ಮಂಡ್ಯ: ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲು ಮತದಾರರು ನೆರವಾಗಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಪಿ.ರವಿಕುಮಾರ್ ಮನವಿ ಮಾಡಿದರು.
ನಗರದ ಬಂದೀಗೌಡ ಬಡಾವಣೆಯ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ತಾನು ಮಂಡ್ಯ ಕ್ಷೇತ್ರಕ್ಕೆ ಹೊಸಬನಲ್ಲ. ಕಳೆದ ಹತ್ತಾರು ವರ್ಷಗಳಿಂದಲೂ ಓಡಾಡಿಕೊಂಡಿದ್ದೇನೆ. ಹಲವಾರು ಮಂದಿಗೆ ನೆರವು ನೀಡಿ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದೇನೆ. ನಿಮ್ಮ ಊರು, ಓಣಿ, ಬೀದಿಯಲ್ಲೇ ಓಡಾಡುತ್ತಾ, ಅಸಂಘಟಿತ ಕಾರ್ಮಿಕರ ಸಮಸ್ಯೆ ತಿಳಿಯುವ ಪ್ರಯತ್ನ ನಡೆಸಿದ್ದು, ಜನರು, ರೈತರ ಸಮಸ್ಯೆಗಳ ಅರಿವಿರುವ ತನ್ನನ್ನು ಆಯ್ಕೆ ಮಾಡಿದಲ್ಲಿ ವಿಧಾನಸೌಧದಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಸಾಮಾನ್ಯರ ಏಳಿಗೆಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.
ಡಿಕೆಶಿ ರೋಡ್‌ಶೋ ಇಂದು: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಮಂಡ್ಯ ನಗರಕ್ಕೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಪರ ರೋಡ್‌ಶೋ ನಡೆಸಲಿದ್ದಾರೆ. ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಬೆಳಗ್ಗೆ 7ಕ್ಕೆ ಪೂಜೆ ಸಲ್ಲಿಸುವ ಮೂಲಕ ರೋಡ್‌ಶೋಗೆ ಚಾಲನೆ ನೀಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಸಾರ್ವಜನಿಕರು, ಕಾರ್ಯಕರ್ತರು ಭಾಗವಹಿಸುವಂತೆ ಕೋರಿದರು.
ರಾಜ್ಯ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ಶಾಂತವೀರನಾಯಕ್, ಜಿಲ್ಲಾಧ್ಯಕ್ಷ ಹಾಲಹಳ್ಳಿ ಶಶಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಹುಲಿವಾನ ಶಿವರಾಂ, ಗುರು ಆತ್ಮಾನಂದ, ಸಿ.ಎಂ.ದ್ಯಾವಪ್ಪ, ಕನ್ನಲಿ ಚನ್ನಪ್ಪ, ವಿಜಯಲಕ್ಷಿ ಮತ್ತಿತರರಿದ್ದರು.