ಬೆಂಗಳೂರು: ಗದಗದಲ್ಲಿ ನಡೆದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಹಾದಾಯಿ ವಿವಾದ ಬಗೆ ಹರಿಸುವುದಾಗಿ ಹೇಳಿಕೆ ನೀಡಿದ ಪ್ರಧಾನಿ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಈ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.
ಸಚಿವ ಎಚ್.ಕೆ.ಪಾಟೀಲ್ ಅವರು ಈ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೆ, ಕೆಪಿಸಿಸಿ ಮಾಧ್ಯಮ ಘಟಕದ ಮುಖ್ಯಸ್ಥ ಪ್ರೊ|ಕೆ.ಇ. ರಾಧಾಕೃಷ್ಣ ನೇತೃತ್ವದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಕ್ಷಮೆ ಕೋರುವಂತೆ ಮೋದಿಗೆ ನೋಟಿಸ್‌ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಕ್ಷಮೆ ಕೋರುವಂತೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಕಾನೂನು ನೋಟಿಸ್ ನೀಡಿದ್ದಾರೆ.
ಅಮಿತ್ ಶಾ ಹಾಗೂ ಯಡಿಯೂರಪ್ಪ ಕೂಡ ಸಿದ್ದರಾಮಯ್ಯ ವಿರುದ್ಧ ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳಲ್ಲಿ ಆಧಾರ ರಹಿತ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದಾರೆ ಎಂದಿರುವ ಅವರು, ಈ ಮೂವರು ನಾಯಕರು ಒಂದು ವಾರದೊಳಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ 100 ಕೋ.ರೂ.ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಾಹೀರಾತು ಪ್ರಸಾರಕ್ಕೆ ತಡೆ : ಹೈಕೋರ್ಟ್‌ಗೆ ಬಿಜೆಪಿ ಮೊರೆ: ಟಿವಿ ಮಾಧ್ಯಮಗಳಲ್ಲಿ ಬಿಜೆಪಿಯ ಚುನಾವಣಾ ಜಾಹೀರಾತಿಗೆ ತಡೆ ನೀಡಿದ ಮುಖ್ಯ ಚುನಾವಣಾಧಿಕಾರಿಯ ಕ್ರಮ ಪ್ರಶ್ನಿಸಿ ಬಿಜೆಪಿ ಸಹ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿ ಪರ ಚುನವಾಣಾ ಪ್ರಚಾರಕ್ಕೆ ಸಂಬಂಧಿಸಿದ ವೀಡಿಯೋಗಳಿರುವ ಸಿ.ಡಿ.ಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿ, ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರಕ್ಕೆ ಅನುಮತಿ ಕೋರಲಾಗಿತ್ತು. ಆದರೆ ಜಾಹೀರಾತಿನಲ್ಲಿ ಮತ್ತೂಂದು ಪಕ್ಷವನ್ನು ಅವಹೇಳನ ಮಾಡುವ ಅಂಶಗಳಿವೆ. ಜತೆಗೆ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮ 199ರ ನಿಯಮ 6ರ ಉಲ್ಲಂಘನೆಯಾಗಿದೆ ಎಂದು ತಿಳಿಸಿ ಪ್ರಸಾರಕ್ಕೆ ಮೇ 4ರಂದು ತಡೆ ನೀಡಿದೆ. ಆದರೆ ಆಯೋಗ ಹೇಳಿದಂತೆ ಯಾವುದೇ ಆಕ್ಷೇಪಾರ್ಹ ಅಂಶಗಳು ಜಾಹೀರಾತಿನಲ್ಲಿ ಇಲ್ಲ . ಹೀಗಾಗಿ ಮುಖ್ಯಚುನಾವಣಾಧಿಕಾರಿ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.