕೆ ಶುಭಾರಂಭಗೊಳ್ಳಲು ಇದೇ ಭಾರತ ಸಂವಿಧಾನ ಮೂಲಾಧಾರ. “ವಿಶ್ವದ ಅತ್ಯಂತ ಸುದೀರ್ಘ‌ ರಾಜ್ಯಾಂಗ ಘಟನೆ’ ಎಂಬ ಹೆಗ್ಗಳಿಕೆಯ ಈ ಮೂಲ ದಾಖಲೆಯನ್ನು ಸಂವಿಧಾನ ರಚನಾ ಸಭೆ (Constituent Assembly) ಸರ್ವಾನುಮತದಿಂದ ಪರಿಗ್ರಹಿಸಿದ ದಿನ 1949 ನವೆಂಬರ್‌ 26. ರಾಜ ಪ್ರಭುತ್ವದ ಸುದೀರ್ಘ‌ ಪಥ ತುಳಿದು, ಪಾರತಂತ್ರ್ಯದ ನೊಗ ಕಳಚಿ ಸ್ವತಂತ್ರ ಪ್ರಜಾತಂತ್ರೀಯ ಗಣರಾಜ್ಯದ ಶುಭದೊಸಗೆ ಪಡಿ ಮೂಡಿಸಿದುದು ಇದೇ ಭಾರತ ಸಂವಿಧಾನ.

ನಮ್ಮ ಭಾರತ ಸಂವಿಧಾನ ಶೂನ್ಯದಿಂದ ಉದಿಸಿ ಬಂದುದಲ್ಲ, ಸ್ವಾತಂತ್ರ ಹೋರಾಟದ ವೀರಗಾಥೆಯ ಕಣ ಕಣದಲ್ಲಿ ಉಸಿರು ತುಂಬಿಕೊಂಡು 1857ರಿಂದ 1947ರ ವರೆಗಿನ 9 ದಶಕಗಳಲ್ಲಿ ಸುದೀರ್ಘ‌ ಪಥಗಾಮಿಯಾಗಿ ಇದು ಬಂದಂತಹದು. ಈಸ್ಟ್‌ ಇಂಡಿಯಾ ಕಂಪೆನಿಯ ಆಡಳಿತದ ಪರಿಸಮಾಪ್ತಿ 1857ರಲ್ಲಿ ಘಟಿಸಿತು. ಮುಂದೆ ವಿಕ್ಟೋರಿಯಾ ರಾಣಿಯ ಉದ್ಘೋಷಣೆಯಿಂದ ಮೊದಲ್ಗೊಂಡು ಹಂತ ಹಂತವಾಗಿ 1861, 1892 ಕಾಯಿದೆಗಳು, 1909ರ ಮಿಂಟೋ ಮಾರ್ಲೆ ಸುಧಾರಣೆ, 1919ರ ಮೊಂಟೆಗೋ ಛೇಮ್ಸ…ಫ‌ರ್ಡ್‌ ಸುಧಾರಣೆ, 1935ರ ಸಂವಿಧಾನ, 1942ರ ಕ್ರಿಪ್ಸ್‌ ಸಮಿತಿಯ ಸಲಹೆ, 1944ರ ಕ್ಯಾಬಿನೆಟ್‌ ಸಮಿತಿಯ ನೀತಿ- ಇವೆಲ್ಲವನ್ನೂ ದಾಟಿ 1947 ಜೂನ್‌ 3ರ ಮೌಂಟ್‌ ಬ್ಯಾಟನ್‌ ಯೋಜನೆಯೊಂದಿಗೆ ನಾಡ ಬಿಡುಗಡೆಯ ಹೋರಾಟ-ಆಳರಸರ ಉಪಶಮನದ ಒಟ್ಟು ಫ‌ಲಶ್ರುತಿ ಇದು. ಒಂದೆಡೆ ಸಂವಿಧಾನ ರಚನೆಯ ಕಾರ್ಯ ಭರದಿಂದ ಸಾಗುತ್ತಿದ್ದಂತೆಯೇ ಇನ್ನೊಂದೆಡೆ 1947ರ ಆಗಸ್ಟ್‌ 14ರ ಮಧ್ಯರಾತ್ರಿ ಭಾರತ ಸ್ವಾತಂತ್ರ್ಯ ಘೋಷಣೆ, ರಾಷ್ಟ್ರ ಇಬ್ಭಾಗ ಭಾರತ ಸಂವಿಧಾನ ರಚನಾ ಸಭೆಗೆ 73 ಮುಸ್ಲಿಂ ಲೀಗ್‌ ಸದಸ್ಯರ ಬಹಿಷ್ಕಾರ ಹಾಗೂ ಪ್ರತ್ಯೇಕ ಸಭೆ. 562 ದೇಶೀ ರಾಜರ ಸಂಸ್ಥಾನಗಳ ವಿಲೀನತೆ ಹಾಗೂ ಅವರ 70 ಪ್ರತಿನಿಧಿಗಳ ಸೇರ್ಪಡೆ- ಹೀಗೆ ಇತಿಹಾಸದ ಇತೀ ವೃತ್ತಾಂತಗಳ ಸರಣಿಯೇ ಸಾಗುತ್ತಿತ್ತು.

ರಾಷ್ಟ್ರದ ವ್ಯವಸ್ಥೆಯ ಭದ್ರ ಬುನಾದಿ
ಸಂವಿಧಾನ ಎಂಬುದು ರಾಷ್ಟ್ರದ ಸಮಗ್ರ ರಾಜ್ಯ ವ್ಯವಸ್ಥೆಯ ಭದ್ರ ಬುನಾದಿ. ಲಂಬವಾಗಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರಕಾರಗಳ ಅಂತೆಯೇ ಸಮಾನಾಂತರವಾಗಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಅಚ್ಚುಕಟ್ಟು ವ್ಯವಸ್ಥೆ ಹಾಗೂ ಕಾರ್ಯ ಪರಿಧಿಯ ನಿಖರ ರೇಖೆಗಳು ಮೂಡಿ ಬರುವುದು ಈ ಸಂವಿಧಾನದಲ್ಲಿ. ಅದೇ ರೀತಿ ಪ್ರಜೆಗಳ ಹಕ್ಕು ಬಾಧ್ಯತೆಗಳು, ಸರಕಾರದ ಅಧಿಕಾರ ಹಾಗೂ ಕರ್ತವ್ಯಗಳು, ಜನಮನದ ಆಶಯ ಪ್ರತಿಫ‌ಲನದ ಚುನಾವಣೆ ಹಾಗೂ ಸರಕಾರದ ರಚನೆಯ ಸಮಗ್ರ ಸೂತ್ರ ಸಮುತ್ಛಯದ ರಾಜಕೀಯ ತಾಂತ್ರಿಕತೆ (Political Engineering) ಹೊಂದಿದ ಹೊತ್ತಗೆಯೇ ಸಂವಿಧಾನ. ಒಂದೇ ಒಂದು ವಿದೇಶಿ ಪ್ರತಿನಿಧಿಗಳನ್ನು ಸೇರಿಸಿಕೊಳ್ಳದೇ ನಮ್ಮದೇ ಪ್ರತಿಭಾನ್ವಿತ ಪ್ರತಿನಿಧಿಗಳು ಸಮರ್ಪಣಾ ಭಾವ ಹಾಗೂ ರಾಷ್ಟ್ರೀಯ ಮನೋಭೂಮಿಕೆಯಿಂದ ಈ ಗ್ರಂಥ ರಚಿಸಿದರು.

Advertisement

ಸೌತ್‌ ಕೆನರಾದ ಐದು ಮಂದಿ
ಅಂದಿನ ಮದ್ರಾಸ್‌ ಪ್ರಾಂತ್ಯದ ಅವಿಭಜಿತ ಸೌತ್‌ ಕೆನರಾ ಜಿಲ್ಲೆ ಯೊಂದರಿಂದಲೇ 5 ಮಂದಿ ಮಹನೀಯರು ಸಂವಿಧಾನ ರಚನೆಯಲ್ಲಿ ಭಾಗಿಯಾದುದು ಒಂದು ರಾಷ್ಟ್ರೀಯ ದಾಖಲೆ. ತೌಲಾನಿಕ ಸೂತ್ರ(Comparative Method), ಪ್ರಾಯೋಗಿಕ ಸೂತ್ರ (Experimental Method),, ಐತಿಹಾಸಿಕ ಸೂತ್ರ (Historical Method), ಅವಲೋಕನ ಸೂತ್ರ (Observation Method) ಇವೆಲ್ಲವನ್ನೂ ಅಳವಡಿಸಿ, ವಿವಿಧ ರಾಷ್ಟ್ರಗಳ ಸಾಂವಿಧಾನಿಕ ಉತ್ತಮ ಅಂಶಗಳನ್ನು ಸೇರಿಸಲಾಯಿತು. ಒಟ್ಟು 11 ಅಧಿವೇಶನದಲ್ಲಿ 7,653 ತಿದ್ದುಪಡಿಗಳ ಮಹಾಪೂರವೇ ಗೌರವಾನ್ವಿತ ಸದಸ್ಯರಿಂದ ಹರಿದು ಬಂತು. ಅವುಗಳಲ್ಲಿ ಕೈಗೆತ್ತಿಕೊಂಡ 2,473 ತಿದ್ದುಪಡಿಗಳು ತೀಕ್ಷ್ಣ ಸಂವಾದದ ಕ್ಷಕಿರಣ ಹಾದು ಸಂವಿಧಾನದ ಹೊತ್ತಗೆಯಲ್ಲಿ ಘನೀಕೃತಗೊಂಡಿತು.

ಹೀಗೆ 1948 ಫೆಬ್ರವರಿಯ ಒಳಗೆ ಕರಡು ಪ್ರತಿ ಸಿದ್ಧಗೊಂಡಿದ್ದರೂ ಅಭಿಪ್ರಾಯ ಕ್ರೋಡೀಕರಣಕ್ಕೆ ಅದನ್ನು ರಾಷ್ಟ್ರದ ಮಹಾಜನತೆಯ ಮುಂದಿಡಲಾಯಿತು. ಕೊನೆಗೆ 1949 ನ. 14ರಂದು ಡಾ| ಬಿ. ಆರ್‌. ಅಂಬೇಡ್ಕರ್‌, ಮೂರನೇ ವಾಚನದ (lll Reading ) ಹಂತದಲ್ಲಿ The Constitution as settled by the Assembly be passed ಎಂಬ ಒಂದು ವಾಕ್ಯ ಮಂಡಿಸಿದರು ಹಾಗೂ 1949 ನ. 26ರಂದು ಬೆಳಗ್ಗೆ 10ಗಂಟೆ 18 ನಿಮಿಷಕ್ಕೆ ಸಂವಿಧಾನ ರಚನಾ ಸಭೆ ಒಕ್ಕೊರಲಿನಿಂದ 395 ವಿಧಿಗಳನ್ನು ಹಾಗೂ 8 ಶೆಡ್ನೂಲ್‌ಗ‌ಳನ್ನು ಹೊಂದಿದ ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಅಂದೇ 299 ಸದಸ್ಯರ ಪೈಕಿ 284 ಮಂದಿಯೂ ಸಮಗ್ರ ರಾಷ್ಟ್ರದ ಪರವಾಗಿ ತಮ್ಮ ಹಸ್ತಾಂಕಿತ ನೀಡಿದರು. ಮೂಲ ಸಂವಿಧಾನ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಪ್ರೇಮ್‌ ಬಿಹಾರಿ ನಾರಾಯಣ ರಾಯ್‌ಜಾದಾ ಇವರ ಕೈ ಬರಹದಲ್ಲಿದೆ ಹಾಗೂ ಇದರ ಪುಟಗಳಲ್ಲಿ ನಂದಲಾಲ್‌ ಭೋಸ್‌, ರಾಮ್‌ ಮೋಹನ್‌ ಸಿನ್ಹಾ ಮುಂತಾದವರು ಬಿಡಿಸಿದ ಚಿತ್ರಗಳಿವೆ. 1950ರ ಜ. 26ರಂದು ಸಂವಿಧಾನ ಅಧಿಕೃತ ವಾಗಿ ಜಾರಿಯಾಗುವ ಮೂಲಕ ಸ್ವತಂತ್ರ ಭಾರತ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು.

ರಾಷ್ಟ್ರದ ಸಮಗ್ರ
ವ್ಯವಸ್ಥೆಯ ಅಡಿಪಾಯ
ಸಂವಿಧಾನ ಎಂಬುದು ರಾಷ್ಟ್ರದ ಸಮಗ್ರ ರಾಜ್ಯ ವ್ಯವಸ್ಥೆಯ ಭದ್ರ ಬುನಾದಿ. ಲಂಬವಾಗಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರಕಾರಗಳ ಅಂತೆಯೇ ಸಮಾನಾಂತರವಾಗಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಅಚ್ಚುಕಟ್ಟು ವ್ಯವಸ್ಥೆ ಹಾಗೂ ಕಾರ್ಯ ಪರಿಧಿಯ ನಿಖರ ರೇಖೆಗಳು ಮೂಡಿ ಬರುವುದು ಈ ಸಂವಿಧಾನದಲ್ಲಿ. ಅದೇ ರೀತಿ ಪ್ರಜೆಗಳ ಹಕ್ಕು ಬಾಧ್ಯತೆಗಳು, ಸರಕಾರದ ಅಧಿಕಾರ ಹಾಗೂ ಕರ್ತವ್ಯಗಳು, ಜನಮನದ ಆಶಯ ಪ್ರತಿಫ‌ಲನದ ಚುನಾವಣೆ ಹಾಗೂ ಸರಕಾರದ ರಚನೆಯ ಸಮಗ್ರ ಸೂತ್ರ ಸಮುತ್ಛಯದ ರಾಜಕೀಯ ತಾಂತ್ರಿಕತೆ (Political Engineering) ಹೊಂದಿದ ಹೊತ್ತಗೆಯೇ ಸಂವಿಧಾನ.

-ಡಾ| ಪಿ. ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next