Advertisement

ಜಾತಿ ಲೆಕ್ಕಾಚಾರದಿಂದ ಕಾಂಗ್ರೆಸ್‌ ಬಲ ವೃದ್ಧಿ

12:55 PM May 14, 2019 | pallavi |

ಬೆಳಗಾವಿ: ಒಂದು ಕಡೆ ಕೃಷ್ಣಾ ನದಿ ಹಾಗೂ ಸಮೃದ್ಧ ಕೃಷಿ ಭೂಮಿ.ಇನ್ನೊಂದು ಕಡೆ ಬರಗಾಲದ ಸ್ಥಿತಿ ಅನುಭವಿಸುತ್ತಿರುವ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಲೋಕಸಭಾ ಚುನಾವಣೆಯ ಫಲಿತಾಂಶದ ಲೆಕ್ಕಾಚಾರ ಬಹಳ ಜೋರಾಗಿ ನಡೆದಿದೆ.

Advertisement

ಇಂಥವರೇ ಗೆಲ್ಲುತ್ತಾರೆ ಎಂದು ಖಚಿತವಾಗಿ ಯಾರೂ ಬಾಜಿ ಕಟ್ಟುತ್ತಿಲ್ಲ. ಆದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ವಲಯದಲ್ಲಿ ನಮಗೇ ಮುನ್ನಡೆ ಸಿಗುವುದು ಗ್ಯಾರಂಟಿ ಎಂಬ ಬಲವಾದ ವಿಶ್ವಾಸ ಎದ್ದು ಕಾಣುತ್ತಿದೆ.

2008 ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದಾಗ ಉದಯವಾದ ಕುಡಚಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಆಗ ಕಾಂಗ್ರೆಸ್‌ ನ ಶಾಮ ಘಾಟಗೆ ಬಹಳ ಪ್ರಯಾಸದಿಂದ ಅಂದರೆ ಕೇವಲ 766 ಮತಗಳಿಂದ ಬಿಜೆಪಿಯ ಮಹೇಂದ್ರ ತಮ್ಮಣ್ಣವರ ವಿರುದ್ದ ಗೆದ್ದಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಪಿ. ರಾಜೀವ 22,978 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆಗ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಎದುರಾಳಿಗಳಿಂದ ಭೀತಿ ಎದುರಾಗಿತ್ತು.

ಮುಂದೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಭಾವಕ್ಕೆ ಅಂತ್ಯಹಾಡಿದ ಪಿ. ರಾಜೀವ್‌ ಬಿಎಸ್‌ಆರ್‌ ಕಾಂಗ್ರೆಸ್‌ ಮೂಲಕ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿದರು. ಆಗ ಕಾಂಗ್ರೆಸ್‌ ಅಭ್ಯರ್ಥಿ ಶಾಮ ಘಾಟಗೆ ಹೀನಾಯ ಸೋಲು ಅನುಭವಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿನ ಭಿನ್ನಮತದ ಲಾಭ ಪಡೆದ ರಾಜೀವ್‌ ಕುಡಚಿ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿಕೊಂಡರು. ಇದೇ ವಿಶ್ವಾಸದ ಮೇಲೆ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆಯ ನಿರೀಕ್ಷೆ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಕುಡಚಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಬಹಳ ಕೆಲಸ ಮಾಡಿದೆ. ಕುರುಬರು. ಅಹಿಂದ ಹಾಗೂ ಮುಸ್ಲಿಮ್‌ ಮತದಾರರು ನಿರ್ಣಾಯಕರು. ಈ ಮೂರು ವರ್ಗಗಳು ಸುಮಾರು 1.50 ಲಕ್ಷ ಮತದಾರರನ್ನು ಹೊಂದಿದೆ. ಮೊದಲಿಂದಲೂ ಕಾಂಗ್ರೆಸ್‌ ಪಕ್ಷ ಬೆಂಬಲಿಸುತ್ತ ಬಂದಿರುವುದರಿಂದ ಈ ಮೂರು ವರ್ಗದ ಮತದಾರರು ತಮ್ಮ ಪರವಾಗಿದ್ದಾರೆ ಎಂಬುದು ಕಾಂಗ್ರೆಸ್‌ ನಾಯಕರ ಅಚಲ ವಿಶ್ವಾಸ.

Advertisement

ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಬಗ್ಗೆ ಆರಂಭದಲ್ಲಿ ಇದ್ದ ಅಸಮಾಧಾನ ಪ್ರಚಾರದ ಸಮಯದಲ್ಲಿ ಕಡಿಮೆಯಾಯಿತು. ಸಚಿವ ಸತೀಶ ಜಾರಕಿಹೊಳಿ ಉಸ್ತುವಾರಿ ಹಾಗೂ ಪ್ರಚಾರ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಸ ವಿಶ್ವಾಸ ಮೂಡಿಸಿದರೆ ಯುವ ನಾಯಕ ಅಮಿತ್‌ ಘಾಟಗೆ ನೇತೃತ್ವದಲ್ಲಿ ಯುವ ಪಡೆ ಪ್ರಚಾರ ಮಾಡಿತು. ಇದು ಕಾಂಗ್ರೆಸ್‌ಗೆ ಹೆಚ್ಚು ಮತಗಳನ್ನು ಪಡೆಯಲು ನೆರವಾಗಲಿದೆ ಎಂಬುದು ನಾಯಕರ ಹೇಳಿಕೆ.

ಇದರ ಜೊತೆಗೆ ಸ್ಥಳೀಯ ಬಿಜೆಪಿ ಶಾಸಕ ಒಮ್ಮೆಯೂ ತಮ್ಮ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಮಾಡದೆ ಕಲಬುರಗಿಯಲ್ಲಿ ಉಮೇಶ ಜಾಧವ ಪರ ಪ್ರಚಾರಕ್ಕೆ ಹೋಗಿದ್ದು ಬಿಜೆಪಿಗೆ ಹಿನ್ನಡೆ ಉಂಟುಮಾಡಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ವಲಯದಲ್ಲಿದೆ.

ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲ ವಾತಾವರಣ ಇದೆ. ಕನಿಷ್ಠ 15 ಸಾವಿರ ಮುನ್ನಡೆ ನಿರೀಕ್ಷೆ ಮಾಡಿದ್ದೇವೆ. ಜನರ ಮನಸ್ಸಿನಲ್ಲಿಯೂ ಬಿಜೆಪಿ ಬರಬೇಕು ಎಂಬ ಆಸೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಸಂಸದರು ನಮ್ಮ ಭಾಗಕ್ಕೆ ಬರಲಿಲ್ಲ. ಏನೂ ಕೆಲಸ ಮಾಡಿಲ್ಲ. ಕೇವಲ ತಮ್ಮ ಚಿಕ್ಕೋಡಿ ಕ್ಷೇತ್ರಕ್ಕೆ ಸೀಮಿತವಾಗಿದ್ದರು ಎಂಬ ಅಸಮಾಧಾನ ಇದೆ. ಇದು ನಮಗೆ ಅನುಕೂಲವಾಗಿದೆ.

• ಬಸನಗೌಡ ಎಂ. ಅಸಂಗಿ, ಬಿಜೆಪಿ ಬ್ಲಾಕ್‌ ಅಧ್ಯಕ್ಷ

ಕಾಂಗ್ರೆಸ್‌ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ನಮಗೆ 10 ರಿಂದ 15 ಸಾವಿರ ಮತಗಳ ಮುನ್ನಡೆ ನಿಶ್ಚಿತ. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲಾಗಿದೆ. ಆಗ ನಮ್ಮವರ ಭಿನ್ನಾಭಿಪ್ರಾಯದಿಂದ ಕ್ಷೇತ್ರ ಕಳೆದುಕೊಂಡಿದ್ದೆವು. ಲೋಕಸಭಾ ಚುನಾವಣೆ ಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮುಂದೆ ನಿಂತು ಪ್ರಚಾರ ಮಾಡಿದರು. ಇದರಿಂದ ನಮಗೆ ಲೀಡ್‌ ಬರಲಿದೆ.

• ರೇವಣ್ಣ ಸುರವ್‌, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ

ಕ್ಷೇತ್ರದಲ್ಲಿ ಬಿಜೆಪಿ ಪರ ವಾತಾವರಣ ಕಾಣುತ್ತಿದೆ. ಕನಿಷ್ಠ 20 ಸಾವಿರ ಮುನ್ನಡೆ ಬರಬಹುದು ಎಂಬುದು ನಮ್ಮ ಲೆಕ್ಕಾಚಾರ. ಕುಡಚಿಯಲ್ಲಿ ನರೆಂದ್ರ ಮೋದಿ ಅಲೆಗಿಂತಲೂ ಶಾಸಕರ ಪ್ರಭಾವ ಹಾಗೂ ಅವರ ಅಭಿವೃದ್ಧಿ ಕೆಲಸಗಳು ಜನರ ಮೇಲೆ ಬಹಳ ಪರಿಣಾಮ ಬೀರಿದಂತೆ ಕಾಣುತ್ತಿದೆ.

ಶ್ರೀಧರ ಉಮರಾಣಿ, ಕುಡಚಿ

ಕ್ಷೇತ್ರದಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣ ಕಂಡುಬಂದಿದೆ. ಆರಂಭದಲ್ಲಿ ನಾಯಕರ ಮಧ್ಯೆ ಒಗ್ಗಟ್ಟಿನ ಕೊರತೆ ಕಂಡುಬಂದಿತ್ತು. ಆದರೆ ಚಿvಕ್ಕೋಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ನಂತರ ವಾತಾವರಣ ಬದಲಾಗಿದೆ. ಇದರ ಜೊತೆಗೆ ಸ್ಥಳೀಯ ಶಾಸಕರ ಅಭಿವೃದ್ಧಿ ಕೆಲಸ ಸಹ ಮತದಾರರ ಮೇಲೆ ಪರಿಣಾಮ ಬೀರಿದೆ.

• ವಿರುಪಾಕ್ಷ ಕುಂಚನೂರ, ಕುಡಚಿ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next