Advertisement

ಕಾಂಗ್ರೆಸ್‌ಗೆ ಮತ ಹಾಕಲು ತುತ್ತೂರಿ ಊದುವೆ

12:39 PM Apr 29, 2018 | |

ಮೈಸೂರು: ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಮಾತ್ರ ನಮ್ಮ ಆಶಾಕಿರಣ. ಹೀಗಾಗಿ ಸಂವಿಧಾನ ಉಳಿಸಿ ಎನ್ನುವ ತುತ್ತೂರಿ ಊದುವ ಜತೆಗೆ ಕಾಂಗ್ರೆಸ್‌ಗೆ ಮತ ಹಾಕುವಂತೆ ತುತ್ತೂರಿ ಊದುತ್ತೇನೆಂದು ಮಾಧ್ಯಮ ಚಿಂತಕ ದಿನೇಶ್‌ ಅಮೀನ್‌ಮಟ್ಟು ಹೇಳಿದರು.

Advertisement

ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ಆಲಮ್ಮನ ಛತ್ರದ ಆವರಣದಲ್ಲಿ ಸಂವಿಧಾನ ಉಳಿಸಿ ವಿಚಾರ ಸಂಕಿರಣದ ಅಂಗವಾಗಿ ನಡೆದ ಸಾಮಾಜಿಕ-ಸಾಂಸ್ಕೃತಿಕ ಸವಾಲುಗಳು ವಿಷಯ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.

ಪತ್ರಿಕೆಯೊಂದರಲ್ಲಿ ಕಾಂಗ್ರೆಸ್‌ ತುತ್ತೂರಿಗಳು ಎಂದು ವರದಿಯೊಂದು ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ತುತ್ತೂರಿ ಊದಲೆಂದು ಇಲ್ಲಿಗೆ ಬಂದಿದ್ದೇನೆ. ಸಂವಿಧಾನಕ್ಕೆ ಧಕ್ಕೆ ಬಂದಾಗ ದನಿ ಎತ್ತುವುದು ನಮ್ಮ ಜವಾಬ್ದಾರಿ. ಹೀಗಾಗಿ ಸಂವಿಧಾನ ಉಳಿಸಿ ಎಂಬ ಕೂಗು ತುತ್ತೂರಿ ಎನ್ನುವುದಾದರೆ, ಬದುಕಿರುವರೆಗೆ ಆ ತುತ್ತೂರಿ ಊದುತ್ತೇನೆ ಎಂದರು.

ಚರ್ಚೆಗೆ ಸಿದ್ಧ: ಬಿಜೆಪಿ, ಜನಸಂಘ ಹಾಗೂ ಆರ್‌ಎಸ್‌ಎಸ್‌ ಇತಿಹಾಸದ ಉದ್ದಕ್ಕೂ ಸಂವಿಧಾನದ ಯಾವ ಆಶಯವನ್ನು ಜಾರಿಗೆ ತಂದಿಲ್ಲ. ಸಂವಿಧಾನ ಕುರಿತು ಗೌರವವಿದ್ದರೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ ಅನಂತಕುಮಾರ್‌ ಹೆಗಡೆ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕಿತ್ತು.

ಈ ಬಗ್ಗೆ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದೇವೆ. ದೇಶದಲ್ಲಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಎಂದಿಗೂ ಸಂವಿಧಾನ ವಿರುದ್ಧವಾಗಿ ಮಾತನಾಡಿಲ್ಲ. ಈ ರೀತಿಯ ಯಾವುದೇ ಪ್ರಕರಣಗಳಿದ್ದರೆ ಚರ್ಚೆಗೆ ಸಿದ್ಧ ಎಂದರು.

Advertisement

ಸಾಹಿತಿಗಳಾದ ಡಾ.ಕೆ.ಮರಳಸಿದ್ದಪ್ಪ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಪ್ರೊ.ಕಾಳೇಗೌಡ ನಾಗವಾರ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮು, ಪ್ರಗತಿಪರ ಚಿಂತಕ ಕೆ.ಆರ್‌. ಗೋಪಾಲಕೃಷ್ಣ, ದಸಂಸ ಮುಖಂಡ ಆಲಗೂಡು ಶಿವಣ್ಣ, ರಾಜಶೇಖರ ಕೋಟೆ ಇದ್ದರು.

ಬಿಜೆಪಿ, ಮೋದಿ ವಿರುದ್ಧ ಟೀಕೆ: ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿ, ಕಾಂಗ್ರೆಸ್‌ ಬೆಂಬಲಿಸುವಂತೆ ಪರೋಕ್ಷವಾಗಿ ಚಿಂತಕ ಪ. ಮಲ್ಲೇಶ್‌ ಮನವಿ ಮಾಡಿದರು. ದೇಶಕ್ಕೆ ಪ್ರಧಾನಿಯಾಗಬೇಕಾದ ನರೇಂದ್ರ ಮೋದಿ, ಬಿಜೆಪಿ ಪ್ರಧಾನಿಯಾಗಿ, ತಮ್ಮ ಜವಾಬ್ದಾರಿ ಮರೆತಿದ್ದು, ಅವರನ್ನು ಪ್ರಶ್ನಿಸಬೇಕಿದೆ.

ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ನ್ಯೂನತೆಗಳಿದ್ದರೂ ಒಳ್ಳೆಯ ಕೆಲಸಗಳನ್ನು ಮಾಡಿದೆ. ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದು, ಅವರ ವಿರುದ್ಧ ಒಂದೇ ಒಂದು ಕೆಟ್ಟ ಕಥೆ ಇಲ್ಲ. ಹೀಗಾಗಿ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯರನ್ನು ಟೀಕಿಸಲು ಯಾವುದೇ ವಿಷಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಚುನಾವಣಾಧಿಕಾರಿ ತಡೆ: ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜಿಸಿದ್ದ ಕಾರಣಕ್ಕೆ ಚುನಾವಣಾಧಿಕಾರಿಗಳು ಕಾರ್ಯಕ್ರಮಕ್ಕೆ ತಡೆಯೊಡ್ಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಸ್ಥಳಕ್ಕಾಗಮಿಸಿದ ಚುನಾವಣಾಧಿಕಾರಿಗಳು, ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸುವಂತೆ ಆಯೋಜಕರಿಗೆ ತಾಕೀತು ಮಾಡಿದರು.

ಆಯೋಜಕರು ರದ್ದುಪಡಿಸಲು ಆಕ್ಷೇಪ ವ್ಯಕ್ತಪಡಿಸಿದರೂ ಕೇಳದೆ, ಕೂಡಲೇ ನಿಲ್ಲಿಸಬೇಕೆಂದು ತಾಕೀತು ಮಾಡಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗಾಗಿ ತಯಾರಿಸಿದ್ದ ಊಟದ ವಿತರಣೆಗೂ ಅಧಿಕಾರಿಗಳು ಅಡ್ಡಿಪಡಿಸಿದರು. ಕೊನೆಗೆ ಪೊಲೀಸರ ಎದುರು ಊಟ ಬಡಿಸಲು ಅವಕಾಶ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next