Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಾಖಂಡದ ಕುಂಭಮೇಳದ ಕುರಿತು “ಸೂಪರ್ ಸ್ಪ್ರೆಡರ್” ಎಂದು ಬಿಂಬಿಸಲು ಟೂಲ್ ಕಿಟ್ ನಲ್ಲಿ ಸೂಚಿಸಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಬೆಂಬಲಿಗರು, ಕೆಲವು ಮಾಧ್ಯಮಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದೇ ಶಬ್ದವನ್ನು ಪ್ರಯೋಗಿಸಿದ್ದಾರೆ. ಕೋವಿಡ್ ಪ್ರಕರಣವನ್ನು ಗಮನಿಸಿದರೆ ಮಹಾರಾಷ್ಟ್ರ ಗರಿಷ್ಠ ಸಂಖ್ಯೆಯನ್ನು ಹೊಂದಿದೆ. ಕೇರಳ ಎರಡನೇ ಸ್ಥಾನದಲ್ಲಿದೆ. 2 ಲಕ್ಷಕ್ಕೂ ಹೆಚ್ಚು ಜನ ಕುಂಭ ಮೇಳದಲ್ಲಿ ಭಾಗವಹಿಸಿದವರನ್ನು ಪರೀಕ್ಷೆ ಮಾಡಿದರೆ, 1,700 ಜನರಷ್ಟೇ ಪಾಸಿಟಿವ್ ಆಗಿದ್ದಾರೆ ಎಂದು ವಿವರಿಸಿದರು.
Related Articles
Advertisement
ಇದನ್ನೂ ಓದಿ: ದೀರ್ಘಕಾಲದವರೆಗೆ ತೊಳೆಯದ ಮಾಸ್ಕ್ ಮರು ಬಳಕೆಯಿಂದ ಫಂಗಸ್ ಬರುತ್ತೆ: ತಜ್ಞರು
ಸೆಂಟ್ರಲ್ ವಿಸ್ಟಾ ಯೋಜನೆ ಮತ್ತು ಪಿಎಂ ಕೇರ್ ಟ್ಯಾಗ್ ಮಾಡಿ “ಮೋದಿ ಹೌಸ್” ಎಂದು ಟೀಕಿಸಲಾಯಿತು. ಇವೆಲ್ಲವೂ ಕಾಕತಾಳೀಯ ಅಲ್ಲ ಎಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಕಾಂಗ್ರೆಸ್ ಪದಾಧಿಕಾರಿ ಸಂಯುಕ್ತ ಬಸು, ಟೂಲ್ಕಿಟ್ ಮೂಲಕ ಉತ್ತಮ ಕೆಲಸ ನಡೆದಿದೆ ಎಂದು ಸ್ಪಷ್ಟಪಡಿಸಿದ್ದರು. ಇದೆಲ್ಲವೂ ಪೂರ್ವಯೋಜಿತ ಎಂಬುದನ್ನು ಸ್ಪಷ್ಟಪಡಿಸುತ್ತದೆ. ದೇಶವನ್ನು ಕೆಳಮಟ್ಟದಲ್ಲಿ ತೋರಿಸುವ ಕಾಂಗ್ರೆಸ್ನ ಪ್ರಯತ್ನ ರಾಜಕೀಯ ಅಂತ್ಯಕಾಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಭಾರತದ ವಿರುದ್ಧ ಷಡ್ಯಂತ್ರ ರೂಪಿಸಿದ್ದರಿಂದ ಜನರ ಸಂಕಷ್ಟ ಹೆಚ್ಚಾಗಿದೆ. ಬೆಡ್ ಬ್ಲಾಕಿಂಗ್ ಮೂಲಕ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಯಿತು. ದೇಶದ ವಿಜ್ಞಾನಿಗಳು, ವೈದ್ಯರ ಮೇಲೆ ಕಾಂಗ್ರೆಸ್ಸಿಗರಿಗೆ ನಂಬಿಕೆಯಿಲ್ಲ. ಕಾಂಗ್ರೆಸ್ಸಿನ ಅಧಿನಾಯಕಿ ವಿದೇಶಕ್ಕೆ ಚಿಕಿತ್ಸೆಗೆ ಹೋಗುತ್ತಾರೆ. ಐದು ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್ ಮುಖಂಡರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ಕೊರತೆಗಳಿಗೆ ಬಿಜೆಪಿಯವರನ್ನು ಟೀಕಿಸಲು ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಧಿಕಾರದ ಹಪಾಹಪಿತನ ಮತ್ತು ಅರಾಜಕತೆ ಸೃಷ್ಟಿಗೆ ಪ್ರಯತ್ನ ಖಂಡನೀಯ ಎಂದರು.
ಮಾರ್ಚ್ 17ರಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದ ಪ್ರಧಾನಿಯವರು ಮುಂಜಾಗ್ರತಾ ಕ್ರಮಗಳ ಕುರಿತು ಮುನ್ಸೂಚನೆ ನೀಡಿದ್ದರು. ವರ್ಷದೊಳಗೇ ಎರಡು ಲಸಿಕೆ ಕಂಡುಹಿಡಿಯಲಾಯಿತು. ಆಗ ವಿಜ್ಞಾನಿಗಳನ್ನು ಅವಹೇಳನ ಮಾಡಿ “ಮೋದಿ ವ್ಯಾಕ್ಸಿನ್” ಎಂದು ಲೇವಡಿ ಮಾಡಿದ ಕಾಂಗ್ರೆಸ್ಸಿಗರು, ವಿದೇಶಿ ಮಾನಸಿಕತೆಯ ಹಿನ್ನೆಲೆ ಉಳ್ಳವರಾಗಿದ್ದಾರೆ. ಅಲ್ಲದೇ, ಈಗ ವ್ಯಾಕ್ಸಿನ್ಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ಅದು ಅವರ ಇಬ್ಬಂದಿತನಕ್ಕೆ ಸಾಕ್ಷಿ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರು ನಾಟಕ ಆಡುವುದನ್ನು ಬಿಡಬೇಕು. ಲಸಿಕೆ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಿದ ಕಾಂಗ್ರೆಸ್ಸಿಗರು ತಾವು ಮಾಡಿದ ಅಪಪ್ರಚಾರಕ್ಕೆ ಸಂಬಂಧಿಸಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಕಪ್ಪು ಶಿಲೀಂಧ್ರದಂತ ಮಾರಕ ರೋಗದ ವಿಚಾರದಲ್ಲಿ ರಾಜ್ಯಕ್ಕೇಕೆ ಇಷ್ಟು ಆಲಸ್ಯ?ಎಚ್ ಡಿಕೆ ಪ್ರಶ್ನೆ
ಪಿಎಂ ಕೇರ್ಗೆ ಒಂದು ರೂಪಾಯಿಯನ್ನೂ ಕೊಡದ ಕಾಂಗ್ರೆಸ್ನಿಂದ ಅಪಪ್ರಚಾರದಿಂದ ಪ್ರಚಾರ ಪಡೆಯುತ್ತಿದೆ. ಎತ್ತಿನ ಗಾಡಿಯಿಂದ ರಾಜಕೀಯ ಆರಂಭಿಸಿದ ಕಾಂಗ್ರೆಸ್ನ ಕೆಲವು ಮುಖಂಡರು ಈಗ ಖಾಸಗಿ ಜೆಟ್ನಲ್ಲಿ ಹಾರಾಟ ನಡೆಸುವಷ್ಟು ಶ್ರೀಮಂತರಾಗಿದ್ದಾರೆ. ಆದರೆ, ಸ್ವಂತ ನೆಲೆಯಲ್ಲಿ ದೇಶಕ್ಕೆ ಮತ್ತು ದೇಶದ ಜನತೆಗೆ ಸಹಾಯ ಮಾಡಿಲ್ಲ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಯಾವತ್ತೂ ಕಾಡದಂತೆ ಉತ್ಪಾದನೆ- ವಿತರಣಾ ಜಾಲವನ್ನು ಪ್ರಧಾನಿಯವರು ಬಲಪಡಿಸಿದ್ದಾರೆ. ಕೋವಿಡ್ ಸಂಕಷ್ಟದ ವಿಚಾರ ಮಾತ್ರವಲ್ಲದೆ, ಅಪಪ್ರಚಾರದ ವಿರುದ್ಧ ನಾವು ಗೆಲ್ಲಲಿದ್ದೇವೆ. ಬಿಜೆಪಿ ಪಕ್ಷದ ನೆಲೆಯಲ್ಲಿ “ಸೇವಾ ಹೀ ಸಂಘಟನ್” ಮೂಲಕ ಆಹಾರ ವಿತರಣೆ, ಆಕ್ಸಿಜನ್ ನೆರವು, ಬೆಡ್ ಒದಗಿಸುವುದು ಮತ್ತಿತರ ಮಾನವೀಯ ನೆಲೆಯಲ್ಲಿ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್ ಮುಖಂಡರು ಟೂಲ್ಕಿಟ್ ಮೂಲಕ ಅಪಪ್ರಚಾರ ಮಾಡಿದ್ದಾರೆ. ಭಗವಂತನೂ ಕ್ಷಮಿಸಲಾರದಂಥ ಘೋರ ಅಪರಾಧವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಎನ್.ರವಿಕುಮಾರ್, ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರೂ ಆದ ಛಲವಾದಿ ನಾರಾಯಣಸ್ವಾಮಿ, ಶಾಸಕರು ಮತ್ತು ರಾಜ್ಯ ವಕ್ತಾರರೂ ಆದ ರಾಜ್ಕುಮಾರ್ ಪಾಟೀಲ ತೇಲ್ಕೂರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.