ದಾವಣಗೆರೆ: ದಲಿತ, ಮುಸ್ಲಿ ಜನಾಂದವರ ಮೇಲೆ ಪದೇ ಪದೇ ನಡೆಯುತ್ತಿರುವ ಹಲ್ಲೆ ಖಂಡಿಸಿ ಹಮ್ಮಿಕೊಂಡಿರುವ ತುಮಕೂರು ಚಲೋ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಬುಧವಾರ ವಿವಿಧ ಪ್ರಗತಿಪರ ಸಂಘಟನೆ ಮುಖಂಡರು ಬಹಿರಂಗ ಸಭೆ ನಡೆಸಿದರು.
ಅಂಬೇಡ್ಕರ್ ವೃತ್ತದಲ್ಲಿ ಕೋಮು ಸೌಹಾರ್ದ ವೇದಿಕೆ, ದಲಿತ ಸಂಘರ್ಷ ಸಮಿತಿ, ಬೀಡಿ ಕಾರ್ಮಿಕರ ಸಂಘದ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಮಾಡಿ ಸಭೆ ನಡೆಸಿ, ಫೆ.16ರಂದು ತುಮಕೂರು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಕೋಮು ಸೌಹಾರ್ದ ವೇದಿಕೆಯ ಗೌರವಾಧ್ಯಕ್ಷ ಅನೀಸ್ ಪಾಷ ಮಾತನಾಡಿ, ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ದಲಿತ ಯುವಕನ ಮೇಲಿನ ಹಲ್ಲೆ ಘಟನೆ ಅಮಾನವೀಯ ಕೃತ್ಯ. ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿದೆ.
ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಅಸಮಾಧಾನ ವ್ಯಕ್ತಪಡಿಸಿದರು. ರಾಜಕಾರಣಿಗಳು ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ದ್ವೇಷ, ಅಸೂಯೆ ಸೃಷ್ಟಿಸಿ,ಲಾಭ ಪಡೆಯುತ್ತಿದ್ದಾರೆ. ಮೂಲಭೂತವಾದಿಗಳು ದಿನೇ ದಿನೇ ಪ್ರಬಲರಾಗುತ್ತಿದ್ದಾರೆ. ಹಾಗಾಗಿ ಎಲ್ಲಾ ಪ್ರಗತಿಪರರು, ಹೋರಾಟಗಾರರು, ಮುಖಂಡರು ಒಂದಾಗಬೇಕಾದ ಕಾಲ ಈಗ ಬಂದಿದೆ.
ಕೆಲವು ಚುನಾಯಿತ ಪ್ರತಿನಿಧಿಧಿಗಳು ಕೇವಲ ಒಂದು ಜಾತಿ ಮತ್ತು ಕೋಮಿನ ಪರವಾಗಿ ನಿಂತು ಕೆಲಸ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದಾರೆ ಎಂದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಗ್ಗೆರೆ ರಂಗಪ್ಪ ಮಾತನಾಡಿ, ರಾಜ್ಯದಲ್ಲಿ ದಲಿತರ ಮೇಲೆ ಪದೇ ಪದೇ ಹಲ್ಲೆ ಘಟನೆ ನಡೆಯುತ್ತಿದ್ದು, ಎಲ್ಲಾ ದಲಿತ ಮತ್ತು ಮುಸ್ಲಿಂ ವರ್ಗದ ಜನರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಐರಣಿ ಚಂದ್ರು, ಆವರಗೆರೆ ವಾಸು, ಹನೀಫ್‌ಸಾಬ್, ಅಬ್ದುಲ್ ಸಮದ್, ಅಬ್ದುಲ್ ಸತ್ತರ್, ಗೌಸ್‌ಖಾನ್, ಕರಿಬಸಪ್ಪ, ಅಸದುಲ್ಲಾ, ಉಷಾ ಎಚ್. ಕೈಲಾಸದ್, ಸತೀಶ್ ಅರವಿಂದ್, ರಾಘುದೊಡ್ಡಮನಿ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.