ಚಿತ್ರದುರ್ಗ: ಬುದ್ಧನನ್ನು ನಾವು ಅರಿಯಬೇಕಾದರೆ ಕೆಟ್ಟ ಗುಣಗಳನ್ನು ಮೊದಲು ತ್ಯಜಿಸಬೇಕು ಎಂದು ಸಾಹಿತಿ, ಚಿಂತಕ ಡಾ| ನಟರಾಜ್ ಬೂದಾಳ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಅರಿವಿನ ಚಾವಡಿ ಚಿತ್ರದುರ್ಗ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಬುದ್ಧನನ್ನು ಅರಿಯಬೇಕಾದರೆ ಮೊದಲು ನಾವು ಖಾಲಿಯಾಗಬೇಕು. ಖಾಲಿಯಾಗುವುದು ಎಂದರೆ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಹೊರ ಹಾಕಿ ಸ್ವಚ್ಛವಾಗುವುದು ಎಂದರ್ಥ. ಶೂನ್ಯವಾದ ತಾಯಿ ಗರ್ಭದಲ್ಲಿ ಕೇಡುಗಳಿರುವುದಿಲ್ಲ. ಖಾಲಿ ಇರುವುದನ್ನು ತುಂಬಿಕೊಳ್ಳುವುದೇ ಬೌದ್ಧ ಧರ್ಮ. ಮತೀಯ ಪುಸ್ತಕಗಳು ಬೌದ್ಧ ಧರ್ಮ ಇಲ್ಲವೆಂದು ಹೇಳುತ್ತವೆ. ಹಾಗಾಗಿ ಪುಸ್ತಕದಿಂದ ಬುದ್ಧನನ್ನು ಅರ್ಥೈಸಿಕೊಳ್ಳಲು ಆಗದು. ಕಾಯಕ ನಿಷ್ಠೆಯಿಂದ ಅರಿತುಕೊಳ್ಳಬಹುದು ಎಂದರು. ಯಾವುದೇ ವ್ಯಕ್ತಿ ಮನಸ್ಸನ್ನು ಮಣಿಸದೆ ಧ್ಯಾನ, ಪೂಜೆ ಮಾಡಿದರೆ ವ್ಯರ್ಥ. ಪಠ್ಯಗಳ ಆಚೆ ಬುದ್ಧನನ್ನು ಕಾಣಬೇಕು. ಪ್ರತಿ ಮನುಷ್ಯನಲ್ಲೂ ಬುದ್ಧ ಸತ್ವ ಇದೆ. ನಿಸರ್ಗದ ತತ್ವವಾಗಿ ಬಂದಿರುವ ಜ್ಞಾನವೇ ಬುದ್ಧ. ಪ್ರತಿಯೊಬ್ಬರೂ ವಿವೇಕದಿಂದ ಬದುಕುವ ಜೀವನ ಕ್ರಮವೂ ಆಗಿದೆ. ಅಲ್ಲಮ ಒಬ್ಬ ಪ್ರತ್ಯೇಕ ಬುದ್ಧ. ಅಲ್ಲಮನಿಗೆ ಗುರು-ಶಿಷ್ಯರ ಹಂಗು ಇಲ್ಲ ಎಂದು ತಿಳಿಸಿದರು.
ಬೌದ್ಧ ಧರ್ಮದ ಮಹಾಯಾನವನ್ನು ಕಟ್ಟಿಕೊಟ್ಟವರು ಕನ್ನಡಿಗರು. ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಲೇ ಇಲ್ಲ. ಯಾವುದೇ ವಿಷಯಕ್ಕೆ ಜೋತು ಬೀಳುವುದೇ ದುಃಖಕ್ಕೆ ಕಾರಣ ಎಂದಿದ್ದ. ನಿಸರ್ಗದ ವಿರುದ್ಧ ಜೀವನ ಮಾಡುವಂತೆ ಎಂದೂ ಹೇಳಲಿಲ್ಲ. ಬುದ್ಧ ದೇವರು, ದೇವ ದೂತನೂ ಅಲ್ಲ. ದೇವರ ಕುರಿತ ಬುದ್ಧನ ಒಂದೇ ಉತ್ತರ ಗೊತ್ತಿಲ್ಲ ಎಂಬುದಾಗಿತ್ತು ಎಂದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಅಂಬೇಡ್ಕರ್, ಬುದ್ಧ, ಬಸವಣ್ಣನವರ ಚಿಂತನೆಗಳನ್ನು ಅರಿಯಲು ಪ್ರತಿ ತಿಂಗಳ ಒಂದು ಭಾನುವಾರ ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು. ಸಾಹಿತಿಗಳು, ಚಿಂತಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಸ್ತುತ ದಿನಗಳಲ್ಲಿ ಇಕ್ಕಟ್ಟು ಮತ್ತು ಭ್ರಮೆಗಳಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ನಮಗೆಲ್ಲ ಅರಿವಿನ ಮಾರ್ಗ ಅವಶ್ಯಕವಾಗಿದೆ. ಲೋಪವನ್ನು ತೊಳೆದು ಹಾಕಿ ಉತ್ತಮವಾದುನ್ನು ಅಳವಡಿಸಿಕೊಳ್ಳುವುದೇ ಬೌದ್ಧ ಧರ್ಮದ ಧ್ಯೇಯ.
• ಡಾ| ನಟರಾಜ್ ಬೂದಾಳ್, ಸಾಹಿತಿ-ಚಿಂತಕರು.