ಬೆಂಗಳೂರು; ಮಾಜಿ ಸಚಿವ ಹಾಗೂ ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕರಾಗಿದ್ದ ಆನಂದ್‌ಸಿಂಗ್ ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೆ. ನಾನು ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟವನು. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ಪಕ್ಷದ ಎಲ್ಲ ಹಿರಿಯ ನಾಯಕರ ಸೂಚನೆಯಂತೆ ಪಕ್ಷದಲ್ಲಿ ಕೆಲಸ ಮಾಡಲು ಸಿದ್ದನಿದ್ದೇನೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಜಿಲ್ಲೆಯ ಒಂಭತ್ತು ಕ್ಷೇತ್ರಗಳಲ್ಲಿಯೂ ಗೆಲುವು ತಂದುಕೊಡಲು ಶ್ರಮಿಸುತ್ತೇನೆ ಎಂದರು.
ಫೆಬ್ರವರಿ 10 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೊಸಪೇಟೆಗೆ ಆಗಮಿಸುತ್ತಿದ್ದು, ಅಂದಿನ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯ ಶ್ರಮ ವಹಿಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಆನಂದ್ ಸಿಂಗ್ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟವರು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿದ್ದರು. ಜಾತ್ಯತೀತ ಮನೋಭಾವದವರು ಬಿಜೆಪಿಯಲ್ಲಿ ಇರಬಾರದು. ಕಾಂಗ್ರೆಸ್ ಸೇರಲು ಬಹಳ ಜನ ಮುಂದೆ ಬಂದಿದ್ದಾರೆ. ಆದರೆ, ಸಮಾಜ ಘಾತಕ ಶಕ್ತಿಗಳನ್ನು ಕಾಂಗ್ರೆಸ್ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಹಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ವಿಜಯನಗರದ ಹೊಸ ಪೀಳಿಗೆ ಕಾಂಗ್ರೆಸ್‌ಗೆ ಕಾಲಿಟ್ಟಿದೆ. ವಿಜಯನಗರದ ಸೈನ್ಯ ಈಗ ಕಾಂಗ್ರೆಸ್ ಪರ ಪ್ರಚಾರ ಮಾಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ ಉಪಸ್ಥಿತರಿದ್ದರು.