Advertisement

ಕಾಂಗ್ರೆಸಲ್ಲಿ ಬಂಡಾಯದ ಬಿಸಿ

05:33 PM Apr 16, 2018 | |

ಚಿಕ್ಕಮಗಳೂರು: ಟಿಕೆಟ್‌ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ ಪಕ್ಷದಲ್ಲಿ ಬಂಡಾಯ ಹೆಚ್ಚಿದೆ. ಟಿಕೆಟ್‌ ಕೈತಪ್ಪುವ ಹಿನ್ನೆಲೆಯಲ್ಲಿ
ಜಿಲ್ಲೆಯ ತರೀಕೆರೆ ಹಾಗೂ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ಆರಂಭವಾಗಿದೆ.

Advertisement

ತರೀಕೆರೆಯಿಂದ ಹಾಲಿ ಶಾಸಕ ಶ್ರೀನಿವಾಸ್‌ ಹಾಗೂ ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನ ಪರಿಷತ್‌ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್‌ ದೊರೆತಿಲ್ಲ ಎಂಬ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಎರಡೂ ಕಡೆ ಪ್ರತಿಭಟನೆ ಆರಂಭವಾಗಿದೆ.

ತರೀಕೆರೆ ಶಾಸಕ ಶ್ರೀನಿವಾಸ್‌ ಅವರಿಗೆ ಟಿಕೆಟ್‌ ಕೈತಪ್ಪುವ ಬಗ್ಗೆ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ಭಾನುವಾರ
ಅವರ ಮನೆಯ ಮುಂದೆ ಜಮಾಯಿಸಿದ ಅಪಾರ ಬೆಂಬಲಿಗರು ಶ್ರೀನಿವಾಸ್‌ ರವರ ಪತ್ನಿಯೊಂದಿಗೆ ಮಾತುಕತೆ ನಡೆಸಿದ್ದಾರೆ. 

ಶ್ರೀನಿವಾಸ್‌ ಅವರಿಗೆ ಪಕ್ಷ ಅನ್ಯಾಯ ಮಾಡಿದೆ. ಅವರು ಪಕ್ಷೇತರರಾಗಿ ಕಣಕ್ಕಿಳಿಯಲೇಬೇಕು. ಅವರನ್ನು ಗೆಲ್ಲಿಸುವ
ಜವಾಬ್ದಾರಿ ನಮ್ಮದು ಎಂದು ಒತ್ತಡ ಹೇರಿದ್ದಾರೆ. ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಶ್ರೀನಿವಾಸ್‌ರ ಪತ್ನಿ ವಾಣಿ ಕಾಂಗ್ರೆಸ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನಮಗೆ ಅನ್ಯಾಯವಾಗಿದೆ. ನಮ್ಮ ಯಜಮಾನರು ಸಿದ್ದರಾಮಯ್ಯ ಅವರನ್ನು ದೇವರಂತೆ ಪೂಜಿಸುತ್ತಿದ್ದರು. ಆದರೂ ಅವರು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
 
ಈ ಕುರಿತು ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶ್ರೀನಿವಾಸ್‌, ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪರವಾಗಿಯೇ
ಇದ್ದಾರೆ. ಯಾರಿಂದ ನನಗೆ ಟಿಕೆಟ್‌ ತಪ್ಪಿದೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಯಾರನ್ನೇ ಕೇಳಿದರೂ ಉತ್ತರ ದೊರೆಯುತ್ತಿಲ್ಲ. ನನ್ನ ಪತ್ನಿಗೆ ಈ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾಗಿ ಅವರು ಸಿ.ಎಂ. ವಿರುದ್ಧ ಮಾತನಾಡಿದ್ದಾರೆ ಎಂದರು.

ಇತ್ತ ಚಿಕ್ಕಮಗಳೂರಿನಲ್ಲಿ ಮಾಜಿ ಎಂ.ಎಲ್‌.ಸಿ ಗಾಯತ್ರಿ ಶಾಂತೇಗೌಡ ಬದಲಿಗೆ ಬಿ.ಎಲ್‌. ಶಂಕರ್‌ ಅವರಿಗೆ ಟಿಕೆಟ್‌ ಎಂಬ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗಾಯತ್ರಿ ಶಾಂತೇಗೌಡರ ಬೆಂಬಲಿಗರು ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಗಾಯತ್ರಿ ಶಾಂತೇಗೌಡ ಹಾಗೂ ಸಿ.ಎಂ. ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಪ್ರತಿಭಟನಾಕಾರರು ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿದರು.  ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಪಿ.ಸಿ.ಸಿ ಕಿಸಾನ್‌ ಸೆಲ್‌ ಕಾರ್ಯಾಧ್ಯಕ್ಷ ಸಿ.ಎನ್‌.ಅಕ್ಮಲ್‌ ಗಾಯತ್ರಿ ಶಾಂತೇಗೌಡರು ವಿಧಾನ ಪರಿಷತ್‌ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಟಿಕೆಟ್‌ ನೀಡದೇ ಬೇರೆ ಕಡೆಯಲ್ಲಿ ಚುನಾವಣೆಯಲ್ಲಿ ಸೋತು ನಿರಾಶರಾಗಿ ಇಲ್ಲಿಗೆ ಬಂದಿರುವವರಿಗೆ ಇಲ್ಲಿ ಟಿಕೆಟ್‌ ನೀಡಿರುವುದು ಸರಿಯಲ್ಲ ಎಂದರು. 

Advertisement

ಗಾಯತ್ರಿ ಶಾಂತೇಗೌಡರವರಿಗೆ ಟಿಕೆಟ್‌ ನೀಡದಿದ್ದಲ್ಲಿ ಇಡೀ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಅವರು ಬಂಡಾಯವಾಗಿ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ ಅವರಿಗೆ ಟಿಕೆಟ್‌ ನೀಡದೇ ಇದ್ದಲ್ಲಿ ನಾನಂತೂ ಖಚಿತವಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ಎಚ್‌.ಎಸ್‌. ಪುಟ್ಟಸ್ವಾಮಿ ವಿವಿಧ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್‌ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next