ಕಳೆದ ಒಂದೂವರೆ, ಎರಡು ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಗಾಯಾಳುಗಳದ್ದೇ ಸುದ್ದಿ. ವಿಶ್ವದ ಇತರೆ ಯಾವುದೇ ತಂಡಗಳಲ್ಲಿ ಈ ಮಟ್ಟದ ಸಮಸ್ಯೆಗಳಿಲ್ಲ. ಸ್ವತಃ ನಾಯಕ ರೋಹಿತ್ ಶರ್ಮ ಗರಿಷ್ಠ ವೇಳೆ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ.
2018ರಲ್ಲಿ ಹಾರ್ದಿಕ್ ಪಾಂಡ್ಯ ಏಷ್ಯಾ ಕಪ್ ವೇಳೆ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಹಲವು ತಿಂಗಳ ನಂತರ ತಂಡಕ್ಕೆ ಮರಳಿದ ಅವರು, ಬಹಳ ಕಾಲ ಟೆಸ್ಟ್ ತಂಡದಲ್ಲಿ ಆಡಲು ಬೇಕಾದ ಫಿಟ್ನೆಸ್ ಗಳಿಸಿರಲಿಲ್ಲ. 2021ರ ಟಿ20 ತಂಡದಿಂದಲೂ ಕೈಬಿಡಲ್ಪಟ್ಟರು. 2022ರಲ್ಲಿ ಅವರು ಮತ್ತೆ ಒಬ್ಬ ಪಕ್ಕಾ ಆಲ್‌ರೌಂಡರ್ ಆಗಿ ಹೊರಹೊಮ್ಮಿದರು. ಈಗವರು ಭಾರತ ಟಿ20 ತಂಡದ ನಾಯಕ.
ಇನ್ನು ರವೀಂದ್ರ ಜಡೇಜ. ಅವರು ಮಂಡಿಗೆ ಗಾಯ ಮಾಡಿಕೊಂಡು 2022ರ ಏಷ್ಯಾ ಕಪ್‌ನಿಂದ ಹೊರಬಿದ್ದರು. ಇಲ್ಲಿಯವರೆಗೆ ಮರಳಿ ತಂಡ ಪ್ರವೇಶಿಸಿಲ್ಲ. ಕೆ.ಎಲ್.ರಾಹುಲ್ ಕೂಡ ಆಗಾಗ ಗಾಯಗೊಳ್ಳುತ್ತಲೇ ಇರುತ್ತಾರೆ. ವಿಶ್ವವಿಖ್ಯಾತ ವೇಗಿ ಬುಮ್ರಾ ಟಿ20 ವಿಶ್ವಕಪ್‌ನಲ್ಲಿ ಆಡಲು ಆಗಲೇ ಇಲ್ಲ. ಬೆನ್ನುನೋವಿನ ಹಿನ್ನೆಲೆಯಲ್ಲಿ ದೀರ್ಘಕಾಲ ಹೊರಗುಳಿದಿದ್ದಾರೆ. ಶ್ರೀಲಂಕಾ ವಿರುದ್ಧ ಮಂಗಳವಾರದಿಂದ ಆರಂಭವಾಗುವ ಏಕದಿನ ಸರಣಿಯಲ್ಲಿ ಬುಮ್ರಾ ಆಡುತ್ತಾರೆ ಎಂದು ವರದಿಯಾಗಿತ್ತು. ದಿಢೀರನೇ ಸೋಮವಾರ ಅವರು ಆಡುವುದಿಲ್ಲ ಎಂದು ಬಿಸಿಸಿಐ ತಿಳಿಸಿತು. ಕಾರಣ ಅವರಿಗೆ ಬೆನ್ನುನೋವು ವಾಸಿಯಾಗದಿರುವುದು.
ತಂಡದ ಪ್ರಮುಖ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಒಬ್ಬರನ್ನು ಬಿಟ್ಟರೆ, ಉಳಿದೆಲ್ಲ ಆಟಗಾರರೂ ಗಾಯದಿಂದ ಆಗಾಗ ಹೊರಗುಳಿಯುತ್ತಲೇ ಇರುತ್ತಾರೆ. ನಾಯಕ ರೋಹಿತ್ ಶರ್ಮ ಅವರದ್ದೇ ಇದರಲ್ಲಿ ಅಗ್ರಪಾಲು. ತಮಿಳುನಾಡು ವೇಗಿ ಟಿ.ನಟರಾಜನ್ ಹೊರಬಿದ್ದಿದ್ದೇ ಗಾಯದಿಂದ. ಇಂದಿಗೂ ಅವರಿಗೆ ಭಾರತ ತಂಡಕ್ಕೆ ಮರಳಲಾಗಿಲ್ಲ! ಈ ಗಾಯಗಳಿಗೆಲ್ಲ ಕಾರಣವೇನು ಎನ್ನುವುದಕ್ಕೆ ತರಹೇವಾರಿ ವಿಶ್ಲೇಷಣೆಗಳಿವೆ. ವೀರೇಂದ್ರ ಸೆಹ್ವಾಗ್, ಭಾರತೀಯರು ಫಿಟ್ನೆಸ್ ಗಾಗಿ ಇತ್ತೀಚೆಗೆ ಅತಿಯಾಗಿ ಜಿಮ್ ಮಾಡುತ್ತಾರೆ. ಅದು ಅವರನ್ನು ಗಾಯಗೊಳಿಸುತ್ತದೆ ಎನ್ನುತ್ತಾರೆ. ಗಾವಸ್ಕರ್ ಕೂಡ ಫಿಟ್ನೆಸ್ ಅಗತ್ಯ, ಆದರೆ ಯೋಯೋ, ಡೆಕ್ಸಾ ಪರೀಕ್ಷೆಗಳೆಲ್ಲ ಅನಗತ್ಯ. ಕ್ರಿಕೆಟ್‌ನಲ್ಲಿ ಬೌಲರ್, ಬ್ಯಾಟರ್, ವಿಕೆಟ್ ಕೀಪರ್‌ಗಳಿಗೆ ಪ್ರತ್ಯೇಕ ರೀತಿಯ ಫಿಟ್ನೆಸ್ ಅಗತ್ಯವಿರುತ್ತದೆ. ಅವರನ್ನೆಲ್ಲ ಒಂದೇ ಮಾದರಿಯ ಫಿಟ್ನೆಸ್ ನಲ್ಲಿ ಹಾಕಿ ತೂಗಲು ಸಾಧ್ಯವಿಲ್ಲ ಎಂದಿದ್ದಾರೆ. ಕಪಿಲ್ ದೇವ್ ಇದನ್ನೇ ಬೆಂಬಲಿಸುತ್ತಾರೆ.
ಭಾರತ ತಂಡದಲ್ಲಿ ಫಿಟ್ನೆಸ್ ಗೆ ಗರಿಷ್ಠ ಆದ್ಯತೆ ಬಂದಿದ್ದು ಕೊಹ್ಲಿ ನಾಯಕರಾದ ಮೇಲೆ. ಅದಾದ ಮೇಲೆ ಗಾಯಾಳುಗಳ ಸಂಖ್ಯೆಯೂ ಹೆಚ್ಚಿದೆ. ಗಾಯಾಳುಗಳು ಸಂಖ್ಯೆ ಹೀಗೆ ಹೆಚ್ಚಲು ಕಾರಣವೇನೆಂದು ಗೊತ್ತಾಗಿಲ್ಲ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್, ಐಪಿಎಲ್‌ನಿಂದ ಒತ್ತಡ ಹೆಚ್ಚಾಗಿದೆಯಾ? ಆಟಗಾರರು ನಿಜವಾಗಲೂ ಫಿಟ್ನೆಸ್ ಹೊಂದಿಲ್ಲವೇ? ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಗಾಯಗೊಂಡ ಕ್ರಿಕೆಟಿಗರು ಮರಳಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಮುನ್ನ, ದೇಶೀಯ ಕ್ರಿಕೆಟ್‌ನಲ್ಲಿ ಆಡಿ ಫಿಟ್ನೆಸ್ ಸಾಬೀತು ಮಾಡಬೇಕೆಂಬ ವಾದಗಳೂ ಹುಟ್ಟಿಕೊಂಡಿವೆ. ಆಟಗಾರರು ಸಕ್ಷಮವಾಗಿರಲು ಕ್ರಮ ತೆಗೆದುಕೊಳ್ಳುವುದು ಬಿಸಿಸಿಐ ಜವಾಬ್ದಾರಿ. ಈ ಸಮಸ್ಯೆಗೊಂದು ಶಾಶ್ವತ ಪರಿಹಾರವನ್ನು ಅದು ನೀಡಲೇಬೇಕು.