ಕಲಬುರಗಿ: ಮಹಾರಾಷ್ಟ್ರದಲ್ಲಿ ಐವತ್ತು ಸೀಟ್ ಕೂಡಾ ಗೆಲ್ಲಕ್ಕಾಗಲ್ಲ. ಐವತ್ತಕ್ಕಿಂತ ಹೆಚ್ಚು ಸೀಟ್ ಗೆದ್ರೆ ನಾನು ರಾಜೀನಾಮೆ ಕೊಡ್ತೀನಿ, ಐವತ್ತಕ್ಕಿಂತ ಕಡಿಮೆ ಸೀಟ್ ಬಂದರೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ? ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೀಚ ರಾಜಕಾರಣ ಮಾಡ್ತಿದಾರೆ. ಅದೇ ರೀತಿ ದಿನೇಶ್ ಗುಂಡೂರಾವ್ ಸಹ ಟೀಕೆಗಳನ್ನ ಮಾಡುತ್ತಿದ್ದಾರೆ ಎಂದರು.
ಬೇರೆ ಜಿಲ್ಲೆಯ ಗೋವಿಂದ ಕಾರಜೋಳರನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಿದ್ದಾರೆ, ಹೊರಗಿನವರನ್ನ ಮಾಡಿದ್ದಾರೆ ಎಂದು ಕೆಲವರು ಟೀಕೆ ಮಾಡ್ತಾರೆ. ಹಾಗಾದರೆ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವ ದೇಶದವರು? ಎಂದು ಖಾರವಾಗಿ ಪ್ರಶ್ನಿಸಿದರು.
ವೀರ್ ಸಾವರ್ಕರ್ ಗೆ ಭಾರತ ರತ್ನ ಕೊಡಬೇಕೆಂಬುದು ಚರ್ಚೆಯಲ್ಲಿದೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಹಾತ್ಮ ಗಾಂಧೀಜಿ ಹತ್ಯೆಗೆ ಸಾವರ್ಕರ್ ಸಂಚು ರೂಪಿಸಿದ್ದರೆಂದು ಹೇಳಿಕೆ ಕೊಟ್ಟಿದ್ದಾರೆ. ಇವರೇನು ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಸ್ಟಡಿ ಮಾಡಿದ್ದಾರಾ? ಮಹಾತ್ಮ ಗಾಂಧಿ ಹತ್ಯೆಯಲ್ಲಿ ಸಾವರ್ಕರ್, ಆರ್ ಎಸ್ ಎಸ್ ಪಾತ್ರ ಇಲ್ಲ ಅಂತಾ ನ್ಯಾಯಾಲಯವೇ ಹೇಳಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಗೆ ನಾಚಿಕೆಯಾಗೇಕು, ಸ್ವಾತಂತ್ರ್ಯ ಹೋರಾಟದ ಗಂಧಗಾಳಿ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ವೀರ್ ಅಂತಾ ಬಿರುದು ಬಂದಿದ್ದು ಸಾವರ್ಕರ್ ಗೆ ಮಾತ್ರ. ಸಿದ್ದರಾಮಯ್ಯ ಇನ್ನೊಮ್ಮೆ ಸ್ವಾತಂತ್ರ್ಯ ಹೋರಾಟ ಬಗ್ಗೆ ಓದಿ ತಿಳಿದುಕೊಳ್ಳಲಿ. ಭಾರತ ರತ್ನವನ್ನು ಗಾಂಧಿ ಫ್ಯಾಮಿಲಿಗೆ ಕೊಡಬೇಕು ಅಂತಾ ಬರೆದುಕೊಟ್ಟಿದ್ದಾರಾ? ಅಂಬೇಡ್ಕರ್ ಅವರಿಗೆ ಏಕೆ ಭಾರತ ರತ್ನ ಕೊಡಲಿಲ್ಲ ಅಂತಾ ರವಿಕುಮಾರ್ ಪ್ರಶ್ನಿಸಿದರು.