ಬಂಗಾರಪೇಟೆ: ಪುರಸಭೆ ಚುನಾವಣೆಯಲ್ಲಿ 27ರಲ್ಲಿ ಕಾಂಗ್ರೆಸ್ 20 ಸ್ಥಾನಗಳಿಸುವುದರ ಮೂಲಕ ತನ್ನ ಭದ್ರಕೋಟೆ ಉಳಿಸಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ಹೀನಾಯವಾಗಿ ಸೋಲುಂಡು ತೀವ್ರ ಮುಖಭಂಗಕ್ಕೆ ಒಳಗಾಗಿವೆ. 30 ವರ್ಷಗಳಿಂದಲೂ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆಯುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ ಎಷ್ಟೇ ಪ್ರಯತ್ನ ಮಾಡಿದರೂ ಕಾಂಗ್ರೆಸ್ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲೇ ಇಲ್ಲ.
ಅಭ್ಯರ್ಥಿ ಹಾಗೂ ನಾಯಕತ್ವದ ಕೊರತೆಯಿಂದ 27 ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸ್ಪರ್ಧಿಸಿರಲಿಲ್ಲ. 8 ಕ್ಷೇತ್ರಗಳಲ್ಲಿ ಬಿಜೆಪಿ, 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷಕ್ಕೆ ಪೈಪೋಟಿ ನೀಡಿದ್ದರು. ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹಾಗೂ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಕೆ.ರಾಕೇಶ್‌ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿದಂತೆ ಶಂಶುದ್ದೀನ್ ಬಾಬು (524), ಅರುಣಾಚಲಂ ಮಣಿ (247), ಪುರಸಭೆ ಮಾಜಿ ಅಧ್ಯಕ್ಷ ಸಿ.ರಮೇಶ್ ಪತ್ನಿ ಡಿ.ಪೊನ್ನಿ (325), ಮಾಜಿ ಸದಸ್ಯ ಸುಹೇಲ್ ಪತ್ನಿ (436), ಮಾಜಿ ಆಧ್ಯಕ್ಷೆ ಗಂಗಮ್ಮ (281), ಎಸ್.ಶಾರದಾ (435), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಪುತ್ರ ಎಸ್.ಪ್ರಶಾಂತ್(256) ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚು ಲೀಡ್ ಪಡೆದಿದ್ದು, 2ನೇ ವಾರ್ಡ್‌ನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಟಿಪ್ಪು ಸೇನೆ ಅಧ್ಯಕ್ಷ ಅಜಂ ಷರೀಫ್ ಪತ್ನಿ ಶಭಾನ ತಾಜ್ (328) ಕಡಿಮೆ ಅಂತರದಿಂದ ಜಯಶೀಲರಾಗಿದ್ದಾರೆ.
ದೇಶಿಹಳ್ಳಿ-1 ವಾರ್ಡ್‌ನಿಂದ ಬಿಜೆಪಿಯ ವಿ.ಸೌಂದರ್ಯ 3, ದೇಶಿಹಳ್ಳಿ- ವಾರ್ಡ್‌ನಿಂದ ಕಾಂಗ್ರೆಸ್‌ನ ಅರೋಕ್ಯ ರಾಜನ್ 14, 17ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಎ.ವಿ.ಪ್ರಭಾಕರ್ 13 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸೋತ ಪ್ರಮುಖರು: ಪುರಸಭೆ ಹಾಲಿ ಅಧ್ಯಕ್ಷ ಎಂ.ಗುಣಶೀಲನ್ ಕೆರೆಕೋಡಿ ವಾರ್ಡ್‌ನಿಂದ, ಮಾಜಿ ಅಧ್ಯಕ್ಷ ಎನ್.ಗಂಗಮ್ಮ ಗಂಗಮ್ಮನಪಾಳ್ಯ ಕ್ಷೇತ್ರದಿಂದ, 4ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಶಂಶುದ್ದೀನ್ ಬಾಬು ಅವರ ಬಾಮೈದ ಸಿ.ಕೆ.ರಫೀಕ್, ದೇಶಿಹಳ್ಳಿ-2 ವಾರ್ಡ್‌ನಿಂದ ಸ್ಪರ್ಧಿಸಿದ್ದ ಬಿಜೆಪಿ ಎಂಸಿಜೆ ವೇಲುಮುರುಗನ್, 21ನೇ ವಾರ್ಡ್‌ನಿಂದ ಜೆಡಿಎಸ್‌ನ ವೈ.ವಿ.ರಮೇಶ್ ಸೋತವರಲ್ಲಿ ಪ್ರಮುಖರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪರವಾಗಿ ನೂತನ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಅಬ್ಬರದ ಪ್ರಚಾರ ಮಾಡಿದರೂ ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಸ್ಥಾನ ಗಳಿಸುವಲ್ಲಿ ವಿಫಲರಾಗಿದ್ದಾರೆ. ದೇಶಿಹಳ್ಳಿ-1ರಲ್ಲಿ ವಿ.ಸೌಂದರ್ಯ ಕಾಂಗ್ರೆಸ್ ಅಭ್ಯರ್ಥಿ ರಾಧಾಬಾಯಿ ವಿರುದ್ಧ ಕೇವಲ 3 ಮತಗಳಲ್ಲಿ ಜಯಸಾಧಿಸಿರುವುದು ಬಿಟ್ಟರೆ ಉಳಿದಂತೆ ಯಾರೂ ಗೆಲುವು ಸಾಧಿಸಿಲ್ಲ.
ಇನ್ನೂ ಜೆಡಿಎಸ್ ಎರಡು ಸ್ಥಾನ ಪಡೆದುಕೊಂಡಿದ್ದು, ಗಂಗಮ್ಮನಪಾಳ್ಯದಿಂದ ಕಾಂಗ್ರೆಸ್ ಅಭ್ಯರ್ಥಿ ಎನ್.ಭಾಗ್ಯಮ್ಮ ವಿರುದ್ಧವಾಗಿ ವೆನ್ನಿಲಾ 189 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪುರಸಭೆ ಪ್ರತಿಷ್ಠಿತ ಗಾಂಧಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಂ.ವಿ.ವೆಂಕಟಾಚಲಪತಿ ವಿರುದ್ಧವಾಗಿ ಕಾಂಗ್ರೆಸ್ ಟಿಕೆಟ್ ಸಿಗದೇ ಬೇಸತ್ತು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವೈ.ಸುನಿಲ್ಕುಮಾರ್ 112 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
● ಎಂ.ಸಿ.ಮಂಜುನಾಥ್