Advertisement

ಕಾಂಗ್ರೆಸ್‌ “ಮಹಾಘಟ್‌ಬಂಧನ್‌’ಅಸ್ತ್ರ ಕ್ಲಿಕ್ಕಾಗುತ್ತಾ?

02:41 PM Oct 22, 2018 | |

ರಾಜ್ಯ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವಾಶ್ರಮದ ಗೆಳೆಯರಾದರೂ ಪ್ರಸ್ತುತ ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಒಂದೇ ವೇದಿಕೆ ಬಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಅದರಲ್ಲೂ ಪ್ರಧಾನಿ ನರೇಂದ್ರಮೋದಿ ಅವರನ್ನು ಕಟ್ಟಿಹಾಕಲು “ಮಹಾಘಟ್‌ಬಂಧನ್‌’ ಪ್ರಯೋಗದ ತಯಾರಿಯಲ್ಲಿರುವ ಕಾಂಗ್ರೆಸ್‌ನ ಅಸ್ತ್ರದ ಭಾಗವಾಗಿ ರಾಜಕೀಯವಾಗಿ ಪರಸ್ಪರ ವಿರೋಧಿಗಳಾಗಿ ನಾನಾ-ನೀನಾ ಎಂದು ಹಿಂದಿನ ಚುನಾವಣಾ “ಅಖಾಡ’ದಲ್ಲಿ ಮೀಸೆ ತಿರುವಿದ್ದ ಕಾಂಗ್ರೆಸ್‌-ಜೆಡಿಎಸ್‌ ಒಂದಾಗಿದೆ.

Advertisement

ಕಳೆದ ವಿಧಾನಸಭೆ ಚುನಾವಣೆಯ ಅತಂತ್ರ ಫ‌ಲಿತಾಂಶ ಇದಕ್ಕೆ ಕಾರಣ. ಇದು ದೇವೇಗೌಡ ಹಾಗೂ ಸಿದ್ದರಾಮಯ್ಯ ಮತ್ತೆ ಒಂದಾಗಿಸುವ ಸನ್ನಿವೇಶವನ್ನೂ ಸೃಷ್ಟಿಸಿದೆ. ಸಮ್ಮಿಶ್ರ ಸರ್ಕಾರ ರಚನೆಯಾದಾಗಲೇ ಎಷ್ಟು ದಿನ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ಉದ್ಭವಿಸಿ ಆ ಪ್ರಶ್ನೆಗೆ ಉತ್ತರ ಎಂಬಂತಹ ಘಟನಾವಳಿ, ವಿದ್ಯಮಾನಗಳಿಗೂ ಕರ್ನಾಟಕ ಸಾಕ್ಷಿಯಾಗಿದೆ. ಆದರೆ, ಸಮ್ಮಿಶ್ರ ಸರ್ಕಾರ ಗಟ್ಟಿಗೊಳಿಸುವ ಜತೆಗೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಎದುರಿಸುವ ಕಾರ್ಯಾಚರಣೆ ಭಾಗವಾಗಿ ಇದೀಗ ಮುಂದಿನ ಲೋಕಸಭೆ ಚುನಾವಣೆಗೂ ಸಮರದ ವೇದಿಕೆ ಸಜ್ಜಾಗಿದೆ.

ಆ ಸಮರದ ಸೆಮಿಫೈನಲ್‌ ಎಂಬಂತೆ ಕರ್ನಾಟಕದಲ್ಲಿ ಐದು ಕ್ಷೇತ್ರಗಳ ಉಪ ಚುನಾವಣೆ ಎದುರಾಗಿದೆ. ಮುಂದಿನ ವರ್ಷದ ಲೋಕಸಭೆ ಚುನಾವಣೆ ಫೈನಲ್‌ಗೆ ಉಪ ಚುನಾವಣೆ ಸೆಮಿಫೈನಲ್‌ನಲ್ಲಿ ಗೆದ್ದು ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿದರೆ ಬಿಜೆಪಿ ಮಣಿಸಲು ಸಾಧ್ಯ ಎಂಬ ಸಂದೇಶ ಸಾರಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮುಂದಾಗಿದ್ದಾರೆ. ಅದಕ್ಕೆ ದೇವೇಗೌಡರ ಒಂದು ಕಾಲದ ಗೆಳೆಯರೂ ಆದ ಪ್ರಸ್ತುತ ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ ಅವರೂ ಜತೆಗೂಡಿದ್ದಾರೆ. ಇಬ್ಬರದೂ ಒಂದೇ ಮಂತ್ರ “ಕೋಮುವಾದಿ ಬಿಜೆಪಿ ಮಣಿಸುವುದು, ದೇಶವನ್ನು ಮೋದಿಯಿಂದ ರಕ್ಷಿಸುವುದು’.

ರಾಜಕೀಯವಾಗಿಯೂ ದೇವೇಗೌಡ, ಸಿದ್ದರಾಮಯ್ಯ ಇಬ್ಬರೂ ಒಂದಾಗುವುದು ಒಂದು ಮಹತ್ವದ ಸಂಗತಿಯೇ.  ಏಕೆಂದರೆ ಇಬ್ಬರೂ ಎರಡು ಪ್ರಬಲ ಸಮುದಾಯ ಪ್ರತಿನಿಧಿಸುವ ಮುಖಂಡರು. ಜತೆಗೆ ಪರಿಪಕ್ವ ತಂತ್ರಗಾರಿಕೆ ಹೆಸರಾದ ರಾಜಕಾರಣಿಗಳು. ಈ ಇಬ್ಬರು ಒಂದಾದರೆ ರಾಜಕೀಯವಾಗಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬ ಸೂಕ್ಷ್ಮ ಹಾಗೂ ಒಳ ಏಟಿನ ಮರ್ಮ ಬಿಜೆಪಿ ಅದರಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲದೇನೂ ಅಲ್ಲ. ಅದೇ ಕಾರಣಕ್ಕೆ ಅವರು ಪುತ್ರ ರಾಘವೇಂದ್ರ ಸ್ಪರ್ಧೆ ಮಾಡಿರುವ ಶಿವಮೊಗ್ಗ ಕ್ಷೇತ್ರ ಬಿಟ್ಟು ಕದಲುತ್ತಿಲ್ಲ.

ಅನಿವಾರ್ಯತೆ: ದೇವೇಗೌಡರು ಹಾಗೂ ಸಿದ್ದರಾಮಯ್ಯ ಬೇರೆ ಬೇರೆ ಪಕ್ಷಗಳಲ್ಲಿದ್ದು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದರಿಂದ  ನಾನಾ ರೀತಿಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಜೆಡಿಎಸ್‌ ಸೇರಿ ಸಮಾನ ಮನಸ್ಕ ಪಕ್ಷಗಳ ಜತೆಗೂಡಿ ಲೋಕಸಭೆ ಚುನಾವಣೆಯಲ್ಲಿ ಹೋರಾಟ ಮಾಡಲು ತೀರ್ಮಾನಿಸಿದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಮಾತೇ ಶಾಸನ ಆದ್ದರಿಂದ ಎಲ್ಲರೂ ಅದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಅವರೂ ಆನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. 

Advertisement

ಆದರೆ, ರಾಜಕೀಯ ವಲಯಗಳಲ್ಲಿ ಗುರು -ಶಿಷ್ಯರ ಸಮಾಗಮ, ಜನತಾಪರಿವಾರ ನಾಯಕರ ಸಮ್ಮಿಲನ, ಮತ್ತೆ ಒಂದಾದ ದಳಪತಿಗಳು ಎಂಬರ್ಥದ ಮಾತುಗಳು ಕೇಳಿಬರುತ್ತಿವೆ.  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂದೊಂದು ದಿನ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಬೇಸರವಾದರೆ ಜೆಡಿಎಸ್‌ಗೆ ಬರಬಹುದು. ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲವಲ್ಲ ಎಂಬ ಊಹಾಪೋಹಗಳು ಎದ್ದಿವೆ. ಆದರೆ, ಉಪ ಚುನಾವಣೆ, ಆ ನಂತರ ಲೋಕಸಭೆ ಚುನಾವಣೆ ಮುಗಿದ ಮೇಲೆ ನಡೆಯಬಹುದಾದ  ವಿದ್ಯಮಾನಗಳಿಂದ ಇದಕ್ಕೆಲ್ಲಾ ಉತ್ತರ ಸಿಗಬಹುದು.

ಸದ್ಯದ ಮಟ್ಟಿಗೆ  ರಾಜ್ಯ ರಾಜಕೀಯದಲ್ಲಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ಒಂದಾದರೆ ನಿಜಕ್ಕೂ ದೊಡ್ಡ ಶಕ್ತಿಯೇ. ದೇವೇಗೌಡ-ಸಿದ್ದರಾಮಯ್ಯ ಅವರ ವಿಚಾರಕ್ಕೆ ಬಂದರೆ ಹನ್ನೆರಡು-ಹದಿಮೂರು ವರ್ಷಗಳ ಹಿಂದೆ ಇಬ್ಬರೂ ಒಂದೇ ಪಕ್ಷದಲ್ಲಿದ್ದವರು. ಸುಮಾರು ಎರಡು ದಶಕ ಒಟ್ಟಿಗೆ ಜನತಾಪರಿವಾರದಲ್ಲಿ ರಾಜಕಾರಣ ಮಾಡಿದವರು. ರಾಮಕೃಷ್ಣಹೆಗಡೆ, ದೇವೇಗೌಡ, ಬಸವರಾಜ ಬೊಮ್ಮಾಯಿ, ಜೆ.ಎಚ್‌.ಪಟೇಲ್‌ ಜತೆ ಜನತಾಪಕ್ಷ, ಜನತಾದಳ ಕಟ್ಟಿದವರು. ನಂತರ ಜೆಡಿಎಸ್‌ನ ರಾಜ್ಯಾಧ್ಯಕ್ಷರೂ ಆಗಿದ್ದವರು.

2004 ರ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ.ದೇವೇಗೌಡರ ಜತೆಗೂಡಿ ರಾಜ್ಯಾದ್ಯಂತ ಪ್ರಚಾರ ಮಾಡಿದ್ದರು.  ಆ ಚುನಾವಣೆಯಲ್ಲಿ ಬಿಜೆಪಿ 79 , ಕಾಂಗ್ರೆಸ್‌ 65 ಹಾಗೂ ಜೆಡಿಎಸ್‌ 58 ಸ್ಥಾನ ಗಳಿಸಿತ್ತು. ಕಾಂಗ್ರೆಸ್‌-ಜೆಡಿಎಸ್ ದು ಸಿದ್ದರಾಮಯ್ಯ ಮುನಿಸಿಕೊಂಡಿದ್ದರು. ಅಲ್ಲಿಂದ ದೇವೇಗೌಡರು ಹಾಗೂ ಸಿದ್ದರಾಮಯ್ಯನವರ ನಡುವೆ ಉಂಟಾದ ಅಸಮಾಧಾನ ಸಿದ್ದರಾಮಯ್ಯ ಜೆಡಿಎಸ್‌ನಿಂದ ನಿರ್ಗಮಿಸುವ ವಾತಾವರಣಕ್ಕೂ ಕಾರಣವಾಯಿತು. 2005 ಸೆಪ್ಟೆಂಬರ್‌ 22 ರಂದು ಸಿದ್ದರಾಮಯ್ಯ, ಜೆಡಿಎಸ್‌ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರನ್ನು ಜೆಡಿಎಸ್‌ನಿಂದ ಆಮಾನತು ಸಹ ಮಾಡಲಾಯಿತು.

ಜನತಾಪಕ್ಷ, ಸಜಪ, ಜನತಾದಳ ನಂತರ ಜೆಡಿಯು-ಜೆಡಿಎಸ್‌ ಆಗಿ ವಿಭಜನೆಯಾದ ನಂತರ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿದ್ದ ಸಿದ್ದರಾಮಯ್ಯ ಅವರು ರಾಜಕೀಯ ಅನಿವಾರ್ಯತೆ ಹಾಗೂ ಮುಖ್ಯಮಂತ್ರಿ ಮಾಡಲಿಲ್ಲ ಎಂಬ ಕೋಪಕ್ಕೆ ಜೆಡಿಎಸ್‌ನಿಂದ ನಿರ್ಗಮಿಸಿದ್ದರು. ಅಹಿಂದ ಸಂಘಟನೆ ನಂತರ ಎಬಿಪಿಜೆಡಿ ಪಕ್ಷ ಸಂಘಟನೆ ಮಾಡಿ ಅಂತಿಮವಾಗಿ ಕಾಂಗ್ರೆಸ್‌ ಸೇರಿದರ‌ು. ಆ ನಂತರವೂ ರಾಜಕೀಯ ಸಂದರ್ಭ ಎದುರಾದಾಗ ದೇವೇಗೌಡರು ಮನಸ್ಸು ಮಾಡಿದ್ದರೆ ನನ್ನನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಆದರೆ, ಮಾಡಲಿಲ್ಲ. ಅವರಿಗೆ ಪುತ್ರ ವ್ಯಾಮೋಹ ಎಂದು ಟೀಕಿಸಿದ್ದರು. ಒಮ್ಮೆ ವಿಧಾನಸಭೆಯಲ್ಲೂ ಇದೇ ವಿಚಾರ ಪ್ರಸ್ತಾಪವಾಗಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಮಾತಿನ “ಯುದ್ಧ’ವೇ ನಡೆದು ಹೋಗಿತ್ತು. 

ಸಿದ್ದರಾಮಯ್ಯ ಅವರು ಜೆಡಿಎಸ್‌ ಬಿಟ್ಟ ನಂತರ ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರ ನಡುವಿನ ಸಂಬಂಧ ಅಷ್ಟಕ್ಕಷ್ಟೇ. ಅದರಲ್ಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಡುವೆ ರಾಜಕೀಯವಾಗಿಯೂ ಸಾಕಷ್ಟು ಸಮರವೂ ನಡೆದಿತ್ತು.
ಕಾವೇರಿ ವಿಚಾರದಲ್ಲಿ ª ಸಿದ್ದರಾಮಯ್ಯ ದೇವೇಗೌಡರ ನಿವಾಸಕ್ಕೆ ಹೋಗಿದ್ದು, ಸಿದ್ದರಾಮಯ್ಯ ಅವರ ಹಿರಿಯ ಪುತ್ರ ನಿಧನ ಸಂದರ್ಭದಲ್ಲಿ ದೇವೇಗೌಡರು ಸಿದ್ದರಾಮಯ್ಯ ನಿವಾಸಕ್ಕೆ ಹೋಗಿದ್ದು ಬಿಟ್ಟರೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ.

ಆದರೆ, ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡುವಿನ ವೈಮನಸ್ಯ ತೀವ್ರಗೊಂಡಿತು. ಸಿದ್ದರಾಮಯ್ಯ ಹಾಗೂ ದೇವೇಗೌಡ ಇಬ್ಬರೂ ಪರಸ್ಪರ ಟೀಕಾ ಪ್ರಹಾರವನ್ನೂ ನಡೆಸಿದ್ದರು. ಜತೆಗೆ ಕುಮಾರಸ್ವಾಮಿಯವರೂ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದರು. ಅಲ್ಲಿಂದಾಚೆಗೆ ದೇವೇಗೌಡ-ರಾಮಕೃಷ್ಣ  ಹೆಗಡೆ ನಡುವಿನ ವೈಮನಸ್ಯ ರೀತಿಯಲ್ಲೇ ದೇವೇಗೌಡ-ಸಿದ್ದರಾಮಯ್ಯ ಮೈಮನಸ್ಯ ಎಂದೇ ಬಿಂಬಿತವಾಗಿತ್ತು. ಹೀಗಾಗಿ, ರಾಜಕೀಯವಾಗಿ ಇಬ್ಬರೂ ತದ್ವಿರುದ್ಧ ದಿಕ್ಕಿನಲ್ಲಿದ್ದರು.

ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿದ್ದು ಜೆಡಿಎಸ್‌ ಜತೆ ಮೈತ್ರಿ ಸಾಧ್ಯವಾ? ದೇವೇಗೌಡರು-ಸಿದ್ದರಾಮಯ್ಯ- ಕುಮಾರಸ್ವಾಮಿ- ಡಿ.ಕೆ.ಶಿವಕುಮಾರ್‌ ಒಂದಾಗಲು ಸಾಧ್ಯವಾ? ಎಂಬ ಪ್ರಶ್ನೆಗಳಿಗೆ ಸದ್ಯಕ್ಕಂತೂ ಉತ್ತರ ಸಿಕ್ಕಿದೆ. ಇಬ್ಬರೂ ನಾಯಕರು ಸಾಕಷ್ಟು ರಾಜಕೀಯ ಏರಿಳಿತಗಳನ್ನೂ ಕಂಡು “ಸೀಜನ್‌’ ಪೊಲಿಟಿಷಿಯನ್ಸ್‌ ಸಾಲಿಗೆ ಸೇರಿದ್ದಾರೆ.  ಮುಂದಿನದು ಕಾದು ನೋಡಬೇಕಾಗಿದೆ.

ಒಂದು ಕಾಲದಲ್ಲಿ ರಾಮಕೃಷ್ಣ ಹೆಗಡೆ, ದೇವೇಗೌಡ, ಬೊಮ್ಮಾಯಿ, ಪಟೇಲ್‌, ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್‌, ಸಿಂಧ್ಯ, ಸೋಮಶೇಖರ್‌, ಜೀವರಾಜ್‌ ಆಳ್ವಾ, ರಘುಪತಿ, ದೇಶಪಾಂಡೆ, ರಮೇಶ್‌ ಜಿಗಜಿಣಗಿ , ಬಸವರಾಜ ರಾಯರೆಡ್ಡಿ, ನಾಣಯ್ಯ, ಜಾಲಪ್ಪ, ಬೈರೇಗೌಡ, ನಾಗೇಗೌಡ, ಬಚ್ಚೇಗೌಡ, ರೋಷನ್‌ಬೇಗ್‌, ರಮೇಶ್‌ಕುಮಾರ್‌, ಕೃಷ್ಣಾರೆಡ್ಡಿ, ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ವೈ.ಎಸ್‌.ವಿ.ದತಾ, ಬಿ.ಎಲ್‌.ಶಂಕರ್‌, ವಿ.ಎಸ್‌.ಉಗ್ರಪ್ಪ, ವಿ.ಆರ್‌.ಸುದರ್ಶನ್‌, ಎಸ್‌.ಕೆ.ಕಾಂತಾ, ವೈಜ್ಯನಾಥ ಪಾಟೀಲ್‌, ಎಚ್‌.ವೈ.ಮೇಟಿ, ಡಿ.ಟಿ. ಜಯಕುಮಾರ್‌,  ಉಮೇಶ್‌ಕತ್ತಿ, ಅಜಯ್‌ಕುಮಾರ್‌ ಸರ್‌ ನಾಯಕ್‌, ಎಸ್‌.ಎಸ್‌.ಪಾಟೀಲ್‌, ಎ.ಬಿ.ಪಾಟೀಲ್‌, ನಿಂಗಯ್ಯ  ಈ ಎಲ್ಲ ನಾಯಕರು ಜನತಾದಳದಲ್ಲಿದ್ದವರೇ. ಜನತಾದಳ ನಿಜಕ್ಕೂ ರಾಜ್ಯ ರಾಜಕಾರಣದ ನಾಯಕರನ್ನು ತಯಾರು ಮಾಡುವ “ಕಾರ್ಖಾನೆ’ಯೇ ಆಗಿತ್ತು.

ಗೆಳೆತನವಿತ್ತು: ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿ ಮುಖ್ಯಮಂತ್ರಿಯಾದ ನಂತರವೂ ಪ್ರಾರಂಭದಲ್ಲಿ ದೇವೇಗೌಡರ ಜತೆ ತೀರಾ ದ್ವೇಷ ಇರಲಿಲ್ಲ. ಹಾಗೆ ಇದ್ದಿದ್ದರೆ ಬಿಬಿಎಂಪಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಆಡಳಿತ ನಡೆಸುತ್ತಲೇ ಇರಲಿಲ್ಲ. ಏಕೆಂದರೆ ಬಿಬಿಎಂಪಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದು ದೇವೇಗೌಡರದೇ ನಿರ್ಧಾರ. ಸಿದ್ದರಾಮಯ್ಯ ಅವರೇ ದೂರವಾಣಿ ಕರೆ ಮಾಡಿ ಮೈತ್ರಿ ಬಗ್ಗೆ ಪ್ರಸ್ತಾಪಿಸಿದಾಗ ಹಳೇ ಗೆಳೆತನಕ್ಕೆ “ಫಿದಾ’ ಆಗಿದ್ದ ದೇವೇಗೌಡರು ಕುಮಾರಸ್ವಾಮಿ ವಿರೋಧವನ್ನೂ ಲೆಕ್ಕಿಸದೆ  ತಕ್ಷಣ ಒಪ್ಪಿಗೆ ನೀಡಿದ್ದರು.

ಅದಾದ ನಂತರವೂ ಎರಡು ವರ್ಷ ಮೈತ್ರಿ ಕಡಿದುಕೊಳ್ಳುವ ಪ್ರಯತ್ನ ನಡೆದಾಗಲೂ ದೇವೇಗೌಡರು ತಡೆದಿದ್ದರು. ಕುಮಾರಸ್ವಾಮಿಯವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ “ಇಬ್ಬರ ದೇಹ ಬೇರೆಯಾಗಿದ್ದರೂ ಮನಸ್ಸುಗಳು ಒಂದೇ ಆಗಿದ್ದವು’ ಎಂದು ಮಾರ್ಮಿಕವಾಗಿ ಹೇಳಿದ್ದು ಇದಕ್ಕೆ ಸಾಕ್ಷಿ. ಒಟ್ಟಾರೆ, ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬುದು ಸರ್ವಕಾಲಿಕ ಸತ್ಯ.

ಜತೆಗಿದ್ದವರು ಸಿದ್ದು: ಸಿದ್ದರಾಮಯ್ಯ ಒಂದು ಕಾಲದಲ್ಲಿ ದೇವೇಗೌಡರ ಜತೆ ಗಟ್ಟಿಯಾಗಿ ನಿಂತರವೇ. 1999 ರಲ್ಲಿ  ಸಂಯುಕ್ತ ಜನತಾದಳ, ಜಾತ್ಯತೀತ ಜನತಾದಳ ಎಂದು ವಿಭಜನೆಯಾದಾಗ ಜೆ.ಎಚ್‌.ಪಟೇಲ್‌ಅವರ ಜತೆ ಬೈರೇಗೌಡ, ಬಚ್ಚೇಗೌಡ, ನಾಗೇಗೌಡ, ಸಿಂಧ್ಯ, ಸೋಮಶೇಖರ್‌, ಎಂ.ಪಿ.ಪ್ರಕಾಶ್‌, ಬಸವರಾಜ ಹೊರಟ್ಟಿ ಸೇರಿ ಪ್ರಮುಖ ನಾಯಕರು ಜೆಡಿಯು ಜತೆ ಗುರುತಿಸಿಕೊಂಡಾಗ ದೇವೇಗೌಡರ ಜತೆ ಗಟ್ಟಿಯಾಗಿ ನಿಂತವರು ಸಿದ್ದರಾಮಯ್ಯ. 2004 ರವರೆಗೂ ಪಕ್ಷ ಸಂಘಟನೆಯಲ್ಲಿ ದೇವೇಗೌಡರಿಗೆ ಸಾಥ್‌ ಕೊಟ್ಟವರು. 

* ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next