Advertisement

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕಳೆದ ಬಾರಿಗಿಂತ ಹೆಚ್ಚು ಸ್ಥಾನ  

05:05 PM Dec 27, 2017 | Team Udayavani |

ಮೈಸೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುವುದಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಕಾರ್ಯಕರ್ತರಿಗೆ ತರಬೇತಿ ಶಿಬಿರದ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರಿಗೆ ಆಗಮಿಸಿದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಇಬ್ಬರೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 3-4 ತಿಂಗಳಿದೆ.

ರಾಜ್ಯದ 224 ಕ್ಷೇತ್ರಗಳಿಗೂ ಪ್ರವಾಸ ಮಾಡಲು ಕನಿಷ್ಠ 3 ತಿಂಗಳು ಬೇಕು. ಅದಕ್ಕಾಗಿಯೇ 2 ಹಂತದ ಪ್ರವಾಸ ಯೋಜನೆ ರೂಪಿಸಿ ಸಿಎಂ ಸಿದ್ದರಾಮಯ್ಯ ಒಂದು ಕಡೆಗೆ, ಪರಮೇಶ್ವರ್‌ ಒಂದು ಕಡೆಗೆ ಹೋಗುತ್ತಿದಾರೆ. ಇದನ್ನು ಸಹಿಸದ ವಿರೋಧಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ ಎಂದರು. 

ಬಿಜೆಪಿ ರಾಜಕೀಯ: ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ವಿವಾದ ಬಗೆಹರಿಸುವ ಇಚ್ಛಾಶಕ್ತಿ ಇದ್ದಿದ್ದರೆ ಗೋವಾ ಸಿಎಂ, ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಾಗಲೇ ಅವರ ರಾಜಕೀಯ ಉದ್ದೇಶ ಅರ್ಥವಾಗುತ್ತೆ ಎಂದು ಹೇಳಿದರು.

ರಾಜಭವನದಲ್ಲೇನು ಕೆಲಸ: ಬಿಜೆಪಿ ನಾಯಕರು ಹಿಂದಿನಿಂದಲೂ ರಾಜಕೀಯ ಶಕ್ತಿಕೇಂದ್ರ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಪ್ರಕಾಶ್‌ ಜಾಬ್ಡೇಕರ್‌ಗೆ ರಾಜಭವನದಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದರು.

Advertisement

ಆಯೋಗಕ್ಕೆ ಪತ್ರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತಯಂತ್ರಕ್ಕೆ ಬದಲು ಮತಪತ್ರ ಬಳಸುವಂತೆ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸುವುದಾಗಿ ಪರಮೇಶ್ವರ್‌ ತಿಳಿಸಿದರು.   

ಈ ಚುನಾವಣೆ ಬಿಜೆಪಿ ಸರ್ವನಾಶಕ್ಕೆ ನಾಂದಿ: ಪರಮೇಶ್ವರ್‌
ಮೈಸೂರು:
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಫ‌ಲಿತಾಂಶ ಬಿಜೆಪಿಯ ಸರ್ವನಾಶಕ್ಕೆ ನಾಂದಿ ಹಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹೇಳಿದರು. ನಗರದ ಎನ್‌.ಆರ್‌.ಮೊಹಲ್ಲಾದ ಶಬನಂ ಕನ್ವೆನನ್‌ ಸೆಂಟರ್‌ನಲ್ಲಿ ನಡೆದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬೂತ್‌ ಸಮಿತಿ ಅಧ್ಯಕ್ಷರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

 ಅಂಬೇಡ್ಕರ್‌ ಬರೆದ ಸಂವಿಧಾನದ ಮೂಲಕವೇ ಸಂಸದ, ಕೇಂದ್ರ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿರುವ ಅನಂತಕುಮಾರ್‌ ಹೆಗಡೆ, ಇಂದು ಅದೇ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಇಂತಹ ಪಕ್ಷಗಳನ್ನು ಬೆಳೆಯಲು ಬಿಡದೆ ಬಗ್ಗು ಬಡಿಯಲು ಕಾಂಗ್ರೆಸ್‌ ಕಾರ್ಯಕರ್ತರು ದುಡಿಯಬೇಕೆಂದರು.  ಪಕ್ಷ ಸಂಘಟಿಸಲು ರಾಜ್ಯದ ಎಲ್ಲಾ 54 ಸಾವಿರ ಬೂತ್‌ಗಳಲ್ಲೂ ಸಮಿತಿ ರಚಿಸಿ ತರಬೇತಿ ನೀಡಲಾಗುತ್ತಿದೆ.

ಬೂತ್‌ ಸಮಿತಿ ಅಧ್ಯಕ್ಷರು, ಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಮತದಾರರ ಮನೆ ಮನೆಗೆ ತೆರಳಿ ಕಾಂಗ್ರೆಸ್‌ ತತ್ವ-ಸಿದ್ಧಾಂತ ತಿಳಿಸಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವಂತೆ ಮತದಾರರ ಮನವೊಲಿಸಿ ಎಂದರು. ಸಚಿವ ತನ್ವೀರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ವಿಷ್ಣುನಾಥ್‌, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌,

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ ಮತ್ತಿತರರಿದ್ದರು.  ಚಾಮರಾಜ ಕ್ಷೇತ್ರದ ಬೂತ್‌ ಸಮಿತಿ ಪದಾಧಿಕಾರಿಗಳ ಸಭೆ ನಗರ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದರೆ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬೂತ್‌ ಸಮಿತಿ ಪದಾಧಿಕಾರಿಗಳ ಸಭೆ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ನಡೆಯಿತು. 

ಈ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡುತ್ತೇವೆ. ಆದರೆ, ಎಷ್ಟು ಮಂದಿಗೆ ಟಿಕೆಟ್‌ ನೀಡುತ್ತೇವೆ ಎಂಬುದನ್ನು ಈಗಲೇ ಹೇಳಲಾಗಲ್ಲ. ಇನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವಂತೆ ಯಾರು ಎಲ್ಲಿ ಪ್ರವಾಸ ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯ. ಹಾಗೆಯೇ ದಲಿತ ಮುಖ್ಯಮಂತ್ರಿ ವಿಚಾರ ಚುನಾವಣೆ ನಂತರ ನೋಡೋಣ.
-ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next