Advertisement

ಚುನಾವಣೆ ಹೊಸ್ತಿಲಲ್ಲೇ ದೊಣ್ಣೆ ಕೊಟ್ಟು ಬಡಿಸಿಕೊಂಡ ಕಾಂಗ್ರೆಸ್‌

07:35 PM May 05, 2023 | Team Udayavani |

ಬೆಂಗಳೂರು: ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ ಮಾಡಿಕೊಳ್ಳುತ್ತಿರುವ ಎಡವಟ್ಟುಗಳ ಸರಮಾಲೆ ಚುನಾವಣೆಯಲ್ಲಿ ಅದಕ್ಕೆ ದುಬಾರಿಯಾಗುವುದೇ?
ಇಂಥದ್ದೊಂದು ಚರ್ಚೆ ಈಗ ಕಾಂಗ್ರೆಸ್‌ ಪಡಸಾಲೆಯಲ್ಲಿ ವ್ಯಾಪಕವಾಗಿ ನಡೆದಿದ್ದು, ಫ‌ಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ. ಚುನಾವಣ ಉತ್ಸಾಹ, ಹುಮ್ಮಸ್ಸಿನ ಮನೆಯಾಗಿದ್ದ ಕಾಂಗ್ರೆಸ್‌ ಪಾಳಯದಲ್ಲಿ ಅಸಮಾಧಾನದ ಜತೆಗೆ ಏನೋ ಒಂದು ರೀತಿಯ ಕಸಿವಿಸಿ ಮನೆ ಮಾಡಿದೆ. ಹತ್ತಿರಕ್ಕೆ ಬಂದು ಮುಗ್ಗರಿಸಿ ಬಿದ್ದಂತಹ ಅನುಭವದ ಮಾತುಗಳಂತೆ ವ್ಯಾಖ್ಯಾನಗಳು ಕಾಂಗ್ರೆಸ್‌ ವಲಯದಿಂದಲೇ ಕೇಳಿ ಬರುತ್ತಿವೆ.

Advertisement

ಟಿಕೆಟ್‌ ಹಂಚಿಕೆ ಬಳಿಕ ಉಂಟಾಗಿದ್ದ ಅಸಮಾಧಾನ, ಅತೃಪ್ತಿ, ಬಂಡಾಯವನ್ನು ಹೇಗೋ ಸಂಭಾಳಿಸಿಕೊಂಡು ಯೋಜಿತ ರೀತಿಯಲ್ಲಿ ಮುನ್ನಡೆಯುತ್ತಿದ್ದ ಕಾಂಗ್ರೆಸ್‌ ಕಳೆದ 15 ದಿನಗಳ ಅವಧಿಯಲ್ಲಿ ಮಾಡಿಕೊಂಡಿರುವ ಬಾಯಿತಪ್ಪಿನ ಎಡವಟ್ಟುಗಳು, ಪ್ರಣಾಳಿಕೆಯಲ್ಲಿನ ಪ್ರಸ್ತಾವಗಳು ಆಡಳಿತಾರೂಢ ಬಿಜೆಪಿ ಕೈಗೆ ಹೊಸ ಅಸ್ತ್ರ ಕೊಟ್ಟಂತಾಗಿದೆ. ಈಗ ಅನಗತ್ಯವಾಗಿ ದೊಣ್ಣೆ ಕೊಟ್ಟು ಬಡಿಸಿಕೊಂಡ ಸ್ಥಿತಿ ಕಾಂಗ್ರೆಸ್‌ನದ್ದಾಗಿದೆ. ಬಿಜೆಪಿ ಸರಕಾರದ ವಿರುದ್ಧ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ವಿಪಕ್ಷ ಕಾಂಗ್ರೆಸ್‌ ಅತ್ಯಂತ ಆಕ್ರಮಣಕಾರಿಯಾಗಿ ಹೋರಾಟ ನಡೆಸುತ್ತಲೇ ಬಂದಿದೆ.

ಅಸ್ತ್ರಗಳು ಯಾವುವು?
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ “ಲಿಂಗಾಯತ ಸಿಎಂ ಭ್ರಷ್ಟರು”, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ “ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ”, ಶಾಸಕ ಪ್ರಿಯಾಂಕ್‌ ಖರ್ಗೆ ಅವರ “ಮೋದಿ ನಾಲಾಯಕ್‌ ಪ್ರಧಾನಿ’ ಮುಂತಾದ ಹೇಳಿಕೆಗಳು ಪಕ್ಷಕ್ಕೆ ಹೊರೆಯಾಗಿವೆ. ಇನ್ನೊಂದೆಡೆ ಕಾಂಗ್ರೆಸ್‌ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿನ ಹಾಗೂ ನಿರ್ಣಾಯಕ ಕಾನೂನು ಕ್ರಮ ತೆಗೆದುಕೊಳ್ಳಲು ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಬಜರಂಗದಳ ಮತ್ತು ಪಿಎಫ್ಐಗಳು ಮುಂತಾದ ಸಂಘಟನೆಗಳ ನಿಷೇಧ ಪ್ರಸ್ತಾವವೂ ಭಾರೀ ಸುದ್ದಿ ಮಾಡುತ್ತಿದೆ. ಈ ನಿಷೇಧ ಪ್ರಸ್ತಾವವು ಈಗ ಕಾಂಗ್ರೆಸ್‌ಗೆ ತಿರುಗುಬಾಣವಾದಂತೆ ಕಾಣುತ್ತಿದೆ.

ಈ ಬಗ್ಗೆ ಪಕ್ಷದೊಳಗೆ ಮಿಶ್ರ ಅಭಿಪ್ರಾಯಗಳಿದ್ದರೂ ಬಹುತೇಕರು ಆಗಿರುವ ಎಡವಟ್ಟುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿಗೆ ಅನಗತ್ಯವಾಗಿ ನಾವೇ ಅಸ್ತ್ರಗಳನ್ನು ಕೊಟ್ಟಂತಾಗಿದೆ. ಇದನ್ನು ಬಿಜೆಪಿ ರಾಜಕೀಯವಾಗಿ ಬಹಳ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ನನಗೆ ಕಾಂಗ್ರೆಸ್‌ 91 ಸಲ ಬೈದಿದೆ ಎಂದು ಹೇಳುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ ಬಜರಂಗದಳ ನಿಷೇಧ ಪ್ರಸ್ತಾವವನ್ನು ಬಿಜೆಪಿಯು ಪ್ರಚಾರ ಸಭೆಗಳಲ್ಲಿ ದೊಡ್ಡ ಅಸ್ತ್ರವಾಗಿ ಬಳಸಿಕೊಂಡಿದೆ. ಈಗ ಇಡೀ ಬಿಜೆಪಿಯ ನಾಯಕರು, ಹಿಂದೂಪರ ಸಂಘಟನೆಗಳು ಎಲ್ಲೆಡೆ ಹನುಮಾನ್‌ ಚಾಲೀಸಾ ಪಠಿಸುವ ಮೂಲಕ ಕಾಂಗ್ರೆಸ್‌ ಅನ್ನು ಹಿಂದೂ ವಿರೋಧಿ, ಅಲ್ಪಸಂಖ್ಯಾಕರ ಒಲೈಕೆಯ ಪಕ್ಷವೆಂದು ಬಿಂಬಿಸುತ್ತಿರುವುದು ಕಾಂಗ್ರೆಸ್‌ ನಷ್ಟ ತರಲಿದೆ ಎಂಬ ಲೆಕ್ಕಾಚಾರ ನಡೆದಿದೆ.

ತಲೆಕೆಳಗಾದ ಲೆಕ್ಕಾಚಾರ
ರಾಜ್ಯದಲ್ಲಿರುವ 75 ಲಕ್ಷ ಮುಸ್ಲಿಂ ಮತಗಳು ಈ ಸಲ ಜೆಡಿಎಸ್‌ ಪಾಲಾಗುವುದನ್ನು ತಪ್ಪಿಸಲು ಕಾಂಗ್ರೆಸ್‌ ಬಜರಂಗದಳ ನಿಷೇಧ ವಿಷಯವನ್ನು ಪ್ರಸ್ತಾವಿಸಿದೆ. ಇದು ರಾಜ್ಯ ನಾಯಕರ ಹಂತದಲ್ಲಿ ಚರ್ಚೆಯೇ ಆಗಿಲ್ಲ. ರಾಜ್ಯದಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್‌ ಸಿಂಗ್‌ ಸುಜೇìವಾಲ ಅವರ ಸಲಹೆಯಂತೆ ಈ ಪ್ರಸ್ತಾವನೆ ಸೇರ್ಪಡೆಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದರ ಲಾಭ-ನಷ್ಟ ಎಲ್ಲವನ್ನೂ ದಿಲ್ಲಿ ನಾಯಕರ ತಲೆಗೆ ಕಟ್ಟುವ ಸಾಧ್ಯತೆಗಳಿವೆ. ಚುನಾವಣ ತಂತ್ರಗಾರಿಕೆ ತಂಡವೇ ಈ ಸಲಹೆ ನೀಡಿತ್ತು ಎಂಬ ಮಾತಿದೆ. ಈಗ ಧರ್ಮದ ವಿಚಾರ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್‌ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವ ಸಾಧ್ಯತೆಗಳಿವೆ ಎಂಬ ಆತಂಕ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ. ಇದರಿಂದ ಹೊರಬರುವುದು ಹೇಗೆ ಎಂದು ಯೋಚಿಸಲು ಸಹ ಸಮಯವಿಲ್ಲ, ಕಾರಣ ಮತದಾನಕ್ಕೆ ಉಳಿದಿರುವುದು ಕೇವಲ 4 ದಿನ ಮಾತ್ರ. ಹೀಗಾಗಿ ಕಾಂಗ್ರೆಸ್‌ ಇಕ್ಕಟ್ಟಿನಲ್ಲಿ ಸಿಲುಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next