Advertisement
ನಗರದ ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ಗುರುವಾರ ಬೆಳಗ್ಗೆ 10.30ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಸಿದ ಬಿಜೆಪಿ ಸಂಸದರು, ಶಾಸಕರು, ಮುಖಂಡರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಅಂತಿಮವಾಗಿ ಪ್ರಜಾತಂತ್ರ ವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಚೋಲೆ ಬಟೂರ ಉಪವಾಸ: ಪ್ರಧಾನಿ ಮೋದಿಯವರು ಕಟ್ಟುನಿಟ್ಟಿನ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಆದರೆ ಏ.9ರಂದು ಕಾಂಗ್ರೆಸ್ ನಡೆಸಿದ ಸತ್ಯಾಗ್ರಹದಲ್ಲಿ ರಾಹುಲ್ ಗಾಂಧಿ ಚೋಲೆ ಬಟೂರ (ಉತ್ತರ ಭಾರತ ಖಾದ್ಯ) ಸೇವಿಸಿ ನಂತರ ಉಪವಾಸ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಮುನ್ನ ಮೀನು, ಮಾಂಸ ತಿನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಬಾಲಂಗೋಚಿಗಳ ಪಕ್ಷ: ಸಣ್ಣಪುಟ್ಟ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿದ ನಂತರ ಕಾಂಗ್ರೆಸ್ ಮಂಡಿಸಿದೆ. ಹಾಗಾಗಿ ಕಾಂಗ್ರೆಸ್ ಮುಖ್ಯಧಾರೆಯ ಪಕ್ಷವಾಗಿ ಉಳಿಯದೆ ಸಣ್ಣಪುಟ್ಟ ಪಕ್ಷಗಳ ಬಾಲಂಗೋಚಿ ಪಕ್ಷವಾಗಿ ರೂಪುಗೊಂಡಿದೆ. ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಕರ್ನಾಟಕ 22ನೇ ಬಿಜೆಪಿ ರಾಜ್ಯವಾಗಲಿದೆ.
ರಾಹುಲ್ ಗಾಂಧಿ ಚುನಾವಣಾ ಭಕ್ತರು. ಚುನಾವಣೆಯಲ್ಲಿ ಓಟಿಗಾಗಿ ಭಕ್ತರಂತೆ ನಾಟಕವಾಡುತ್ತಿದ್ದಾರೆ. ಹವಾಮಾನಕ್ಕೆ ತಕ್ಕಂತೆ ಭಕ್ತರಾಗುತ್ತಾರೆ. ಜನತೆಗೆ ಈ ನಾಟಕ ಅರ್ಥವಾಗಲಿದ್ದು, ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಹೇಳಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ಪಾಲಿಕೆ ಬಿಜೆಪಿ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.
ಲೋಕಸಭೆಯಲ್ಲೇಕೆ ಪ್ರಸ್ತಾಪಿಸಲಿಲ್ಲ?: ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸುತ್ತಾರೆ. ಈ ಬಗ್ಗೆ ತಾಕತ್ತಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ಅಂಕಿಅಂಶಸಹಿತ ಪ್ರಸ್ತಾಪಿಸಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಬೇಕಿತ್ತು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸದನದೊಳಗೆ ಚರ್ಚಿಸದೆ ಪಲಾಯನ ಮಾಡಿ ಆರೋಪಿಸುವುದು ಸರಿಯಲ್ಲ. 13ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ 78,000 ಕೋಟಿ ರೂ. ಬಿಡುಗಡೆಯಾಗಿದ್ದರೆ, 14ನೇ ಹಣಕಾಸು ಆಯೋಗದಡಿ 2.12 ಲಕ್ಷ ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅಂಕಿಸಂಖ್ಯೆ ನೀಡಿದರು.
ರಾಹುಲ್ ಗಾಂಧಿ ಹೇಳಿದಂತೆ ಕಾಂಗ್ರೆಸ್- ಬಿಜೆಪಿ ನಡುವೆ ಸೈದ್ಧಾಂತಿಕ ಸಂಘರ್ಷವಿದೆ. ಕಾಂಗ್ರೆಸ್‌ನ ವಂಶಾಡಳಿತಕ್ಕೆ ಪ್ರತಿಯಾಗಿ ಬಿಜೆಪಿ ಪ್ರಜಾಪ್ರಭುತ್ವದ ಸಿದ್ಧಾಂತ ಪ್ರತಿಪಾದಿಸುತ್ತಿದೆ. ಕಾಂಗ್ರೆಸ್ ಧೋರಣೆ ಇದೇರೀತಿ ಮುಂದುವರಿದರೆ ಲೋಕಸಭಾ ಸದಸ್ಯರ ಸ್ಥಾನ 44ರಿಂದ 4ಕ್ಕೆ ಕುಸಿಯಲಿದೆ.-ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ ವಂಶಾಡಳಿತ, ಭ್ರಷ್ಟಾಚಾರಕ್ಕಷ್ಟೇ ನಮ್ಮ ವಿರೋಧ. ಕರ್ನಾಟಕದಲ್ಲೂ ಕಾಂಗ್ರೆಸ್ ಅದೇ ಹಾದಿಯಲ್ಲಿದೆ. ಈಗಾಗಲೇ ಕೌಂಟ್‌ಡೌನ್ ಶುರುವಾಗಿದ್ದು, ಫಲಿತಾಂಶ ಬಂದ ಬಳಿಕ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ. ರಾಹುಲ್ ಗಾಂಧಿ ಕಾಯಂ ಮನೆ ಸೇರಲಿದ್ದಾರೆ.
-ಮುರಳೀಧರ ರಾವ್, ಬಿಜೆಪಿ ರಾಜ್ಯ ಉಸ್ತುವಾರಿ