Advertisement

ಸಿದ್ದು ನಿರ್ಧಾರಕ್ಕಾಗಿ ಕಾದಿದೆ ಕಾಂಗ್ರೆಸ್‌

12:19 PM Jul 24, 2018 | Team Udayavani |

ಮೈಸೂರು: ಲೋಕಸಭಾ ಚುನಾವಣೆಗೆ ಹತ್ತು ತಿಂಗಳಿರುವಾಗಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಮತದಾರರ ಮನೆಬಾಗಿಲು ತಲುಪುವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರ ಎದುರು ನೋಡುತ್ತಿದೆ. ಎಂದಿನಂತೆ ಜೆಡಿಎಸ್‌ ಪಕ್ಷದ್ದು ಕಾದು ನೋಡುವ ತಂತ್ರ.

Advertisement

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್‌ ನಿಂದ ಹೊರನಡೆದ ಎಚ್‌.ವಿಶ್ವನಾಥ್‌ ಅವರ ಸ್ಥಾನ ತುಂಬಲು ಅದೇ ಕುರುಬ ಸಮುದಾಯದ ಸಿ.ಎಚ್‌.ವಿಜಯಶಂಕರ್‌ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಕೊಡಿಸುವ ಭರವಸೆಯೊಂದಿಗೆ ಪಕ್ಷಕ್ಕೆ ಕರೆತಂದಿದ್ದಾರೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಐಸಿಸಿ ಮಟ್ಟದಲ್ಲಿ ಪ್ರಭಾವಿಯಾಗಿರುವ ಸಿದ್ದರಾಮಯ್ಯ ಅವರ ಮಾತೇ ಇಲ್ಲಿ ಅಂತಿಮ. ಈ ವಿಧಾನಸಭೆ ಚುನಾವಣೆಯೇ ನನ್ನ ಕಡೇ ಚುನಾವಣೆ, ಮುಂದೆ ಬ್ರಹ್ಮ ಬಂದು ಹೇಳಿದರೂ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದಾರೆ. ಚುನಾವಣೆ ಹತ್ತಿರವಾದಂತೆ ಯಾವ ನಿಲುವು ತಾಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಬೇಡದ ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ಸಂಸದ ಪ್ರತಾಪ್‌ ಸಿಂಹ ಅವರು ಸಂಪರ್ಕ್‌ ಫಾರ್‌ ಸಮರ್ಥನ್‌ ಹೆಸರಲ್ಲಿ ಕಳೆದ ಒಂದು ತಿಂಗಳಿಂದ ಕ್ಷೇತ್ರದಾದ್ಯಂತ ನಿರಂತರ ಪ್ರವಾಸ ಕೈಗೊಂಡು ಕೇಂದ್ರ ಸರ್ಕಾರದ ಸಾಧನೆಗಳ ವಿವರವುಳ್ಳ ಕಿರುಹೊತ್ತಿಗೆಯನ್ನು ವಿವಿಧ ಕ್ಷೇತ್ರಗಳ ಗಣ್ಯರಿಗೆ ತಲುಪಿಸುವ ಮೂಲಕ ಈಗಾಗಲೇ ಒಂದು ಸುತ್ತಿನ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಜೆಡಿಎಸ್‌ ಮಾತ್ರ ದೋಸ್ತಿ ಸರ್ಕಾರವನ್ನು ಮುನ್ನಡೆಸುವಲ್ಲಿ ಹೈರಾಣಾಗಿದ್ದು, ಲೋಕಸಭಾ ಚುನಾವಣೆಗೆ ಯಾವುದೇ ಸಿದ್ಧತೆಯಲ್ಲಿ ತೊಡಗಿಲ್ಲ. ಬದಲಿಗೆ ಕಾಂಗ್ರೆಸ್‌-ಜೆಡಿಎಸ್‌ ಎರಡೂ ಪಕ್ಷಗಳು ಸಿದ್ದರಾಮಯ್ಯ ಅವರ ನಿರ್ಧಾರವನ್ನು ಎದುರು ನೋಡುತ್ತಿವೆ.

Advertisement

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಾಬಲ್ಯವಿದ್ದರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಿಲ್ಲ. 1996ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್‌ ಅಭ್ಯರ್ಥಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ವಿರುದ್ಧ 2.46 ಲಕ್ಷ ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, 2.58 ಲಕ್ಷ ಮತಗಳಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಗೆಲುವಿನ ನಗೆ ಬೀರಿದ್ದರು.

2004ರ ಚುನಾವಣೆಯಲ್ಲಿ 3.16 ಲಕ್ಷ ಮತಗಳೊಂದಿಗೆ ಜಯ ಸಾಧಿಸಿದ ಬಿಜೆಪಿಯ ಸಿ.ಎಚ್‌.ವಿಜಯಶಂಕರ್‌ ವಿರುದ್ಧ ಜೆಡಿಎಸ್‌ನ ಎ.ಎಸ್‌.ಗುರುಸ್ವಾಮಿ 3.06 ಲಕ್ಷ ಮತಗಳಿಸಿ 2ನೇ ಸ್ಥಾನಗಳಿಸಿದ್ದು ಬಿಟ್ಟರೆ, ಇನ್ನುಳಿದ ಚುನಾವಣೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆ: ಸ್ವಾತಂತ್ರಾ ನಂತರ 1951ರಲ್ಲಿ ನಡೆದ ಮೊದಲ ಚುನಾವಣೆಯಿಂದಲೂ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಮೊದಲ ಚುನಾವಣೆಯಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಕಾಂಗ್ರೆಸ್‌ನ ಎನ್‌.ರಾಚಯ್ಯ ಹಾಗೂ ಕೆಎಂಪಿಯ ಎಂ.ಎಸ್‌.ಗುರುಪಾದಸ್ವಾಮಿ ಆರಿಸಿ ಬಂದಿದ್ದರು. 1957ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಎಂ.ಸಿದ್ದಯ್ಯ ಹಾಗೂ ಎಂ.ಶಂಕರಯ್ಯ ಗೆಲುವು ಸಾಧಿಸಿದ್ದರು.

1962ರಲ್ಲಿ ಮೈಸೂರು ಏಕ ಸದಸ್ಯ ಕ್ಷೇತ್ರವಾದಾಗ ಕಾಂಗ್ರೆಸ್‌ನ ಎಂ.ಶಂಕರಯ್ಯ ಗೆಲುವು ಸಾಧಿಸಿದ್ದರು. ನಂತರ 1967 ರಿಂದ 77ರವರೆಗೆ ಸತತ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ತುಳಸೀದಾಸಪ್ಪ ಆರಿಸಿ ಬಂದಿದ್ದರು. 1980ರಲ್ಲಿ ಕಾಂಗ್ರೆಸ್‌ನ ಎಂ.ರಾಜಶೇಖರ ಮೂರ್ತಿ ಗೆಲುವು ಸಾಧಿಸಿದರೆ, 1984, 89, 96,99ರಲ್ಲಿ ಕಾಂಗ್ರೆಸ್‌ನಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಜಯಗಳಿಸಿದ್ದರು. 1991ರ ಚುನಾವಣೆಯಲ್ಲಿ ಚಂದ್ರಪ್ರಭಾ ಅರಸು ಆರಿಸಿಬಂದಿದ್ದರು. 

ಬಿಜೆಪಿಗೂ ಬಲ: 1998ರ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಚ್‌.ವಿಜಯಶಂಕರ್‌ 3.55 ಲಕ್ಷ ಮತಗಳಿಸಿ ಆಯ್ಕೆಯಾಗುವ ಮೂಲಕ ಮೊಟ್ಟ ಮೊದಲ ಬಾರಿಗೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. 1999ರರಲ್ಲಿ ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಗೆಲುವು ಸಾಧಿಸಿದ್ದರು.

2004ರ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಚ್‌.ವಿಜಯಶಂಕರ್‌ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಡಗೂರು ಎಚ್‌.ವಿಶ್ವನಾಥ್‌ 3.54 ಲಕ್ಷ ಮತಗಳಿಸಿ ಆಯ್ಕೆಯಾದರೆ, ಬಿಜೆಪಿಯ ಸಿ.ಎಚ್‌.ವಿಜಯಶಂಕರ್‌ 3.47 ಲಕ್ಷ ಮತಗಳಿಸಿ ಸುಮಾರು 7 ಸಾವಿರ ಮತಗಳ ಅಂತರದಿಂದ ಸೋಲುಕಾಣಬೇಕಾಯಿತು.

ಹೊಸ ಮುಖ: 2014ರ ಚುನಾವಣೆಯಲ್ಲಿ ಬಿಜೆಪಿ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸಿ.ಎಚ್‌.ವಿಜಯಶಂಕರ್‌ ಅವರನ್ನು ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿ ಸಾಗಹಾಕಿ, ರಾಜಕೀಯಕ್ಕೆ ಹೊಸಬರಾದ ಪತ್ರಕರ್ತ ಪ್ರತಾಪ್‌ಸಿಂಹ ಅವರನ್ನು ಕಣಕ್ಕಿಳಿಸಿತು.

ಹಾಲಿ ಸಂಸದರಾಗಿದ್ದ ಅಡಗೂರು ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ ಅಭ್ಯರ್ಥಿ. ಜೆಡಿಎಸ್‌ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಅವರನ್ನು ಕಣಕ್ಕಿಳಿಸಿ ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡಿದ್ದರಿಂದ ಕ್ಷೇತ್ರದ ಪರಿಚಯವೇ ಇಲ್ಲದಿದ್ದ ಪ್ರತಾಪ್‌ ಸಿಂಹ, ಎಚ್‌.ವಿಶ್ವನಾಥ್‌ ವಿರುದ್ಧ ಗೆಲುವು ಸಾಧಿಸಿದ್ದರು.

ಕ್ಷೇತ್ರ ಪರಿಚಯ: ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ, ಚಾಮರಾಜ, ಹುಣಸೂರು ಹಾಗೂ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳು. ಕ್ಷೇತ್ರ ಪುನರ್‌ವಿಂಗಡಣೆ ನಂತರ ದಕ್ಷಿಣ ಕನ್ನಡ(ಮಂಗಳೂರು) ಲೋಕಸಭಾ ಕ್ಷೇತ್ರದಿಂದ ಮೈಸೂರು ಕ್ಷೇತ್ರಕ್ಕೆ ಸೇರಿರುವ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ.

ಈ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್‌ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ ಸಚಿವ ಸಾ.ರಾ.ಮಹೇಶ್‌ ಅವರು ಪ್ರತಿನಿಧಿಸುವ ಕೆ.ಆರ್‌.ನಗರ, ಅಶ್ವಿ‌ನ್‌ ಕುಮಾರ್‌ ಅವರ ತಿ.ನರಸೀಪುರ, ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿರುವ ವರುಣಾ ಮತ್ತು ಎಚ್‌.ಡಿ.ಕೋಟೆ, ಬಿಜೆಪಿ ಶಾಸಕರಿರುವ ನಂಜನಗೂಡು ಕ್ಷೇತ್ರಗಳು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿಯ ನಾಲ್ವರು ಶಾಸಕರು, ಜೆಡಿಎಸ್‌ನ ಮೂವರು ಶಾಸಕರಿದ್ದರೆ, ಕಾಂಗ್ರೆಸ್‌ನ ಒಬ್ಬರೇ ಶಾಸಕರಿದ್ದಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next