Advertisement
ಸುಬ್ರಹ್ಮಣ್ಯ-ಹರಿಹರ ಸಂಪರ್ಕ ರಸ್ತೆಯ ಐನೆಕಿದು ಗ್ರಾಮದ ಗುಂಡಡ್ಕ ಎಂಬಲ್ಲಿ ಹರಿಯುತ್ತಿರುವ ಹೊಳೆಗೆ ಬ್ರಿಟೀಷರ ಕಾಲದಲ್ಲಿ ಸೇತುವೆ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಉಂಟಾದ ಪ್ರಾಕೃತಿಕ ವಿಕೋಪಗಳ ಸಂದರ್ಭ ಹೊಳೆಯಲ್ಲಿ ಬ್ರಹತ್ ಗಾತ್ರದ ಮರದ ದಿಮ್ಮಿಗಳು ತೇಲಿ ಬಂದಿವೆ. ಮರದ ದಿಮ್ಮಿಗಳು ಸೇತುವೆ ಬುಡಕ್ಕೆ ಅಪ್ಪಳಿಸಿ ಸೇತುವೆ ಶಿಥಿಲಗೊಂಡಿದೆ. ಸೇತುವೆ ಪಿಲ್ಲರುಗಳಿಗೆ ಹಾನಿಯಾಗಿವೆ. ಸೇತುವೆಯ ಕೆಳಭಾಗದಲ್ಲಿ ಮರದ ದಿಮ್ಮಿಗಳು ಸಿಲುಕಿಕೊಂಡಿದ್ದು, ಅವುಗಳ ತೆರವು ಕಾರ್ಯ ಕೂಡ ನಡೆದಿಲ್ಲ. ಇದು ಸೇತುವೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ಸೇತುವೆ ಮತ್ತೆ ಮುಳುಗಡೆಗೊಳ್ಳಲು ಇದು ಕಾರಣವಾಗುತ್ತಿದೆ.
ಸುಬ್ರಹ್ಮಣ್ಯದಿಂದ ಐನೆಕಿದು, ಹರಿಹರ, ಬಾಳುಗೋಡು, ಕೊಲ್ಲಮೊಗ್ರ, ಕಲ್ಮಕಾರು, ಕಡಮಕಲ್ಲು ಎಸ್ಟೇಟ್ ಈ ಎಲ್ಲ ಗ್ರಾಮಗಳನ್ನು ಸಂಪರ್ಕಿಸುವ ಈ ಸೇತುವೆ ಈ ಭಾಗದ ಜನರಿಗೆ ಆಧಾರವಾಗಿದೆ. ಈ ಭಾಗದಲ್ಲಿ ಕೃಷಿಕರೇ ಹೆಚ್ಚಿದ್ದಾರೆ. ತಾವು ಬೆಳೆದ ಫಸಲನ್ನು ಮಾರಾಟ ಹಾಗೂ ಖರೀದಿಸಲು ನಗರಗಳಿಗೆ ತೆರಳಲು ಬಳಸಲ್ಪಡುವ ಪ್ರಮುಖ ರಸ್ತೆ ಇದಾಗಿದೆ. ಈ ರಸ್ತೆ ಮೂಲಕ ಸುಬ್ರಹ್ಮಣ್ಯದಿಂದ ಕಡಮಕಲ್ಲು ಗಾಳಿ ಬೀಡು ಮೂಲಕ ಮಡಿಕೇರಿಗೂ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಶಿಥಿಲ ಸೇತುವೆ ಕುಸಿದಲ್ಲಿ ಹಲವು ಭಾಗಗಳ ಸಂಪರ್ಕ ಕಡಿತಗೊಳ್ಳುವ ಭೀತಿಯನ್ನು ಸ್ಥಳೀಯರು ಹೊರಹಾಕುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಸುಬ್ರಹ್ಮಣ್ಯ- ಜಾಲೂÕರು-ಮೈಸೂರು ರಾಜ್ಯ ಹೆದ್ದಾರಿಯ ಸುಬ್ರಹ್ಮಣ್ಯ-ನಡುಗಲ್ಲು ಮಧ್ಯೆ ಪ್ರಾಕೃತಿಕ ವಿಕೋಪಗಳಿಂದ ಹೆದ್ದಾರಿ ಸಂಪರ್ಕ ಕಡಿತಗೊಂಡಾಗ ಪರ್ಯಾಯವಾಗಿ ಈ ಸೇತುವೆ ಮೂಲಕವೇ ಸಾರಿಗೆ ಬಸ್ ಸಹಿತ ಇತರೆ ವಾಹನಗಳು ಸಂಚರಿಸಿದ್ದವು. ಇಂತಹ ಸಂದರ್ಭ ಪರ್ಯಾಯ ಬಳಕೆಗೆ ಲಭ್ಯವಿರುವ ರಸ್ತೆಯಲ್ಲಿ ಸಂಚಾರಕ್ಕೂ ಸಂಚಕಾರ ಎದುರಾಗಿದೆ.
Related Articles
ಬ್ರಿಟೀಷರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಈ ಸೇತುವೆಯು ಮೇಲ್ನೋಟಕ್ಕೆ ಸುಭದ್ರವಿದ್ದಂತೆ ಕಂಡರೂ, ಕೆಳಭಾಗದಲ್ಲಿ ನೀರಿನ ಸೆಳೆತ, ಮರದ ದಿಮ್ಮಿಗಳ ಹೊಡೆತಗಳಿಗೆ ಪಿಲ್ಲರ್‌ಗಳಿಗೆ ಹಾನಿಯುಂಟಾಗಿರುವುದು ಯಾವುದೇ ಕ್ಷಣದಲ್ಲಿ ಕುಸಿತ ಕಾಣುವ ಭೀತಿ ಎದುರಿಸುತ್ತಿದೆ. ಸೇತುವೆ ಬುಡದಲ್ಲಿ ಸಂಗ್ರಹಗೊಂಡ ಮರಗಳ ದಿಮ್ಮಿಗಳ ತೆರವು ಅವಶ್ಯಕ. ಇಲ್ಲವಾದಲ್ಲಿ ಮಳೆಗಾದಲ್ಲಿ ಕೃತಕ ನೆರೆ ಉಂಟಾಗಲಿದೆ. ಅಕ್ಕಪಕ್ಕದ ಜನವಸತಿ ಪ್ರದೇಶ ಹಾಗೂ ಕೃಷಿಭೂಮಿ ಮುಳುಗಡೆಯಾಗಬಹುದು. ಕಳೆದ ಮಳೆಗಾಲದಲ್ಲಿ 2 ಬಾರಿ ಸೇತುವೆ ಮುಳುಗಡೆಗೊಂಡಿತ್ತು. ಮುಂಜಾಗ್ರತೆ ವಹಿಸದೆ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸ್ಥಳೀಯರು.
Advertisement
ಪರಿಶೀಲಿಸಲು ಕ್ರಮಗುಂಡಡ್ಕ ಸೇತುವೆಗೆ ಯಾವುದೇ ರೀತಿಯ ದೊಡ್ಡ ಮಟ್ಟದ ಹಾನಿ ಉಂಟಾಗಿಲ್ಲ. ಅದರ ಪಿಲ್ಲರ್‌ಗಳು ಬಲಿಷ್ಠವಾಗಿದೆ. ಮುಂದಿನ ದಿನಗಳಲ್ಲಿ ಆ ಭಾಗಕ್ಕೆ ತೆರಳಿ ಸೇತುವೆಗೆ ಹಾನಿ ಉಂಟಾಗಿದೆಯೇ ಎಂದು ಪರಿಶೀಲಿಸಿ, ಸರಿಪಡಿಸುವ ಬಗ್ಗೆ ಮುಂದೆ ಕ್ರಮ ಕೈಗೊಳ್ಳಲಾಗುವುದು.
– ಹನುಮಂತರಾಯಪ್ಪ
ಜಿ.ಪಂ. ಎಂಜಿನಿಯರ್, ಸುಳ್ಯ -ದಯಾನಂದ ಕಲ್ನಾರ್